ಮಂಗಳೂರು ಪೊಲೀಸರ ಕಾರ್ಯಾಚರಣೆ: ಕೋರಿಯರ್ ಮೂಲಕ ಎಂಡಿಎಂಎ ಸಾಗಾಟ ಮತ್ತು ಮಾರಾಟ ಮಾಡಲು ಸಂಚು ರೂಪಿಸುತ್ತಿದ್ದ ಜಾಲ ಪತ್ತೆ

ಮಂಗಳೂರು: ನಗರದಲ್ಲಿ ಮಾದಕವಸ್ತು ಜಾಲದ ವಿರುದ್ಧ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಸುಮಾರು 1 ಕೋಟಿ 63 ಲಕ್ಷ ರೂ. ಮೌಲ್ಯದ ಎಂಡಿಎಂಎ ಮಾದಕವಸ್ತುವನ್ನು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಕಾಸರಗೋಡಿನ ಅಬ್ದುಲ್ ಹಾಪೀಲ್ (25), ಮಂಗಳೂರು ಕೂಳೂರು ನಿವಾಸಿ ಜಿಯಾವುಲ್ ಹಕ್ (30), ಮಂಗಳೂರು ಪಾಂಡೇಶ್ವರದ ಅಲ್ತಾಫ್ (28) ಬಂಧಿತ ಆರೋಪಿಗಳು.

ಖಚಿತ ಮಾಹಿತಿ ಮೇರೆಗೆ ಅ. 08 ರಂದು ರಾತ್ರಿ 10 ಗಂಟೆಗೆ ಉಳ್ಳಾಲ ತಾಲೂಕಿನ ಕುಂಪಲದ ಡಿಮಾರ್ಟ್ ಬಳಿ ದಾಳಿ ನಡೆಸಿದ ಸಿಸಿಬಿ ತಂಡ, ಆರೋಪಿಗಳನ್ನು ಬಂಧಿಸಿದೆ.

ಬಂಧಿತರಿಂದ 1 ಕೆಜಿ 796.96 ಗ್ರಾಂ ಎಂಡಿಎಂಎ (ಮೌಲ್ಯ ₹1,58,34,000), 3 ಮೊಬೈಲ್ ಫೋನ್, ಕೃತ್ಯಕ್ಕೆ ಬಳಸಿದ ಸ್ವಿಫ್ಟ್ ಕಾರು, ಆಟೋ ರಿಕ್ಷಾ, ಕೋರಿಯರ್ ಬಾಕ್ಸ್ ಹಾಗೂ ವಾಟರ್ ಪ್ಯೂರಿಫೈಯರ್ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿದ ಒಟ್ಟು ಸೊತ್ತಿನ ಮೌಲ್ಯ ₹1,63,84,000 ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿಗಳು ಪಂಜಾಬ್‌ನ ಅಮೃತಸರದಿಂದ ಎಂಡಿಎಂಎ ಖರೀದಿಸಿ, ವಾಟರ್ ಪ್ಯೂರಿಫೈಯರ್‌ನ ನೀರು ಸಂಗ್ರಹವಾಗುವ ಭಾಗದಲ್ಲಿ ಅಡಗಿಸಿಟ್ಟು ಕೋರಿಯರ್ ಮೂಲಕ ಮಂಗಳೂರಿಗೆ ತರಿಸುತ್ತಿದ್ದರು. ಬಳಿಕ ಕೇರಳ ಹಾಗೂ ಮಂಗಳೂರಿನ ವಿವಿಧೆಡೆ ಮಾರಾಟಕ್ಕೆ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಅಬ್ದುಲ್ ಹಾಪೀಲ್ ವಿರುದ್ಧ ಈ ಹಿಂದೆ ಉಳ್ಳಾಲ ಠಾಣೆಯಲ್ಲಿ ಮಾದಕ ಸೇವನೆ ಪ್ರಕರಣವಿದ್ದು, ಜಿಯಾವುಲ್ ಹಕ್ ದುಬೈನ ರಸ್-ಅಲ್-ಖೈಮಾದಲ್ಲಿ ಡ್ರಗ್ಸ್ ಮಾರಾಟ ಪ್ರಕರಣದಲ್ಲಿ 3 ವರ್ಷ ಜೈಲು ಶಿಕ್ಷೆ ಅನುಭವಿಸಿ ಬಂದಿದ್ದಾನೆ. ಅಲ್ತಾಫ್ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಮಾದಕ ಸೇವನೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *