ಮಂಗಳೂರು: ಡ್ರಗ್ಸ್ ಮಾರಾಟಕ್ಕೆ ಬಂದಿದ್ದ ಇಬ್ಬರು ಸಿಸಿಬಿ ಬಲೆಗೆ – 2.22 ಲಕ್ಷ ರೂ. ಮೌಲ್ಯದ ಎಂಡಿಎಂಎ ವಶಕ್ಕೆ

ಮಂಗಳೂರು: ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಉರ್ವ ಮಾರಿಗುಡಿ ಬಳಿಯ ಪಿಜಿಯೊಂದರಲ್ಲಿ ವಾಸವಾಗಿದ್ದ ಹಿಮನೀಶ್ ಪಿ. ಯಾನೆ ಮಿಂಟು (28) ಮತ್ತು ಪದವಿನಂಗಡಿ ಪೆರ್ಲ ಗುರಿಯ ಅನುರಾಜ್ (28) ಎಂಬವರನ್ನು ಕುಲಶೇಖರ ಬಳಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನ.8ರಂದು ಸಿಸಿಬಿ ಎಸ್ಸೈ ಶರಣಪ್ಪಭಂಡಾರಿ ಖಚಿತ ಮಾಹಿತಿಯಂತೆ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಎಂಡಿಎಂಎ ಮಾರಾಟ ಮಾಡಲು ಬಂದಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಬೆಂಗಳೂರಿನಲ್ಲಿರುವ ಪಾಂಡೇಶ್ವರ ಮೂಲದ ಸ್ನೇಹಿತ ದಿಶಾಂಕ್ ಮತ್ತು ರಾಘವೇಂದ್ರ ಸಿಂಗ್ ತನ್ವಾರ್ ಎಂಬಾತನ ಮೂಲಕ ಹೊಸೂರು ಬಳಿಯಿಂದ ಎಂಡಿಎಂಎ ತಂದು ಇಬ್ಬರೂ ಪಾಲು ಮಾಡಿಕೊಂಡು ಸ್ವಲ್ಪ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ.

ಆ ಬಳಿಕ ಪರಿಶೀಲಿಸಿದಾಗ ಹಿಮನೀಶ್ ಬಳಿ 11.24 ಗ್ರಾಂ ತೂಕದ ಅಂದಾಜು 1.12 ಲಕ್ಷ ರೂ. ಮೌಲ್ಯದ ಎಂಡಿಎಂಎ ಪತ್ತೆಯಾಗಿದೆ. ಅಲ್ಲದೆ 10 ಸಾವಿರ ರೂ. ಮೌಲ್ಯದ ಮೊಬೈಲ್ ಹಾಗೂ ಸೈಡ್‌ಬ್ಯಾಗ್ ವಶಪಡಿಸಿಕೊಳ್ಳಲಾಗಿದೆ. ಅನುರಾಜ್ ಬಳಿ 1.10 ಲಕ್ಷ ರೂ. ಮೌಲ್ಯದ 11.06 ಗ್ರಾಂ ಎಂಡಿಎಂಎ ಪತ್ತೆಯಾಗಿದೆ. 10 ಸಾವಿರ ರೂ. ಮೌಲ್ಯದ ಮೊಬೈಲ್ ಹಾಗೂ ಬ್ಯಾಗ್ ವಶಪಡಿಸಿಕೊಳ್ಳಲಾಗಿದೆ. ಈ ಇಬ್ಬರು ಆರೋಪಿಗಳ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Star Of Kudla

Learn More →

Leave a Reply

Your email address will not be published. Required fields are marked *