
ಬೆಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿದ ಆರೋಪದ ಆಧಾರದಲ್ಲಿ ಪೊಲೀಸ್ ಪೇದೆ ವಿರುದ್ಧ ವಿವಾಹಿತ ಮಹಿಳೆ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ನ್ಯಾಯಾಲಯವು ದೂರುದಾರೆಯ ವೈವಾಹಿಕ ಸ್ಥಿತಿ ಮತ್ತು ಮೂರು ವರ್ಷಗಳ ಕಾಲದ ಪರಸ್ಪರ ಸಮ್ಮತಿಯ ಸಂಬಂಧವನ್ನು ಪರಿಗಣಿಸಿ ಈ ನಿರ್ಧಾರ ಕೈಗೊಂಡಿದೆ.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠವು ಮಹದೇವಪುರ ಪೊಲೀಸ್ ಠಾಣೆಯ ಪೇದೆ ಫಕೀರಪ್ಪ ಹಟ್ಟಿ (30) ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಪುರಸ್ಕರಿಸಿ, ನಗರದ 53ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ನಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ರದ್ದುಪಡಿಸಿದೆ.
ನ್ಯಾಯಾಲಯವು ಹೇಳಿರುವುದೇನೆಂದರೆ:
“ದೂರುದಾರೆಯ ವೈವಾಹಿಕ ಸ್ಥಿತಿಗತಿಯು ‘ಮದುವೆಯಾಗುವ ಭರವಸೆ’ ಎಂಬ ಕಲ್ಪನೆಯನ್ನು ಅಸಾಧ್ಯವಾಗಿಸುತ್ತದೆ. ಪ್ರತಿಯೊಂದು ಮುರಿದ ಭರವಸೆಯೂ ಸುಳ್ಳು ಭರವಸೆಯಲ್ಲ, ಮತ್ತು ಪ್ರತಿಯೊಂದು ವಿಫಲ ಸಂಬಂಧವನ್ನೂ ಅತ್ಯಾಚಾರವೆಂದು ಪರಿಗಣಿಸಲಾಗುವುದಿಲ್ಲ.”
ವರ್ಷಗಳ ಒಡನಾಟ, ಸಮ್ಮತಿಯ ಸಂಬಂಧ:
ದೂರುದಾರೆ ಮತ್ತು ಆರೋಪಿ ಸುಮಾರು ಮೂರು ವರ್ಷಗಳ ಕಾಲ ನಿರಂತರವಾಗಿ ಸಂಪರ್ಕದಲ್ಲಿದ್ದು, ಪರಸ್ಪರ ಒಪ್ಪಿಗೆಯ ಸಂಬಂಧವನ್ನು ಕಾಯ್ದುಕೊಂಡಿದ್ದರು ಎಂದು ದಾಖಲೆಗಳು ತಿಳಿಸಿವೆ.
ದೂರುದಾರೆ 2012ರಲ್ಲಿ ಮತ್ತೊಬ್ಬ ವ್ಯಕ್ತಿಯನ್ನು ಮದುವೆಯಾಗಿ ಮೂವರು ಮಕ್ಕಳ ತಾಯಿಯಾಗಿದ್ದರು. ಪತಿಯೊಂದಿಗೆ ಅನ್ಯೋನ್ಯತೆ ಕಡಿಮೆ ಇರುವ ಕಾರಣ ಅವರು ಮಕ್ಕಳೊಂದಿಗೆ ಪ್ರತ್ಯೇಕವಾಗಿ ವಾಸವಾಗಿದ್ದರು.
ಈ ಹಿನ್ನೆಲೆಯಲ್ಲಿ ‘ಮದುವೆಯಾಗುವ ಭರವಸೆ’ ಎಂಬ ಕಲ್ಪನೆ ಅಸಂಭವ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಸುಪ್ರೀಂ ಕೋರ್ಟ್ನ ಹಲವು ತೀರ್ಪುಗಳನ್ನು ಉಲ್ಲೇಖಿಸಿದ ಹೈಕೋರ್ಟ್, “ಇಬ್ಬರ ನಡುವಿನ ಸಮ್ಮತಿಯ ಸಂಬಂಧವನ್ನು ನಂತರ ಅತ್ಯಾಚಾರವೆಂದು ಪರಿವರ್ತಿಸಲಾಗುವುದಿಲ್ಲ” ಎಂದು ನುಡಿದೆ.
ಅದರಿಂದ ಫಕೀರಪ್ಪ ವಿರುದ್ಧದ ದೋಷಾರೋಪ ಪಟ್ಟಿ ಹಾಗೂ ವಿಚಾರಣೆಯನ್ನು ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಹೇಗೆ ಬೆಳೆಯಿತು ಸಂಬಂಧ?
2019ರ ಅಕ್ಟೋಬರ್ನಲ್ಲಿ, ದೂರುದಾರೆ ಮತ್ತು ಅವರ ಮನೆ ಮಾಲೀಕರ ಮಧ್ಯೆ ಮುಂಗಡ ಹಣ ಸಂಬಂಧಿಸಿದ ವಿವಾದ ಉಂಟಾಗಿ ಅವರು ದೂರು ನೀಡಲು ಮಹದೇವಪುರ ಪೊಲೀಸ್ ಠಾಣೆಗೆ ತೆರಳಿದ್ದರು.
ಅಲ್ಲಿ ಪೇದೆ ಫಕೀರಪ್ಪ ಅವರು ಅವರ ಮೊಬೈಲ್ ನಂಬರನ್ನು ಪಡೆದು ನಂತರ ಸಂಪರ್ಕ ಬೆಳೆಸಿಕೊಂಡು, ಸ್ನೇಹ ಮತ್ತು ನಂತರದ ದೈಹಿಕ ಸಂಬಂಧಕ್ಕೆ ದಾರಿ ಮಾಡಿಕೊಟ್ಟಿದ್ದರು. ಈ ಸಂಬಂಧ ಎರಡು ವರ್ಷಕ್ಕಿಂತ ಹೆಚ್ಚು ಕಾಲ ಮುಂದುವರಿದಿತ್ತು.
ಆದರೆ 2022ರ ಅಕ್ಟೋಬರ್ 15ರಂದು, ದೂರುದಾರೆ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿ, “ಫಕೀರಪ್ಪ ಮದುವೆಯಾಗುತ್ತೇನೆಂದು ಭರವಸೆ ನೀಡಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ” ಎಂದು ಆರೋಪಿಸಿದ್ದರು.
ತನಿಖೆ ನಡೆಸಿದ ಮಹದೇವಪುರ ಪೊಲೀಸರು ಭಾರತೀಯ ದಂಡ ಸಂಹಿತೆ ಸೆಕ್ಷನ್ 376 (ಅತ್ಯಾಚಾರ), 323 (ಹಾನಿ ಮಾಡುವುದು), 417 (ವಂಚನೆ) ಮತ್ತು 506 (ಜೀವ ಬೆದರಿಕೆ) ಅಡಿಯಲ್ಲಿ ಆರೋಪಪತ್ರ ಸಲ್ಲಿಸಿದ್ದರು.
ಈ ಆರೋಪವನ್ನು ಪ್ರಶ್ನಿಸಿ ಫಕೀರಪ್ಪ ಹೈಕೋರ್ಟ್ ಮೊರೆ ಹೋಗಿದ್ದರು.
ಹೈಕೋರ್ಟ್ನ ತೀರ್ಮಾನ:
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಪೀಠದಿಂದ ನೀಡಿದ ತೀರ್ಪಿನಲ್ಲಿ,
“ವಿವಾಹಿತ ಮಹಿಳೆಯು ಹಲವು ವರ್ಷಗಳ ಕಾಲ ಸಮ್ಮತಿಯ ಸಂಬಂಧ ಹೊಂದಿದ್ದರೆ, ಆ ಸಂಬಂಧವನ್ನು ‘ಮದುವೆಯ ಸುಳ್ಳು ಭರವಸೆ’ ಎಂದು ಪರಿಗಣಿಸಿ ಅತ್ಯಾಚಾರಆರೋಪ ಮಾಡುವುದು ಕಾನೂನುಬದ್ಧವಲ್ಲ ಎಂದು ಹೇಳಿ,
ಫಕೀರಪ್ಪ ವಿರುದ್ಧದ ಎಫ್ಐಆರ್, ದೋಷಾರೋಪ ಪಟ್ಟಿ ಮತ್ತು ವಿಚಾರಣೆಯನ್ನು ಸಂಪೂರ್ಣವಾಗಿ ರದ್ದುಪಡಿಸಿದ್ದಾರೆ.


