
ಮಂಗಳೂರು ಹಾಗೂ ಉಡುಪಿ ಮಾರ್ಗವಾಗಿ ಗೋವಾದಿಂದ ಕೇರಳಕ್ಕೆ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಜಾಲವೊಂದನ್ನು ಅಬಕಾರಿ ಇಲಾಖೆಯ ವಿಶೇಷ ತಂಡ ಪತ್ತೆಹಚ್ಚಿದೆ.

ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ಬಾಲಕೃಷ್ಣ ಸಿ.ಹೆಚ್. ಅವರ ಆದೇಶದಂತೆ, ದಕ್ಷಿಣ ಕನ್ನಡ ಅಬಕಾರಿ ಉಪ ಆಯುಕ್ತೆ ಬಿಂದುಶ್ರೀ ಅವರ ನಿರ್ದೇಶನದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
ಹೆಜಮಾಡಿ ಟೋಲ್ಗೇಟ್ ಬಳಿ ಯಾವುದೇ ಪರವಾನಗಿ ಇಲ್ಲದೆ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ವೇಳೆ ತಂಡವು ಒಂದು ಸ್ವಿಫ್ಟ್ ಡಿಸೈರ್ ಕಾರು ಹಾಗೂ 438 ಲೀಟರ್ ಅಕ್ರಮ ಗೋವಾ ಮದ್ಯವನ್ನು ವಶಪಡಿಸಿಕೊಂಡಿದೆ. ವಾಹನ ಚಾಲಕ ಬಸವರಾಜು ಬೋವಿ ಹಾಗೂ ನಾಗವೇಣಿ ನಾಯಕರ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.
ಕಾರ್ಯಾಚರಣೆಯಲ್ಲಿ ಮಂಗಳೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕಿ ಗಾಯತ್ರಿ ಸಿ.ಹೆಚ್., ಬಂಟ್ವಾಳ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕ ಸಂತೋಷ್ ಮೋಡಗಿ ಸೇರಿದಂತೆ ಅಬಕಾರಿ ಇಲಾಖೆಯ ಹಲವು ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.
ಪ್ರಕರಣವನ್ನು ಜಂಟಿ ಆಯುಕ್ತರ ಕಚೇರಿಯ ಅಬಕಾರಿ ನಿರೀಕ್ಷಕಿ ಸುನಿತಾ ದಾಖಲಿಸಿಕೊಂಡಿದ್ದು, ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ.


