ಮದುವೆಯ ಭರವಸೆ ನೀಡಿ ದೈಹಿಕ ಸಂಪರ್ಕ ಆರೋಪ: ಮಹಿಳೆ ಮೇಲೆ ಹಲ್ಲೆ, ಬೆಳ್ತಂಗಡಿ ಮೂಲದ ಯುವ ವಕೀಲನ ವಿರುದ್ಧ ಪ್ರಕರಣ ದಾಖಲು

ಬೆಳ್ತಂಗಡಿ/ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ಮದುವೆಯಾಗಲು ನಿರಾಕರಿಸಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಬೆಳ್ತಂಗಡಿ ಮೂಲದ ಯುವ ವಕೀಲನ ವಿರುದ್ಧ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಕಟ್ಟಿಲೊಡ್ಡಿ ನಿವಾಸಿ ಜಿಜೊ ಪೌಲ್ ಅವರ ಮಗ, ಪ್ರಸ್ತುತ ಬೆಳ್ತಂಗಡಿ, ಮಂಗಳೂರು ಹಾಗೂ ಬೆಂಗಳೂರಿನಲ್ಲಿ ವಕೀಲ ವೃತ್ತಿ ನಡೆಸುತ್ತಿರುವ ಜಿತಿನ್ ಜಿಜೋ (26) ಎಂಬಾತನೇ ಆರೋಪಿಯಾಗಿದ್ದಾನೆ.

ಪ್ರಕರಣದ ಹಿನ್ನೆಲೆ: ಬೆಂಗಳೂರು ನಿವಾಸಿಯಾಗಿರುವ 36 ವರ್ಷದ ಮಹಿಳೆಯು 2021ರಲ್ಲಿ ವಿವಾಹವಾಗಿದ್ದು, ಪತಿಯೊಂದಿಗಿನ ಭಿನ್ನಾಭಿಪ್ರಾಯದ ಕಾರಣ ನ್ಯಾಯಾಲಯದಲ್ಲಿ ಗೃಹಹಿಂಸೆ (Domestic Violence) ದಾವೆ ಹೂಡಿದ್ದರು. ಈ ವೇಳೆ, 2025ರ ಫೆಬ್ರವರಿಯಲ್ಲಿ ಯಲಹಂಕದಲ್ಲಿ ವಾಸವಿದ್ದ ವಕೀಲ ಜಿತಿನ್ ಜಿಜೊ ಪರಿಚಯವಾಗಿ, ಅವರನ್ನೇ ತಮ್ಮ ಪ್ರಕರಣದ ವಕೀಲರನ್ನಾಗಿ ನೇಮಿಸಿಕೊಂಡಿದ್ದರು. ಪ್ರಕರಣದ ವಿಚಾರವಾಗಿ ಮಾತನಾಡುತ್ತಾ ಜಿತಿನ್ ಜಿಜೋ ಮಹಿಳೆಯನ್ನು ಪ್ರೀತಿಸುವುದಾಗಿ ತಿಳಿಸಿ, ಪತಿಯಿಂದ ಶೀಘ್ರವೇ ವಿಚ್ಛೇದನ ಕೊಡಿಸಿ ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಅಲ್ಲದೆ ಮಹಿಳೆ ವಾಸವಿದ್ದ ಕಟ್ಟಡದ 3ನೇ ಮಹಡಿಯಲ್ಲಿ ಬಾಡಿಗೆಗೆ ಮನೆ ಪಡೆದು, ಆಗಾಗ್ಗೆ ಅವರ ಮನೆಗೆ ಬಂದು ಆಕೆಯ ಇಷ್ಟವಿಲ್ಲದಿದ್ದರೂ ಲೈಂಗಿಕ ಸಂಪರ್ಕ ಬೆಳೆಸುತ್ತಿದ್ದ ಎನ್ನಲಾಗಿದೆ.

ಸಂಶಯ, ಸಾಕ್ಷ್ಯ ನಾಶ ಹಾಗೂ ಕೊಲೆಗೆ ಯತ್ನ: 2026ರಲ್ಲಿ ಮಹಿಳೆಗೆ ಪತಿಯಿಂದ ವಿಚ್ಛೇದನ ಲಭಿಸಿದ ಬಳಿಕ, ಜಿತಿನ್ ಆಕೆಯ ಮೇಲೆ ಅನುಮಾನ ಪಡಲು ಪ್ರಾರಂಭಿಸಿ ನಿಂದಿಸುತ್ತಿದ್ದ. ಸೆಪ್ಟೆಂಬರ್ 2 ರಂದು ಮಹಿಳೆಯ ಮನೆಗೆ ಬಂದ ಆರೋಪಿ, ಆಕೆಯ ಮೊಬೈಲ್‌ನಲ್ಲಿದ್ದ ‘Signal App’ ಸಂಭಾಷಣೆ ಹಾಗೂ ಮದುವೆಯ ಭರವಸೆ ನೀಡಿದ್ದ ಪ್ರಮುಖ ಸಾಕ್ಷ್ಯಗಳನ್ನು ಉದ್ದೇಶಪೂರ್ವಕವಾಗಿ ಅಳಿಸಿಹಾಕಿದ್ದ. ಇದನ್ನು ಪ್ರಶ್ನಿಸಿದ್ದಕ್ಕೆ ಆಕ್ರೋಶಗೊಂಡ ಆರೋಪಿ, “ನನ್ನ ವಕೀಲ ವೃತ್ತಿಗೆ ಅವಮಾನವಾಗುತ್ತದೆ, ನಿನ್ನನ್ನು ಕೊಲ್ಲುತ್ತೇನೆ” ಎಂದು ಬೆದರಿಕೆಯೊಡ್ಡಿ, ಮೈಮೇಲಿದ್ದ ಬಟ್ಟೆ ಹರಿದು, ಮುಖ, ಎದೆ, ಬೆನ್ನಿನ ಭಾಗಗಳಿಗೆ ನಿರಂತರವಾಗಿ ಹೊಡೆದು, ದೇಹಕ್ಕೆ ಕಚ್ಚಿ ವಿಕೃತ ಮೆರೆದಿದ್ದಾನೆ. ಅಲ್ಲದೆ ಕೋಣೆಯಲ್ಲಿದ್ದ ಸ್ಟ್ಯಾಂಡ್ ಫ್ಯಾನ್‌ನಿಂದ ಹಲ್ಲೆ ನಡೆಸಿ, ವೇಲ್‌ನಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲ್ಲಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಹೇಗೋ ಆತನಿಂದ ತಪ್ಪಿಸಿಕೊಂಡು ಓಡಿಬಂದು ಸಮೀಪದ ಎನ್‌ಆರ್‌ಆರ್ (N.R.R) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಪೊಲೀಸ್ ದೂರು – ಆರೋಪಿ ನಾಪತ್ತೆ: ಘಟನೆಗೆ ಸಂಬಂಧಿಸಿ ಸಂತ್ರಸ್ತೆ ನೀಡಿದ ದೂರಿನನ್ವಯ ಸೆಪ್ಟೆಂಬರ್ 3 ರಂದು ಬಾಗಲಗುಂಟೆ ಪೊಲೀಸರು ಜಿತಿನ್ ಜಿಜೊ ವಿರುದ್ಧ BNS-2023 ರ ವಿವಿಧ ಸೆಕ್ಷನ್‌ಗಳಡಿ (u/s 69, 126(2), 115(2), 118(1), 74, 351(2), 352, 238) ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಜಿತಿನ್ ಜಿಜೊ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಪತ್ತೆಗೆ ಜಾಲ ಬೀಸಿದ್ದಾರೆ

Star Of Kudla

Learn More →

Leave a Reply

Your email address will not be published. Required fields are marked *