
ದಕ್ಷಿಣಕನ್ನಡ: ಕಳೆದೆರಡು ದಿನಗಳಿಂದ ನೆಕ್ಕಿಲಾಡಿ ಬಿಳಿಯೂರು ಪರಿಸರದಲ್ಲಿ ಕಾಣಿಸುತ್ತಿದ್ದ ಜೋಡಿ ಕಾಡಾನೆಗಳು ಆದಿತ್ಯವಾರ ಮುಂಜಾನೆಯಿಂದ ಉಪ್ಪಿನಂಗಡಿಯ ನೇತ್ರಾವತಿ ನದಿಯಲ್ಲಿ ವಿಹರಿಸುತ್ತಿದ್ದು, ನದಿಯ ಉಭಯ ದಿಕ್ಕಿನಲ್ಲೂ ಜಮಾಯಿಸಿದ ಜನ ಸಮೂಹದಿಂದಾಗಿ ನದಿಯಲ್ಲೇ ಅಕ್ಷರಷಃ ದಿಗ್ಬಂಧನಕ್ಕೀಡಾದ ಘಟನೆ ವರದಿಯಾಗಿದೆ.
ಶನಿವಾರ ರಾತ್ರಿ ಸುರ್ಯದ ಸುಬ್ರಹ್ಮಣ್ಯ ಭಟ್ ಎಂಬವರ ತೋಟದಲ್ಲಿ ಇದ್ದ ಕಾಡಾನೆಗಳು ರಾತ್ರಿ ವೇಳೆ ಸರಳೀಕಟ್ಟೆ, ಪಿಲಿಗೂಡು, ಅಂಬೊಟ್ಟು ಮಾರ್ಗವಾಗಿ ಇಳಂತಿಲ ಗ್ರಾಮದ ಅಂಡೆತಡ್ಕ ಎಂಬಲ್ಲಿಂದ ನೇತ್ರಾವತಿ ನದಿಗಿಳಿದಿದೆ. ಈ ವೇಳೆ ಬೆಳಗಾಗಿ ಆನೆಯ ಇರುವಿಕೆ ಜನಗಳಿಗೆ ತಿಳಿದು ಆನೆಗಳನ್ನು ನೋಡಲು ನದಿಯತ್ತ ಜನ ತಂಡೋಪತಂಡವಾಗಿ ಆಗಮಿಸತೊಡಗಿದರು. ಇದರಿಂದ ಗಲಿಬಿಲಿಗೊಂಡ ಆನೆ ನದಿಯ ಎರಡೂ ಪಾರ್ಶ್ವಕ್ಕೂ ಸಾಗಿ ದಡದತ್ತ ಹೋಗಲು ಸಾಧ್ಯವಾಗದೆ ಬಳಿಕ ನದಿ ಮಧ್ಯದ ದಿನ್ನೆಯಲ್ಲಿ ನಿಂತುಕೊಂಡಿತ್ತು.
ಉಪ್ಪಿನಂಗಡಿಯ ಸುಬ್ರಹ್ಮಣ್ಯ ಕ್ರಾಸ್ ರಸ್ತೆಯ ಬಳಿ ನೇತ್ರಾವತಿ ನದಿಯಲ್ಲಿ ಕಾಣಿಸಿದ್ದ ಕಾಡಾನೆಗಳು ಜನವಸತಿ ಪ್ರದೇಶದತ್ತ ಬಾರದಂತೆ ಅರಣ್ಯ ಇಲಾಖೆ , ಪೊಲೀಸ್ ಇಲಾಖೆ , ಹಾಗೂ ಹೋಂಗಾರ್ಡ್ ಸಿಬ್ಬಂದಿಗಳು ನಿಗಾವಿರಿಸಿ ಜಂಟಿ ಕಾರ್ಯಾಚರಣೆ ನಡೆಸಿದರು.
ಉಪ್ಪಿನಂಗಡಿಯಲ್ಲಿದ್ದ ಗೃಹರಕ್ಷಕ ದಳದ ಪ್ರವಾಹ ರಕ್ಷಣಾ ತಂಡದ ಬೋಟನ್ನು ಬಳಸಿಕೊಂಡು ನದಿಗಿಳಿದ ಅರಣ್ಯ ಇಲಾಖಾ ಸಿಬ್ಬಂದಿಗಳು ಕೋವಿಯಲ್ಲಿ ಗಾಳಿಯಲ್ಲಿ ಗುಂಡು ಹಾರಿಸಿ ಆನೆಗಳು ಜನವಸತಿಯತ್ತ ಬಾರದಂತೆ ಬೆದರಿಸಲು ಯತ್ನಿಸಲಾಯಿತು. ಜನವಸತಿ ಪ್ರದೇಶದತ್ತ ಆನೆಗಳ ಚಲನೆ ಕಂಡು ಬಂದಾಗಲೆಲ್ಲಾ ದಡದಲ್ಲಿ ಗರ್ನಲ್ ಸಿಡಿಸಿ ಆನೆಗಳನ್ನು ಬೆದರಿಸಲಾಯಿತು. ಒಟ್ಟಾರೆ ದಿನವಿಡೀ ನದಿಯಲ್ಲಿ ಬೋಟ್ ಮೂಲಕ ಗುಂಡು ಹಾರಿಸುತ್ತಾ , ದಡದಲ್ಲಿ ಸುಡುಮದ್ದು ಸಿಡಿಸುವ ಮೂಲಕ ಆನೆಗಳನ್ನು ಉಪ್ಪಿನಂಗಡಿ ಪೇಟೆಯತ್ತ ಸಂಚರಿಸದಂತೆ ನಿರಂತರ ಪ್ರಯತ್ನ ನಡೆಸಲಾಯಿತು. ಸಾಯಂಕಾಲದ ವರೆಗೂ ಆನೆ ನದಿಯಲ್ಲೇ ಕೂಟೇಲು ಪರಿಸರದಿಂದ ಪಂಜಳ ತನಕ ಸಂಚರಿಸುವುದು ಹಿಂತಿರುಗುವುದು ಮಾಡುತ್ತಲೇ ಇದ್ದ ಕಾರಣ ಇಲಾಖಾಧಿಕಾರಿಗಳು ಆನೆ ಓಡಿಸುವ ಪ್ರಯತ್ನವನ್ನು ನಡೆಸುತ್ತಲ್ಲೇ ಇರಬೇಕಾಯಿತು.
ಸಂಚಾರ ನಿಯಂತ್ರಣಕ್ಕೆ ಹೈರಾಣ
ಆದಿತ್ಯವಾರದ ದಿನ ಉಪ್ಪಿನಂಗಡಿ ಪೇಟೆಯ ಬಳಿ ಎರಡು ಕಾಡಾನೆಗಳು ಇದೆ ಎಂಬ ಸುದ್ದಿ ಹರಡಿ ಭಾರೀ ಸಂಖ್ಯೆಯ ಜನ ಕೂಟೇಲು ಪರಿಸರಕ್ಕೆ ಆಗಮಿಸಿ ಸಂಚಾರ ನಿಯಂತ್ರಣಕ್ಕೆ ಪೊಲೀಸರು ಹೆಣಗಾಡುವ ಸ್ಥಿತಿ ನಿರ್ಮಾಣವಾಗಿತ್ತು. ರಸ್ತೆಯುದ್ದಕ್ಕೂ ವಾಹನಗಳ ಸಾಲು ಕಂಡು ಬಂದಿತ್ತು. ಇತ್ತ ನದಿಯ ಉಭಯ ಕಡೆಗಳಲ್ಲಿಯೂ ಭಾರೀ ಜನ ಸಾಗರವನ್ನು ಕಂಡ ಕಾಡಾನೆಗಳೂ ಕೂಡಾ ಭಯಭೀತವಾಗಿ ಎತ್ತ ಸಂಚರಿಸಬೇಕೆಂದು ತಿಳಿಯದೆ ದಿನವಿಡೀ ನದಿಯಲ್ಲೇ ದಿಗ್ಭಂಧನಕ್ಕೀಡಾದಂತಾಗಿತ್ತು. ಜನವಸತಿ ಪ್ರದೇಶದತ್ತ ಬಾರದಂತೆ ಮಾಡಿದ ಪ್ರಯತ್ನಗಳೆಲ್ಲವೂ ಆನೆಯ ಪಾಲಿಗೆ ಅಹಿತಕರವಾಗಿ ಪರಿಣಮಿಸಿತ್ತು.


