ನವದೆಹಲಿ: ಜಂತರ್ ಮಂತರ್ಗೆ ಅತಿಕ್ರಮಣ ಪ್ರವೇಶ ಮಾಡಿದ ಆರೋಪ ಹಾಗೂ ಮುಂಜಾಗ್ರತಾ ಕ್ರಮವಾಗಿ ಬಂಧನಕ್ಕೊಳಗಾಗಿದ್ದ ಕಾಕ್ರೋಚ್ ಜನತಾ ಪಾರ್ಟಿ (Cockroach Janata Party – CJP) ನಾಯಕರಾದ ಸೌರವ್ ದಾಸ್ ಮತ್ತು ಅಶುತೋಷ್ ರಂಕಾ ಅವರನ್ನು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು ಮೂವರು ನಾಯಕರ ಮೇಲೆ ಕ್ರಮಕೈಗೊಳ್ಳಲಾಗಿದ್ದು, ಇವರೊಂದಿಗೆ ಅಜಿಂಕ್ಯ ಶಿಂದೆ ಮೇಲೂ ಪ್ರಕರಣ ದಾಖಲಾಗಿದೆ.
ನ್ಯಾಯಾಲಯದ ಆದೇಶ:ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ದೆಹಲಿಯ ಮಂದಿರ ಮಾರ್ಗದಲ್ಲಿರುವ ಮ್ಯಾಜಿಸ್ಟ್ರೇಟ್ ಮುಂದೆ ಮೂವರು ನಾಯಕರನ್ನು ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯವು ಸೌರವ್ ದಾಸ್ ಮತ್ತು ಅಶುತೋಷ್ ರಂಕಾಗೆ 5 ದಿನಗಳ ಜೈಲು ಶಿಕ್ಷೆ (ನ್ಯಾಯಾಂಗ ಬಂಧನ) ವಿಧಿಸಿದೆ.
ಹುಟ್ಟುಹಬ್ಬದಂದೇ ಜೈಲುಪಾಲಾದ ನಾಯಕ: ವಿಶೇಷವೆಂದರೆ, ಸಿಜೆಪಿ ರಾಷ್ಟ್ರೀಯ ವಕ್ತಾರ ಅಶುತೋಷ್ ರಂಕಾ ಅವರ ಹುಟ್ಟುಹಬ್ಬದಂದೇ ನ್ಯಾಯಾಲಯ ಈ ಆದೇಶ ನೀಡಿದ್ದು, ಅವರು ತಮ್ಮ ಜನ್ಮದಿನದಂದೇ ತಿಹಾರ್ ಜೈಲುಪಾಲಾಗಿದ್ದಾರೆ.
ಸಂಸ್ಥಾಪಕರ ಪ್ರತಿಕ್ರಿಯೆ:ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಈ ವಿಚಾರವನ್ನು ಖಚಿತಪಡಿಸಿದ್ದು, ಸರ್ಕಾರದ ಈ ಕ್ರಮವು ಭಿನ್ನಾಭಿಪ್ರಾಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ತೀವ್ರವಾಗಿ ಟೀಕಿಸಿದ್ದಾರೆ


