ಜೈಲಲ್ಲಿ ‘ರೇಟ್ ಕಾರ್ಡ್’ ದಂಧೆ: ಸೆಲ್‌ಗೆ ಬಾಡಿಗೆ, ಮಟನ್‌ಗೆ ₹1,250, ಚಿಕನ್‌ಗೆ ₹700, ಹಣ ನೀಡಿದ್ರೆ ಲಭ್ಯವಿದೆ ಕ್ಯಾಟರಿಂಗ್ ವ್ಯವಸ್ಥೆ..!! ಕೈದಿಗಳ ವಿಶೇಷ ಆತಿಥ್ಯಕ್ಕೆ ರೇಟ್ ಫಿಕ್ಸ್

ಮಂಡ್ಯ ಜಿಲ್ಲಾ ಕಾರಾಗೃಹದಲ್ಲಿ ಸಕಲ ಸವಲತ್ತು, ಊಟ-ಉಪಚಾರ ಹಾಗೂ ಸೆಲ್‌ಗಳನ್ನು ಕಲ್ಪಿಸಲು ಪ್ರತ್ಯೇಕ ದರ ನಿಗದಿಪಡಿಸಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿಚಾರಣಾಧೀನ ಖೈದಿಗಳು ಬರೆದಿದ್ದಾರೆ ಎನ್ನಲಾದ ‘ರೇಟ್ ಲಿಸ್ಟ್’ ಸಮೇತದ ದೂರು ಪತ್ರವೊಂದು ಇದೀಗ ಭಾರೀ ವೈರಲ್ ಆಗಿದೆ.

ಜೈಲಾಧಿಕಾರಿ ಶಾಂತಮ್ಮ ಹಾಗೂ ಸಿಬ್ಬಂದಿಗಳಾದ ಅನಿಲ್, ಶಿವರಾಜ್ ಮತ್ತು ರವಿ ವಿರುದ್ಧ ಸುಮಾರು 80 ಕ್ಕೂ ಹೆಚ್ಚು ವಿಚಾರಣಾಧೀನ ಖೈದಿಗಳು ತಮ್ಮ ಯುಟಿಪಿ (UTP) ನಂಬರ್, ಸಹಿ ಹಾಗೂ ಹೆಬ್ಬೆಟ್ಟಿನ ಮುದ್ರೆ ಹಾಕಿ ದೂರು ರವಾನಿಸಿದ್ದಾರೆ. ಕಾರಾಗೃಹದಲ್ಲಿ ಒಂದೊಂದು ಸೆಲ್‌ಗೂ ಒಂದೊಂದು ದರ ನಿಗದಿಪಡಿಸಲಾಗಿದ್ದು, ಮಾಸಿಕ ವಸೂಲಿ ದಂಧೆ ರಾಜಾರೋಷವಾಗಿ ನಡೆಯುತ್ತಿದೆ ಎಂದು ಖೈದಿಗಳು ಪತ್ರದಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ಸೆಲ್ – 1 ರಿಂದ ಪ್ರತಿ ತಿಂಗಳು: ₹10,000

ಸೆಲ್ – 3 ರಿಂದ ಪ್ರತಿ ತಿಂಗಳು: ₹15,000

ಸೆಲ್ – 4 ರಿಂದ ಪ್ರತಿ ತಿಂಗಳು: ₹15,000

ಸೆಲ್ – 5 ರಿಂದ ಪ್ರತಿ ತಿಂಗಳು: ₹5,000

ಸೆಲ್ – 6 ರಿಂದ ಪ್ರತಿ ತಿಂಗಳು: ₹8,000

ಸಾಮಾನ್ಯ ಕೊಠಡಿ ಬದಲಾವಣೆಗೆ: ₹2,000

ಶಿಕ್ಷೆಯ ಸೆಲ್‌ನಿಂದ (Punishment Cell) ಹೊರಬರಲು: ₹10,000

ಜೈಲು ಸಿಬ್ಬಂದಿ ಕೇವಲ ಕೊಠಡಿಗಳಿಗೆ ಮಾತ್ರವಲ್ಲದೆ, ಖೈದಿಗಳಿಗೆ ಸ್ಪೆಷಲ್ ಮಾಂಸಾಹಾರ ಪೂರೈಸುವ ಕ್ಯಾಟರಿಂಗ್ ದಂಧೆಯನ್ನೂ ನಡೆಸುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಹೊರಗಿನ ಬೆಲೆಗಿಂತ ದುಪ್ಪಟ್ಟು ಹಣ ಪಡೆದು ಜೈಲಿನಲ್ಲೇ ಅಡುಗೆ ಮಾಡಿಸಿಕೊಡಲಾಗುತ್ತಿದ್ದು, ಚಿಕನ್ ಬೇಕಿದ್ದರೆ ಪ್ರತಿ ಕೆಜಿಗೆ ₹700 ಹಾಗೂ ಮಟನ್‌ಗೆ ಪ್ರತಿ ಕೆಜಿಗೆ ₹1,250 ವಸೂಲಿ ಮಾಡಲಾಗುತ್ತಿದೆ ಎಂಬ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.

ಕೇಳಿದಷ್ಟು ಹಣ ನೀಡದಿದ್ದರೆ ಖೈದಿಗಳನ್ನು ಶಿಕ್ಷೆಯ ಸೆಲ್‌ಗೆ ಹಾಕಿ, ‘ಕಮಾನು ಹತ್ತಿಸಿ’ ಹಿಂಸೆ ನೀಡುವುದಾಗಿ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಪತ್ರದಲ್ಲಿ ಅಳಲು ತೋಡಿಕೊಳ್ಳಲಾಗಿದೆ. ಸಾಲು ಸಾಲು ಅಕ್ರಮಗಳಿಂದ ಮಂಡ್ಯ ಜೈಲು ಸುದ್ದಿಯಾಗುತ್ತಿದ್ದು, ಈ ರೇಟ್ ಲಿಸ್ಟ್ ಪತ್ರ ಕಾರಾಗೃಹ ಇಲಾಖೆಯಲ್ಲಿ ತಲ್ಲಣ ಸೃಷ್ಟಿಸಿದೆ. ಈ ಸಂಬಂಧ ಉನ್ನತ ಮಟ್ಟದ ತನಿಖೆ ನಡೆಸಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.

Star Of Kudla

Learn More →

Leave a Reply

Your email address will not be published. Required fields are marked *