ಬಂಟ್ವಾಳ: ಅಕಸ್ಮಾತ್ತಾಗಿ ಕುತ್ತಿಗೆಗೆ ಹಗ್ಗ ಸಿಲುಕಿ ಉಸಿರುಗಟ್ಟಿ 9 ವರ್ಷದ ಬಾಲಕನೊಬ್ಬ ಮೃತಪಟ್ಟ ಘಟನೆ ಬಂಟ್ವಾಳ ಕುಕ್ಕಿಪಾಡಿ ಮಾವಿನಕಟ್ಟೆ ಸಮೀಪದ ಕೇಂತಲೆ ಮನೆಯಲ್ಲಿ ಅ. 25ರಂದು ರಾತ್ರಿ ನಡೆದಿದೆ. ಕೇಂತಲೆ ಮನೆ ನಿವಾಸಿ ಆನಂದ ಪೂಜಾರಿ ಅವರ ಪುತ್ರ ಅಮೃತ್ ಎ. ಪೂಜಾರಿ (9) ಮೃತಪಟ್ಟ ಬಾಲಕ.
ಅ. 25ರಂದು ರಾತ್ರಿ ಅಮೃತ್ ಮನೆಯ ಎದುರಿನ ಹಾಲ್ನಲ್ಲಿ ಒಬ್ಬನೇ ಆಟವಾಡುತ್ತಿದ್ದ ಎನ್ನಲಾಗಿದೆ. ಈ ವೇಳೆ ಮನೆಯ ಕಿಟಕಿಯಲ್ಲಿ ಈ ಮೊದಲೇ ಸಿಕ್ಕಿಸಲಾಗಿದ್ದ ಹಗ್ಗವು ಆಕಸ್ಮಿಕವಾಗಿ ಆತನ ಕುತ್ತಿಗೆಗೆ ಸಿಲುಕಿಕೊಂಡಿದೆ. ಇದರಿಂದ ಉಸಿರುಗಟ್ಟಿದ ಬಾಲಕ ಹಗ್ಗದಲ್ಲಿ ಸಿಲುಕಿಕೊಂಡಿದ್ದಾನೆ ಎನ್ನಲಾಗಿದೆ.
ಈ ಸಂದರ್ಭ ಮನೆಯಲ್ಲಿದ್ದ ಬಾಲಕನ ಸಹೋದರಿ ಪ್ರಾರ್ಥನಾ, ಅಮೃತ್ ಮಾತನಾಡುತ್ತಿಲ್ಲ ಎಂದು ತಿಳಿಸಿ ಜೋರಾಗಿ ಕೂಗುತ್ತಾ ಸಮೀಪದ ಮನೆಯಲ್ಲಿದ್ದ ಚಿಕ್ಕಪ್ಪನ ಮನೆಗೆ ಓಡಿ ಬಂದಿದ್ದಾಳೆ. ಬಳಿಕ ಕುಟುಂಬದವರು ಆನಂದ ಪೂಜಾರಿ ಅವರ ಮನೆಗೆ ತೆರಳಿ ನೋಡಿದಾಗ, ಅಮೃತ್ನ ತಾಯಿ ಗೀತಾ ಅವರು ಬಾಲಕನನ್ನು ತೊಡೆಯ ಮೇಲೆ ಮಲಗಿಸಿಕೊಂಡು ಅಳುತ್ತಿದ್ದರು ಎನ್ನಲಾಗಿದೆ.
ಕೂಡಲೇ ಬಾಲಕನನ್ನು ಉಪಚರಿಸಿದರೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ಪರೀಕ್ಷಿಸಿ ಬಾಲಕ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಕುರಿತು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


