ಕೋಟೆಕಾರು ಪಟ್ಟಣ ಪಂಚಾಯತ್‌ನಲ್ಲಿ 3,744 ಪುಟಗಳಿಂದ 1,485 ಪುಟಗಳಿಗೆ ಇಳಿದ ದಾಖಲೆ!-“ಕಣ್ಣುತಪ್ಪಿನಿಂದ” ದಾಖಲೆಗಳ ಲೆಕ್ಕ ತಪ್ಪಿದರೆ, ಕಾಮಗಾರಿಗಳ ಹಣದ ಲೆಕ್ಕವೂ ತಪ್ಪಿದೆಯೇ?

ಕೋಟೆಕಾರು: ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಅನುದಾನಗಳಡಿ ನಡೆದ ಕಾಮಗಾರಿಗಳಿಗೆ ಸಂಬಂಧಿಸಿದ ದಾಖಲೆಗಳ ಕುರಿತು ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಮಾಹಿತಿಯಲ್ಲಿ ಗಂಭೀರ ವ್ಯತ್ಯಾಸವೊಂದು ಬೆಳಕಿಗೆ ಬಂದಿದೆ.

MP, MLA, MLC, CSR, 15ನೇ ಹಣಕಾಸು ಹಾಗೂ SFC ನಿಧಿಗಳಡಿ ವಾರ್ಡ್ 3, 6 ಮತ್ತು 7ರಲ್ಲಿ 2021ರಿಂದ ಕೈಗೊಂಡಿರುವ ಕಾಮಗಾರಿಗಳಿಗೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆ, ಗುತ್ತಿಗೆದಾರರ ವಿವರ, ಕಾರ್ಯಾದೇಶ, ಅನುದಾನ ಬಿಡುಗಡೆ, ಬಿಲ್ ಪಾವತಿ, ಎಂ.ಬಿ. ಪುಸ್ತಕ, ತಾಂತ್ರಿಕ ಹಾಗೂ ಆಡಳಿತಾತ್ಮಕ ಅನುಮೋದನೆ ಸೇರಿದಂತೆ ಹಲವು ದಾಖಲೆಗಳನ್ನು RTI ಮೂಲಕ ಕೋರಿದು.

ಈ ಮಾಹಿತಿಗೆ ಸಂಬಂಧಿಸಿದ ದಾಖಲೆಗಳು 3,744 ಪುಟಗಳಷ್ಟು ಇವೆ ಎಂದು ಮೊದಲು ತಿಳಿಸಲಾಗಿತ್ತು. ಆದರೆ ನಂತರ ಕಿರಿಯ ಅಭಿಯಂತರರ ವರದಿ ಆಧಾರದಲ್ಲಿ ದಾಖಲೆಗಳನ್ನು ಮರು ಎಣಿಕೆ ಮಾಡಿದಾಗ, ಕಾಮಗಾರಿಗಳ ಕಡತಗಳಲ್ಲಿ ಒಟ್ಟು 1,485 ಪುಟಗಳಷ್ಟು ದಾಖಲೆಗಳಷ್ಟೇ ಇವೆ ಎಂದು ಪಟ್ಟಣ ಪಂಚಾಯತ್ ತಿಳಿಸಿದೆ.

ಈ ಹಿಂದೆ 1,229 ಪುಟಗಳನ್ನು ನೀಡಲಾಗಿದ್ದು, ಉಳಿದ 256 ಪುಟಗಳನ್ನು ಇದೀಗ ನೀಡಲಾಗುತ್ತಿದೆ ಎಂದು ಪಂಚಾಯತ್ ತನ್ನ ಪತ್ರದಲ್ಲಿ ಸ್ಪಷ್ಟಪಡಿಸಿದೆ. 3,744 ಪುಟಗಳಿಂದ 1,485 ಪುಟಗಳಿಗೆ ದಾಖಲೆಗಳ ಸಂಖ್ಯೆ ಇಳಿದಿರುವುದಕ್ಕೆ ಕಾರಣವಾಗಿ “ಕಣ್ಣತ್ತಪ್ಪಿನಿಂದ ಉಂಟಾಗಿರುವ ತಪ್ಪು” ಎಂದು ಕಿರಿಯ ಅಭಿಯಂತರರ ವರದಿಯನ್ನು ಉಲ್ಲೇಖಿಸಲಾಗಿದೆ.

ಆದರೆ ಇಲ್ಲಿ ಸಾರ್ವಜನಿಕರಲ್ಲಿ ಹಲವು ಪ್ರಶ್ನೆಗಳು ಮೂಡುತ್ತಿವೆ. ದಾಖಲೆಗಳ ಪುಟಗಳ ಎಣಿಕೆಯಲ್ಲೇ 2,259 ಪುಟಗಳಷ್ಟು ವ್ಯತ್ಯಾಸ ಕಂಡುಬಂದಿರುವಾಗ, ಕಾಮಗಾರಿಗಳಿಗೆ ಸಂಬಂಧಿಸಿದ ಹಣಕಾಸಿನ ದಾಖಲೆಗಳು, ಬಿಲ್‌ಗಳು, ಎಂ.ಬಿ. ಪುಸ್ತಕಗಳು ಹಾಗೂ ಅನುಮೋದನೆಗಳ ಲೆಕ್ಕಾಚಾರದಲ್ಲಿ ಯಾವುದೇ ತಪ್ಪು ಅಥವಾ ದಾಖಲೆಗಳ ಕೊರತೆ ಉಂಟಾಗಿದೆಯೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ.

“ಕಣ್ಣುತಪ್ಪಿನಿಂದ ಪುಟಗಳ ಲೆಕ್ಕ ತಪ್ಪಬಹುದು; ಆದರೆ ಕೋಟ್ಯಂತರ ರೂಪಾಯಿ ಮೌಲ್ಯದ ಕಾಮಗಾರಿಗಳ ಹಣಕಾಸಿನ ದಾಖಲೆಗಳಲ್ಲೂ ಇದೇ ರೀತಿಯ ಕಣ್ಣುತಪ್ಪು ಸಂಭವಿಸಿದರೆ ಅದರ ಹೊಣೆ ಯಾರು?” ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ವಿಶೇಷವಾಗಿ ಕಾಮಗಾರಿಗಳ ಅಂದಾಜು ಮೊತ್ತ, ಆಡಳಿತಾತ್ಮಕ ಅನುಮೋದನೆ, ತಾಂತ್ರಿಕ ಅನುಮೋದನೆ, ಕಾರ್ಯಾದೇಶ, ಗುತ್ತಿಗೆ ಮೊತ್ತ, ಬಿಲ್ ಪಾವತಿ ಹಾಗೂ ಎಂ.ಬಿ. ಪುಸ್ತಕದಲ್ಲಿನ ದಾಖಲಾತಿಗಳು ಪರಸ್ಪರ ಹೊಂದಿಕೆಯಾಗುತ್ತವೆಯೇ ಎಂಬುದನ್ನು ಪರಿಶೀಲಿಸಬೇಕಾಗಿದೆ.

ದಾಖಲೆಗಳ ಸಂಖ್ಯೆಯಲ್ಲಿ ಇಷ್ಟೊಂದು ದೊಡ್ಡ ವ್ಯತ್ಯಾಸ ಕಂಡುಬಂದಿರುವ ಹಿನ್ನೆಲೆಯಲ್ಲಿ, ಕೇವಲ “ಕಣ್ಣತ್ತಪ್ಪಿನಿಂದಾದ ತಪ್ಪು” ಎಂದು ಹೇಳುವುದರಿಂದ ಪ್ರಕರಣ ಮುಕ್ತಾಯವಾಗಬಾರದು. ಸಂಬಂಧಿಸಿದ ಎಲ್ಲಾ ಮೂಲ ಕಡತಗಳನ್ನು ಪರಿಶೀಲಿಸಿ, ಯಾವ ಕಾಮಗಾರಿಗೆ ಎಷ್ಟು ಅನುದಾನ ಮಂಜೂರಾಗಿದೆ, ಎಷ್ಟು ಹಣ ಬಿಡುಗಡೆಯಾಗಿದೆ, ಎಷ್ಟು ಹಣ ಬಿಲ್ ಮೂಲಕ ಪಾವತಿಸಲಾಗಿದೆ ಹಾಗೂ ಕಾಮಗಾರಿ ವಾಸ್ತವವಾಗಿ ಎಷ್ಟು ಪ್ರಮಾಣದಲ್ಲಿ ನಡೆದಿದೆ ಎಂಬುದನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕೆಂಬ ಆಗ್ರಹ ಕೇಳಿಬರುತ್ತಿದೆ.

ದಾಖಲೆಗಳ ಪುಟಗಳ ಲೆಕ್ಕದಲ್ಲೇ ತಪ್ಪಾಗಿದ್ದರೆ, ಕಾಮಗಾರಿಗಳ ಹಣದ ಲೆಕ್ಕದಲ್ಲೂ ತಪ್ಪಾಗಿರುವ ಸಾಧ್ಯತೆ ಇದೆಯೇ? ಎಂಬ ಅನುಮಾನಕ್ಕೆ ಅಧಿಕಾರಿಗಳು ದಾಖಲೆಗಳ ಮೂಲಕವೇ ಉತ್ತರ ನೀಡಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಕಾಮಗಾರಿಗಳ ಸಂಪೂರ್ಣ ಕಡತಗಳನ್ನು ಸಮಗ್ರವಾಗಿ ಪರಿಶೀಲಿಸಿ, ದಾಖಲೆಗಳಲ್ಲಿನ ವ್ಯತ್ಯಾಸ ಹಾಗೂ ಹಣಕಾಸಿನ ವ್ಯವಹಾರಗಳ ಬಗ್ಗೆ ಪಾರದರ್ಶಕ ತನಿಖೆ ನಡೆಸಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ.

News Editor

Learn More →

Leave a Reply

Your email address will not be published. Required fields are marked *