ಸುರತ್ಕಲ್: ಕೋಟ್ಯಂತರ ಆಸ್ತಿ ಮಾರಾಟ ಪ್ರಕರಣ — ನಕಲಿ ಮುಖ್ತ್ಯಾರನಾಮೆ ಆರೋಪ, ಅಹ್ಮದ್ ಮೊಹಿದ್ದೀನ್ ವಿರುದ್ಧ ಪ್ರಕರಣ ದಾಖಲು

ಸುರತ್ಕಲ್: ಸುರತ್ಕಲ್ ಮುಕ್ಕ ಪ್ರದೇಶದಲ್ಲಿ ಕೋಟ್ಯಂತರ ರೂಪಾಯಿಗಳ ಬೆಲೆ ಬಾಳುವ ಆಸ್ತಿಯನ್ನು ನಕಲಿ ಮುಖ್ತ್ಯಾರನಾಮೆಯ ಮೂಲಕ ತನ್ನ ಹೆಸರಿಗೆ ದಾನಪತ್ರ ಮಾಡಿಸಿ ಮಾರಾಟ ಮಾಡಿದ ಆರೋಪದ ಮೇಲೆ ಅಂತರಾಷ್ಟ್ರೀಯ ಉದ್ಯಮಿ ಅಹ್ಮದ್ ಮೊಹಿದ್ದೀನ್ ಮತ್ತು ಇತರರ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿತರಲ್ಲಿ ಒಬ್ಬರಾಗಿದ್ದ ಮುಮ್ತಾಜ್ ಅಲಿ ಕಳೆದ ವರ್ಷ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬುದು ಈ ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಈ ಘಟನೆಯಲ್ಲಿ ಪ್ರಧಾನ ಆರೋಪಿ ಅಹ್ಮದ್ ಮೊಹಿದ್ದೀನ್ ತನ್ನ ಸಹೋದರ ಝುಬೈರ್ ಅಹ್ಮದ್‍ರ ಸ್ವಾಮ್ಯದಲ್ಲಿದ್ದ ಆಸ್ತಿಯನ್ನು ಝುಬೈರ್ ಅವರ ಗಮನಕ್ಕೆ ಬಾರದಂತೆ ಮಂಗಳೂರಿನ ಎರಡು ವಕೀಲರ ಸಹಾಯದಿಂದ ನಕಲಿ ಮುಖ್ತ್ಯಾರನಾಮೆ ತಯಾರಿಸಿದ್ದಾರೆ ಎಂದು ದೂರಿನಲ್ಲಿದೆ. ಈ ಮೂಲಕ ಆಸ್ತಿಯನ್ನು ತನ್ನ ಹೆಸರಿಗೆ ದಾನಪತ್ರ ಮಾಡಿಸಿಕೊಂಡು ಕೋಟ್ಯಂತರ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ. ಝುಬೈರ್ ಅಹ್ಮದ್‍ರ ದೂರಿನ ಆಧಾರದಲ್ಲಿ ಸುರತ್ಕಲ್ ಠಾಣೆಯಲ್ಲಿ ಸುಮಾರು ಆರು ಆರೋಪಿಗಳ ವಿರುದ್ಧ ಅಕ್ರಮ ಸಂಖ್ಯೆ 135/2025 ಎಂದು ಎಫ್‍ಐಆರ್ ದಾಖಲಾಗಿದೆ.

ಪ್ರಕರಣದಲ್ಲಿ ಶಾಮಿಲಾಗಿರುವವರಲ್ಲಿ ಕಳೆದ ವರ್ಷ ಆತ್ಮಹತ್ಯೆಯಿಂದ ಮೃತಪಟ್ಟ ಉದ್ಯಮಿ ಮುಮ್ತಾಜ್ ಅಲಿಯೂ ಸೇರಿದ್ದಾರೆ. ಮುಮ್ತಾಜ್ ಅಲಿ ಅಹ್ಮದ್ ಮೊಹಿದ್ದೀನ್‍ರ ಅಳಿಯಾಗಿದ್ದರು ಎಂದು ತಿಳಿದುಬಂದಿದೆ. ಇದಲ್ಲದೆ, ಅಹ್ಮದ್ ಮೊಹಿದ್ದೀನ್‍ರ ಕಚೇರಿ ಸಿಬ್ಬಂದಿ ಸೀಮಾ ಗುರುರಾಜ್ ಮತ್ತು ಮಂಗಳೂರು ಇಬ್ಬರು ಖ್ಯಾತ ವಕೀಲರ ಹೆಸರುಗಳೂ ಎಫ್‍ಐಆರ್ ಪ್ರತಿಯಲ್ಲಿ ಉಲ್ಲೇಖಗೊಂಡಿವೆ. ಈ ಆರೋಪಿಗಳು ಆಸ್ತಿ ವರ್ಗಾವಣೆಯಲ್ಲಿ ಪಾತ್ರ ವಹಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಅಹ್ಮದ್ ಮೊಹಿದ್ದೀನ್ ಡೆಲ್ಟಾ ಇನ್ಫ್ರಾ ಲಾಜಿಸ್ಟಿಕ್ಸ್ (ವಲ್ರ್ಡ್ ವೈಡ್) ಲಿಮಿಟೆಡ್‍ನ ಅಂತರರಾಷ್ಟ್ರೀಯ ಉದ್ಯಮಿಯಾಗಿ ಖ್ಯಾತರಾಗಿದ್ದು, ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಗುರುತಿಸಲ್ಪಟ್ಟಿದ್ದಾರೆ. ಪ್ರಸ್ತುತ ಅವರು ಪೊಲೀಸ್ ಕೈಗೆ ಸಿಗದಂತೆ ತಲೆಮರೆಸಿಕೊಂಡಿದ್ದಾರೆ. ತನಿಖಾಧಿಕಾರಿ ಪೊಲೀಸ್ ನಿರೀಕ್ಷಕ ಪ್ರಮೋದ್ ಆರೋಪಿಗಳನ್ನು ಪತ್ತೆಹಚ್ಚಲು ತೀವ್ರ ಬಲೆ ಬೀಸಿದ್ದಾರೆ. “ಪ್ರಕರಣದಲ್ಲಿ ಎಲ್ಲಾ ಆಸ್ತಿಯ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ. ಆರೋಪಿಗಳ ವಿರುದ್ಧ ಕಟ್ಟುನಿಟ್ಟಾದ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಪ್ರಮೋದ್ ತಿಳಿಸಿದ್ದಾರೆ.

ಈ ಘಟನೆ ಸುರತ್ಕಲ್ ಪ್ರದೇಶದಲ್ಲಿ ಆಸ್ತಿ ವರ್ಗಾವಣೆಯಲ್ಲಿ ನಡೆಯುತ್ತಿರುವ ಅಕ್ರಮಗಳ ಬಗ್ಗೆ ಆತಂಕವನ್ನು ಹುಟ್ಟಿಸಿದೆ. ಆಸ್ತಿ ಮಾಲೀಕರು ತಮ್ಮ ದಾಖಲೆಗಳನ್ನು ನಿಗಾ ಇರಿಸಿಕೊಳ್ಳುವಂತೆ ಸಾರ್ವಜನಿಕರನ್ನು ಸುರತ್ಕಲ್ ಪೊಲೀಸ್ ಎಚ್ಚರಿಸಿದ್ದಾರೆ. ತನಿಖೆಯಲ್ಲಿ ಹೊಸ ವಿಷಯಗಳು ಬಹಿರಂಗವಾಗಬಹುದು ಎಂದು ನಿರೀಕ್ಷಿಸಲಾಗಿದೆ.

Star Of Kudla

Learn More →

Leave a Reply

Your email address will not be published. Required fields are marked *