ಮಂಗಳೂರು: ನಕಲಿ ಟ್ರಾಫಿಕ್ ಲಿಂಕ್‌ನಿಂದ ಬ್ಯಾಂಕ್ ಖಾತೆಗೆ ಕನ್ನ..!! ಸೈಬರ್ ವಂಚಕರ ಕೈಚಳಕಕ್ಕೆ ಪೊಲೀಸರೇ ಶಾಕ್

ಮಂಗಳೂರು : ಸಂಚಾರ ನಿಯಮ ಉಲ್ಲಂಘನೆ ದಂಡದ  ಹೆಸರಿನಲ್ಲಿ ಬಂದ ನಕಲಿ ಲಿಂಕ್ ಕ್ಲಿಕ್ ಮಾಡಿದ ಮಂಗಳೂರಿನ 43 ವರ್ಷದ ವ್ಯಕ್ತಿಯೊಬ್ಬರು ಬರೋಬ್ಬರಿ ₹1.71 ಲಕ್ಷ ಹಣ ಕಳೆದುಕೊಂಡಿರುವ ಆಘಾತಕಾರಿ ಸೈಬರ್ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ದೂರುದಾರರಾದ ಶ್ರೀ (43) ಎಂಬುವರ ಮೊಬೈಲ್‌ಗೆ ಸೈಬರ್ ಚೋರರು ಬಲೆ ಬೀಸಿ ಈ ದರೋಡೆ ಎಸಗಿದ್ದಾರೆ.

ದೂರುದಾರರ ಕಾರು ಸಂಖ್ಯೆ (KA 19 MP 4580) ಅನ್ನು ಉಲ್ಲೇಖಿಸಿ ದಿನಾಂಕ 18-10-2026 ರಂದು ಅಪರಿಚಿತ ನಂಬರ್‌ನಿಂದ (57273201) ‘Traffic record review’ ಹೆಸರಿನಲ್ಲಿ ಸಂದೇಶವೊಂದು ಬಂದಿತ್ತು. ಆರಂಭದಲ್ಲಿ ಇದನ್ನು ನಿರ್ಲಕ್ಷಿಸಿದ್ದ ದೂರುದಾರರಿಗೆ, ಮರುದಿನ 19-10-2026 ರಂದು ಮತ್ತೆ ಅದೇ ನಂಬರ್‌ನಿಂದ ‘Traffic e penalty’ ಎಂಬ ನಕಲಿ ಲಿಂಕ್ ಕಳುಹಿಸಲಾಗಿತ್ತು. ಸದ್ರಿ ಲಿಂಕ್ ಅನ್ನು ಕ್ಲಿಕ್ ಮಾಡುತ್ತಿದ್ದಂತೆ ಅವರ ಮೊಬೈಲ್‌ನಲ್ಲಿ ‘Mparivahan’ ಎಂಬ ಅಧಿಕೃತ ಆ್ಯಪ್‌ನಂತೆ ಕಾಣುವ ಅಪಾಯಕಾರಿ APK ಫೈಲ್ ಡೌನ್‌ಲೋಡ್ ಆಗಿದೆ.

ಅಕ್ಟೋಬರ್ 20ರ ಸಂಜೆ 6:00 ರಿಂದ 6:30ರ ಅವಧಿಯಲ್ಲಿ ದೂರುದಾರರ ಮೊಬೈಲ್‌ಗೆ ವಿಭಿನ್ನ ನಂಬರ್‌ಗಳಿಂದ ಏಕಾಏಕಿ 100ಕ್ಕೂ ಹೆಚ್ಚು ಟೆಕ್ಸ್ಟ್ ಮೆಸೇಜ್‌ಗಳು ಬಂದಿವೆ. ಇದರಿಂದ ಅನುಮಾನಗೊಂಡು ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಿದಾಗ, ಕೆನರಾ ಬ್ಯಾಂಕ್ ಹಾಗೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಖಾತೆಗಳಿಂದ ಹಂತ ಹಂತವಾಗಿ ಒಟ್ಟು ₹1,71,599/- ಹಣವು ಅಪರಿಚಿತರ ಖಾತೆಗೆ ವರ್ಗಾವಣೆಯಾಗಿರುವುದು ತಿಳಿದುಬಂದಿದೆ. ಸೈಬರ್ ಅಪರಾಧಿಗಳು ಎಪಿಕೆ (APK) ಫೈಲ್ ಮೂಲಕ ಮೊಬೈಲ್ ಅನ್ನು ಹ್ಯಾಕ್ ಮಾಡಿ, ಈ ಆನ್‌ಲೈನ್ ವಂಚನೆ ಎಸಗಿದ್ದಾರೆ. ಈ ಕುರಿತು ಸೈಬರ್ ಕ್ರೈಮ್ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Star Of Kudla

Learn More →

Leave a Reply

Your email address will not be published. Required fields are marked *