ಜಿಮ್ ಟ್ರೈನರ್ ಕೊಲೆ ಪ್ರಕರಣ: ಸಲಿಂಗಕಾಮ, ಡ್ರಗ್ಸ್ ನಶೆಯಲ್ಲಿ ಕೃತ್ಯ?

ಬೆಂಗಳೂರು: ರಾಜಧಾನಿಯ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಜಿಮ್ ಟ್ರೈನರ್ ನಂದನ್ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಹಲವು ಆಘಾತಕಾರಿ ಅಂಶಗಳು ಬಹಿರಂಗವಾಗಿವೆ. ಜಿಮ್ ಆ್ಯನಿವರ್ಸರಿ ಪಾರ್ಟಿ ಹೆಸರಿನಲ್ಲಿ ನಡೆದ ಈ ಘಟನೆ ವೇಳೆ ಸಲಿಂಗಕಾಮ, ಅತಿಯಾದ ಡ್ರಗ್ಸ್ ಸೇವನೆ ಹಾಗೂ ಮಾರಣಾಂತಿಕ ಹಲ್ಲೆ ನಡೆದಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ನಂದನ್, ಅನುಷ್ ಶೆಟ್ಟಿ ಎಂಬಾತನ ಬಳಿ ಪರ್ಸನಲ್ ಜಿಮ್ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದ. ಜಿಮ್ ಆ್ಯನಿವರ್ಸರಿ ಹಿನ್ನೆಲೆಯಲ್ಲಿ ಅನುಷ್ ಶೆಟ್ಟಿ ಕೆಂಪಾಪುರದಲ್ಲಿರುವ ತನ್ನ ಫ್ಲ್ಯಾಟ್‌ನಲ್ಲಿ ಪಾರ್ಟಿ ಆಯೋಜಿಸಿ, ನಂದನ್ ಸೇರಿದಂತೆ ಜಿಮ್‌ನ ನಾಲ್ವರು ಟ್ರೈನರ್‌ಗಳನ್ನು ಆಹ್ವಾನಿಸಿದ್ದ.

ಪಾರ್ಟಿಯಲ್ಲಿ ಭಾಗವಹಿಸಿದ್ದವರು ಹೆಚ್ಚಿನ ಪ್ರಮಾಣದಲ್ಲಿ ಡ್ರಗ್ಸ್ ಹಾಗೂ ಮದ್ಯ ಸೇವಿಸಿದ್ದರು ಎನ್ನಲಾಗಿದೆ. ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ಡ್ರಗ್ಸ್ ಸೇವನೆಗೆ ಬಳಸಿದ ವಸ್ತುಗಳು ಪತ್ತೆಯಾಗಿದ್ದು, ಪಾರ್ಟಿಯಲ್ಲಿದ್ದವರು ನಶೆಯಲ್ಲಿದ್ದರು ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ.

ಪೊಲೀಸ್ ಮೂಲಗಳ ಪ್ರಕಾರ, ತಡರಾತ್ರಿ ನಶೆಯಲ್ಲಿದ್ದ ಸಂದರ್ಭದಲ್ಲಿ ವಿಶ್ವನಾಥ್ ಎಂಬಾತ ನಂದನ್‌ಗೆ ಕಿಸ್ ಮಾಡಲು ಮುಂದಾಗಿದ್ದಾನೆ. ನಂತರ ಅಲ್ಲಿದ್ದವರು ನಂದನ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ್ದಾರೆ ಎನ್ನಲಾಗಿದೆ. ಈ ವೇಳೆ ವಿಶ್ವನಾಥ್ ಮತ್ತು ನಂದನ್ ನಡುವೆ ತೀವ್ರ ಗಲಾಟೆ ನಡೆದಿದೆ.

ಘಟನೆಯ ಬಳಿಕ ನಂದನ್ ಮೃತದೇಹದ ಹಲವು ಭಾಗಗಳಲ್ಲಿ ಆಳವಾದ ಕಚ್ಚಿದ ಗುರುತುಗಳು ಕಂಡುಬಂದಿವೆ. ಇದರಿಂದ ಪ್ರಕರಣದ ಬಗ್ಗೆ ಹಲವು ಅನುಮಾನಗಳು ಮೂಡಿವೆ. ಸಾಮಾನ್ಯ ಜಗಳ ನಡೆದಿದ್ದರೆ ಒಂದೆರಡು ಕಡೆ ಗಾಯಗಳಾಗುವ ಸಾಧ್ಯತೆ ಇರುತ್ತದೆ. ಆದರೆ ದೇಹದ ವಿವಿಧ ಭಾಗಗಳಲ್ಲಿ ಕಚ್ಚಿದ ಗುರುತುಗಳು ಕಂಡುಬಂದಿರುವುದು ಲೈಂಗಿಕ ದೌರ್ಜನ್ಯದ ಸಂದರ್ಭದಲ್ಲಿ ತೀವ್ರ ಸಂಘರ್ಷ ನಡೆದಿರುವ ಅನುಮಾನಕ್ಕೆ ಕಾರಣವಾಗಿದೆ. ಗಲಾಟೆ ವಿಕೋಪಕ್ಕೆ ತಿರುಗಿದ ಬಳಿಕ ನಂದನ್‌ನ ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಘಟನೆ ನಡೆದ ಬಳಿಕ ಅನುಷ್ ಶೆಟ್ಟಿ ಪೊಲೀಸರಿಗೆ ನೀಡಿರುವ ಹೇಳಿಕೆಯೂ ಅನುಮಾನಕ್ಕೆ ಕಾರಣವಾಗಿದೆ. “ರಾತ್ರಿ ನಾನೇ ಪಾರ್ಟಿಗೆ ಕರೆದಿದ್ದೆ. ಆದರೆ ರಾತ್ರಿ ಏನಾಯಿತು ಎಂಬುದು ನನಗೆ ಗೊತ್ತಿಲ್ಲ. ನಾನು ಬೇರೆ ಕೋಣೆಯಲ್ಲಿ ಮಲಗಿದ್ದೆ. ಬೆಳಿಗ್ಗೆ ಎದ್ದು ನೋಡಿದಾಗ ನಂದನ್ ತಲೆಯಿಂದ ರಕ್ತ ಬರುತ್ತಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದೆ” ಎಂದು ಆತ ಹೇಳಿದ್ದಾನೆ.

ಸ್ವತಃ ಪಾರ್ಟಿ ಆಯೋಜಿಸಿ, ಮನೆಯಲ್ಲೇ ಇಷ್ಟೊಂದು ಘಟನೆ ನಡೆದಿದ್ದರೂ ತನಗೆ ಏನೂ ಗೊತ್ತಿಲ್ಲ ಎಂದು ಹೇಳಿರುವ ಅನುಷ್ ಶೆಟ್ಟಿಯ ಹೇಳಿಕೆಯನ್ನು ಪೊಲೀಸರು ಸಂಪೂರ್ಣವಾಗಿ ನಂಬುತ್ತಿಲ್ಲ. ಸದ್ಯ ಅಮೃತಹಳ್ಳಿ ಠಾಣೆ ಪೊಲೀಸರು ಮರಣೋತ್ತರ ಪರೀಕ್ಷೆಯ (Post-Mortem) ಅಂತಿಮ ವರದಿಗಾಗಿ ಕಾಯುತ್ತಿದ್ದಾರೆ. ಪಾರ್ಟಿಯಲ್ಲಿದ್ದ ಅನುಷ್ ಶೆಟ್ಟಿ, ವಿಶ್ವನಾಥ್ ಸೇರಿದಂತೆ ಇತರರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ.

Star Of Kudla

Learn More →

Leave a Reply

Your email address will not be published. Required fields are marked *