ಪ್ರೀತಿಸಿದ ಬಾರ್ ಡಾನ್ಸರ್‌ಗಾಗಿ 657 ಕೋಟಿ ಸರ್ಕಾರಿ ಹಣ ಲೂಟಿ ಮಾಡಿದ ಬ್ಯಾಂಕ್ ಮ್ಯಾನೇಜರ್!!

ಪ್ರೀತಿಸಿದ ಬಾರ್ ಡಾನ್ಸರ್‌ಗಾಗಿ ಬ್ಯಾಂಕ್ ನೌಕರನೊಬ್ಬ ಹರಿಯಾಣ ಸರ್ಕಾರ ಹಾಗೂ ಚಂಡೀಗಢ ಆಡಳಿತದ ವಿವಿಧ ಇಲಾಖೆಗಳ 657 ಕೋಟಿ ರೂ. ಸರ್ಕಾರಿ ಹಣವನ್ನು ಲೂಟಿ ಮಾಡಿರುವ ಆರೋಪ ಕೇಳಿಬಂದಿದೆ. ಆಕೆಗೆ ಡ್ಯಾನ್ಸ್ ಮಾಡುವುದನ್ನು ಬಿಡಿಸುವ ಉದ್ದೇಶದಿಂದ ಪ್ರತಿ ತಿಂಗಳು 10 ಲಕ್ಷ ರೂ. ಪಾಕೆಟ್ ಮನಿ ನೀಡುತ್ತಿದ್ದ ಎನ್ನಲಾಗಿದ್ದು, ಈ ಪ್ರಕರಣ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಏನಿದು ಪ್ರಕರಣ?

ಸಿಬಿಐ ತನಿಖೆಯಲ್ಲಿ ಈ ಹಗರಣ ಬೆಳಕಿಗೆ ಬಂದಿದ್ದು, ಹರಿಯಾಣ ಹಾಗೂ ಚಂಡೀಗಢದ ಸರ್ಕಾರಿ ಇಲಾಖೆಗಳ ಬ್ಯಾಂಕ್ ಖಾತೆಗಳಿಂದ 657 ಕೋಟಿ ರೂ. ಸಾರ್ವಜನಿಕ ಹಣವನ್ನು ಅಕ್ರಮವಾಗಿ ವರ್ಗಾಯಿಸಿದ ಆರೋಪದ ಮೇಲೆ ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ ಮಾಜಿ ಮ್ಯಾನೇಜರ್ ರಿಭವ್ ರಿಷಿ ವಿರುದ್ಧ ತನಿಖೆ ನಡೆಯುತ್ತಿದೆ. ಈತ ಬಾರ್ ಡಾನ್ಸರ್‌ಗಾಗಿ ಹಣವನ್ನು ಖರ್ಚು ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ ಎನ್ನಲಾಗಿದೆ.

ಐಡಿಎಫ್‌ಸಿ ಫಸ್ಟ್ ಬ್ಯಾಂಕ್‌ನ ಮಾಜಿ ಶಾಖಾ ವ್ಯವಸ್ಥಾಪಕ ರಿಭವ್ ರಿಷಿಗೆ 2025ರ ಮಾರ್ಚ್-ಏಪ್ರಿಲ್ ಅವಧಿಯಲ್ಲಿ ಬಿಹಾರದ ಸಿವಾನ್ ಮೂಲದ ಬಾರ್ ಡಾನ್ಸರ್ ಪರಿಚಯವಾಗಿದ್ದಳು. ರಿಷಿ ವಿವಾಹಿತನಾಗಿದ್ದರೂ, ಚಂಡೀಗಢದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಆಕೆಯನ್ನು ಭೇಟಿಯಾದ ಬಳಿಕ ಆಕೆಯೊಂದಿಗೆ ಸಂಬಂಧ ಬೆಳೆಸಿದ್ದ ಎನ್ನಲಾಗಿದೆ.

ಬಾರ್ ಡಾನ್ಸಿಂಗ್ ವೃತ್ತಿ ತೊರೆಯುವಂತೆ ಆಕೆಗೆ ಹೇಳಿದ್ದ ರಿಷಿ, ಅದಕ್ಕೆ ಪ್ರತಿಯಾಗಿ ಪ್ರತಿ ತಿಂಗಳು 10 ಲಕ್ಷ ರೂ. ನೀಡುವುದಾಗಿ ಒಪ್ಪಿಕೊಂಡಿದ್ದನು ಎನ್ನಲಾಗಿದೆ. ಈ ಮೂಲಕ ಸುಮಾರು 56 ಲಕ್ಷ ರೂ. ಆಕೆಯ ಖಾತೆಗೆ ವರ್ಗಾಯಿಸಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಇದರ ಜೊತೆಗೆ ದೆಹಲಿಯ ದ್ವಾರಕಾದಲ್ಲಿ ಸುಮಾರು 4 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆ ಖರೀದಿಸಿ ಕೊಟ್ಟಿದ್ದನು ಎನ್ನಲಾಗಿದೆ. ಅಲ್ಲದೆ, ಆಕೆಯೊಂದಿಗೆ ದುಬೈ, ಮಕಾವು ಹಾಗೂ ಥಾಯ್ಲೆಂಡ್‌ಗೆ ಐಷಾರಾಮಿ ಪ್ರವಾಸಗಳನ್ನು ಕೈಗೊಂಡಿದ್ದನು. ದುಬೈನಲ್ಲಿ ಬುರ್ಜ್ ಅಲ್ ಅರಬ್ ಎದುರಿನ ಡ್ಯೂಪ್ಲೆಕ್ಸ್ ವಿಲ್ಲಾದಲ್ಲಿ ಇಬ್ಬರೂ ತಂಗಿದ್ದರು ಎನ್ನಲಾಗಿದೆ.

ದುಬೈನಲ್ಲಿ ನೆಲೆಸುವ ಯೋಜನೆಯನ್ನೂ ಹೊಂದಿದ್ದ ರಿಷಿ, ಅಲ್ಲಿ 4-BHK ಮನೆ ಹಾಗೂ ಟೊಯೋಟಾ ಲ್ಯಾಂಡ್ ಕ್ರೂಸರ್ ಕಾರನ್ನು ಬುಕ್ ಮಾಡಿದ್ದ ಎನ್ನಲಾಗಿದೆ.

ಏತನ್ಮಧ್ಯೆ, ಚಂಡೀಗಢದ ಹೋಟೆಲ್‌ಗಳು ಹಾಗೂ ಝಡ್ ಮ್ಯಾನರ್‌ನಲ್ಲಿ ಐಷಾರಾಮಿ ಮುಜ್ರಾ ಪಾರ್ಟಿಗಳನ್ನು ಆಯೋಜಿಸಲಾಗುತ್ತಿತ್ತು ಎಂದು ತನಿಖೆಯಲ್ಲಿ ಹೇಳಲಾಗಿದೆ. ಪ್ರತಿ ಪಾರ್ಟಿಗೆ 15ರಿಂದ 20 ಲಕ್ಷ ರೂ.ವರೆಗೆ ಖರ್ಚು ಮಾಡಲಾಗುತ್ತಿತ್ತು ಎನ್ನಲಾಗಿದೆ.

ಈ ಪಾರ್ಟಿಗಳಲ್ಲಿ ಹರಿಯಾಣದ ಐಎಎಸ್ ಅಧಿಕಾರಿ ಪಂಕಜ್ ಅಗರ್ವಾಲ್ ಸೇರಿದಂತೆ ಹಲವು ಹಿರಿಯ ಸರ್ಕಾರಿ ಅಧಿಕಾರಿಗಳು ಭಾಗವಹಿಸುತ್ತಿದ್ದರು ಹಾಗೂ ಬಾರ್ ಡಾನ್ಸರ್‌ಗಳ ಮೇಲೆ ಹಣದ ನೋಟುಗಳನ್ನು ಎಸೆಯುತ್ತಿದ್ದರು ಎಂದು ಸಂಬಂಧಿಸಿದ ಮಹಿಳೆ ಸಿಬಿಐಗೆ ಹೇಳಿಕೆ ನೀಡಿದ್ದಾಳೆ ಎನ್ನಲಾಗಿದೆ.

ಹಾಗಾದರೆ ಹಣ ಲೂಟಿ ಮಾಡಿದ್ದು ಹೇಗೆ?

ಹರಿಯಾಣ ಸ್ಕೂಲ್ ಶಿಕ್ಷಣ ಪರಿಯೋಜನಾ ಪರಿಷತ್ ಹಾಗೂ ಹರಿಯಾಣ ರಾಜ್ಯ ಕೃಷಿ ಮಾರುಕಟ್ಟೆ ಮಂಡಳಿಯ ಹಣವನ್ನು ನಕಲಿ ದಾಖಲೆಗಳು ಮತ್ತು ಶೆಲ್ ಕಂಪನಿಗಳ ಮೂಲಕ ರಿಷಿ ಬೇರೆ ಖಾತೆಗಳಿಗೆ ವರ್ಗಾಯಿಸಿದ್ದಾನೆ ಎಂಬ ಆರೋಪವಿದೆ.

ತನಿಖೆಯ ವೇಳೆ ರಿಷಿಯ ಖಾತೆಗೆ ಕೋಟ್ಯಂತರ ರೂಪಾಯಿ ಹಣ ಬಂದಿರುವುದು ಪತ್ತೆಯಾಗಿದ್ದು, ಆತನ ಪತ್ನಿ ದಿವ್ಯಾ ಅರೋರಾ ಅವರ ಖಾತೆಗೂ 18.32 ಕೋಟಿ ರೂ. ವರ್ಗಾವಣೆಯಾಗಿರುವುದು ತನಿಖಾಧಿಕಾರಿಗಳ ಗಮನಕ್ಕೆ ಬಂದಿದೆ ಎನ್ನಲಾಗಿದೆ.

Star Of Kudla

Learn More →

Leave a Reply

Your email address will not be published. Required fields are marked *