
ಕಾಡುಹಂದಿಗೆ ಇಟ್ಟ ವಿದ್ಯುತ್‌ಗೆ ಇಬ್ಬರ ಬಲಿ: ಆರೋಪಿಯ ಬಂಧನಕ್ಕೆ ಆಗ್ರಹಿಸಿ ಅ.22ರಂದು ಪ್ರತಿಭಟನೆ

ಪುತ್ತೂರು: ಕಲ್ಮಡ್ಕ ಗ್ರಾಮದ ಹೊಳೆಕೆರೆಯಲ್ಲಿ ಕಾಡು
ಹಂದಿಗಾಗಿ ಹೊಳೆಗೆ ವಿದ್ಯುತ್ ಹರಿಸಿ ಇಬ್ಬರ ಸಾವಿಗೆ ಮಧುಸೂಧನ್ ಭಟ್ ಅವರೇ ಕಾರಣ ಎಂದು ಆರೋಪಿಸಿ. ಅವರನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ದಲಿತ್ ಸೇವಾ ಸಮಿತಿಯಿಂದ ನೊಂದ ಕುಟುಂಬ ಸಮೇತ ಬೆಳ್ಳಾರೆ ಪೊಲೀಸ್ ಠಾಣೆಯ ಮುಂದೆ ಅ.22ರಂದು ಪ್ರತಿಭಟನೆ ನಡೆಸಲಿದ್ದೇವೆ ಎಂದು ದ.ಕ ಜಿಲ್ಲಾ ಸಮಿತಿ ದಲಿತ್ ಸೇವಾ ಸಮಿತಿ ವಿಟ್ಲ ಹಾಗು ನಲಿಕೆಯವರ ಸಮಾಜ ಸೇವಾ ಸಂಘ ಬೆಳ್ತಂಗಡಿ ಇದರ ಜಂಟಿ ಆಶ್ರಯದಲ್ಲಿ ನಡೆಯಲಿದೆ ಎಂದು ದಲಿತ್ ಸೇವಾ ಸಮಿತಿ ಸ್ಥಾಪಕ ಅಧ್ಯಕ್ಷ ಬಿ.ಕೆ. ಸೇಸಪ್ಪ ಬೆದ್ರಕಾಡು ಅವರು ಪುತ್ತೂರು ಪ್ರೆಸ್ ಕ್ಲಬ್ ಬಳಿ ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಮೀನು ಹಿಡಿಯಲು ಹೋಗಿರುವ ಕಲ್ಮಡ್ಕ ಗ್ರಾಮದ ಭರತ್ ಹಾಗು ಆತನ ಭಾಮೈದ ಬೆಳ್ತಂಗಡಿ ತಾಲೂಕಿನ ಗಣೇಶ್ ಯಾನೆ ರಮೇಶ್ ಅವರು ಮೃತಪಟ್ಟವರು.

ಹೊಳೆಯ ಸಮೀಪದ ಮಧುಸೂಧನ್ ಭಟ್ ಅವರು ಕಾಡುಹಂದಿಗಾಗಿ ಹೊಳೆ ಅಥವಾ ತೋಡಿಗೆ ಇಟ್ಟ ವಿದ್ಯುತ್ ನಿಂದಾಗಿ ಭರತ್ ಮತ್ತು ರಮೇಶ್ ಮೃತಪಟ್ಟಿದ್ದರು. ಈ ವೇಳೆ ಸಿಂಚನ್ ಎಂಬಾತ ವಿದ್ಯುತ್ ಸ್ಪರ್ಶದಿಂದಾಗಿ ಗಾಯಗೊಂಡಿದ್ದರು. ಘಟನೆ ಕುರಿತು ಮಧುಸೂಧನ್ ಭಟ್ ಅವರ ವಿರುದ್ದ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ದೂರಿಗೆ ಸಂಬಂಧಿಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಇಲ್ಲಿನ ತನಕ ಮಧುಸೂಧನ್ ಭಟ್ ಅವರನ್ನು ಪೊಲೀಸರು ಬಂಧಿಸಿಲ್ಲ. ಈ ಕುರಿತು ಅ.17ರಂದು ಆರೋಪಿಯನ್ನು ಬಂಧಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದೆವು. ಆದರೂ ಈ ತನಕ ಪೊಲೀಸರು ಆರೋಪಿಯನ್ನು ಬಂಧಿಸಿಲ್ಲ. ಹಾಗಾಗಿ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಅ.22 ರಂದು ಬೆಳ್ಳಾರೆ ಪೊಲೀಸ್ ಠಾಣೆ ಮುಂದೆ ನೊಂದ ಕುಟುಂಬದ ಪರವಾಗಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಸೇಸಪ್ಪ ಬೆದ್ರಕಾಡು ತಿಳಿಸಿದರು. ಇದರ ಜೊತೆಗೆ ಸುಳ್ಯ ಶಾಸಕರು ಮೃತ ಕುಟುಂಬಕ್ಕೆ ಪರಿಹಾರ ನೀಡುವಂತೆ ಕ್ರಮವಹಿಸುವಂತೆ ಆಗ್ರಹ ಮಾಡುತ್ತೇವೆ ಎಂದರು. ದೈವ ನರ್ತನ ಮಾಡುವ ಇಬ್ಬರು ಮಕ್ಕಳಿಗೆ ಇವತ್ತು ನ್ಯಾಯ ಸಿಗಬೇಕು. ಮಧುಸೂಧನ್ ಅವರನ್ನು ಬಂಧಿಸದಿದ್ದರೆ ಮುಂದೆ ಎಸ್ಪಿ ಕಚೇರಿಗೂ ಮುತ್ತಿಗೆ ಹಾಕಲು ಸಿದ್ದರಿದ್ದೇವೆ ಎಂದು ಬೆಳ್ತಂಗಡಿ ತಾಲೂಕಿನ ನಲಿಕೆಯವರ ಸಂಘದ ಮಾಜಿ ಅಧ್ಯಕ್ಷ ಸೇಸಪ್ಪ ಕೆ ನಲಿಕೆ ಹಳದಂಗಡಿ ಅವರು ತಿಳಿಸಿದರು. ಈ ಸಂದರ್ಭ ನಲಿಕೆಯವರ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಪ್ರಭಾಕರ ಎಸ್ ಶಾಂತಿಗೋಡು, ಬಂಟ್ವಾಳ ನಲಿಕೆಯವರ ಸಂಘ ರಾಮಣ್ಣ ಪಿಲಿಂಜ, ಶ್ರೀನಿವಾಸ ಮುಂಗೇಲು, ದಲಿತ್ ಸೇವಾ ಸಮಿತಿ ಪುತ್ತೂರು ತಾಲೂಕು ಅಧ್ಯಕ್ಷ ಬಿ.ಕೆ ಅಣ್ಣಪ್ಪ ಕಾರೆಕ್ಕಾಡು ಮತ್ತಿತರರು ಉಪಸ್ಥಿತರಿದ್ದರು.


