ಪುತ್ತೂರು: ಭಕ್ತರ ಕಡೆಗಣಿಸಿ ರಚಿಸಲಾದ ಜೀರ್ಣೋದ್ಧಾರ/ಅಭಿವೃದ್ಧಿ ಸಮಿತಿಯನ್ನು ವಿಸರ್ಜಿಸಿ-ಡಾ.ಕೃಷ್ಣಪ್ರಸನ್ನ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೀಮೆಯ ಭಕ್ತರ ಕಡೆಗಣಿಸಿ ಜೀರ್ಣೋದ್ಧಾರ/ಅಭಿವೃದ್ಧಿ ಸಮಿತಿಯನ್ನು ರಚಿಸಲಾಗಿದ್ದು, ಹೀಗಾಗಿ ಹಾಲಿ ಇರುವ ಸಮಿತಿಯನ್ನು ವಿಸರ್ಜಿಸಿ ಭಕ್ತರ ಸಭೆ ಕರೆದು ನಿಯಮಾನುಸಾರ ಹೊಸ ಸಮಿತಿಯನ್ನು ರಚಿಸುವಂತೆ ವಿಶ್ವ ಹಿಂದೂ ಪ್ರರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ ಅವರು ಆಗ್ರಹಿಸಿದರು.


ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಜೀರ್ಣೋದ್ಧಾರ ಸಮಿತಿಯನ್ನು ಭಕ್ತರ ಸಭೆ ಕರೆದು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ರಚಿಸಬೇಕಿದ್ದು, ಆದರೆ ಇಲ್ಲಿ ಶಾಸಕರ ಇಚ್ಛೆಯಂತೆ ಸಮಿತಿ ರಚಿಸಲಾಗಿದೆ. ಜತೆಗೆ ವ್ಯವಸ್ಥಾಪನಾ ಸಮಿತಿ ಕೂಡ ಭಕ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಕಡೆಗಣಿಸಿದೆ. ಜತೆಗೆ ದೇವಸ್ಥಾನದ ಮುಂಭಾಗದ ಗುಡಿಗಳನ್ನು ತೆರವು ಮಾಡುವ ಸಂದರ್ಭದಲ್ಲೂ ಇಲಾಖೆಯ ಅನುಮತಿ ಪಡೆಯದೆ ಏಕಾಏಕಿ ಧ್ವಂಸ ಮಾಡಲಾಗಿದೆ. ಅಯ್ಯಪ್ಪ ಸ್ವಾಮಿಗೆ ನಿತ್ಯ ಪೂಜೆ, ನೈವೇದ್ಯವಿಲ್ಲದಂತೆ ಮಾಡಿರುವುದು ಭಕ್ತರ ಭಾವನೆಗೆ ಧಕ್ಕೆ ತಂದಿದೆ.


ದೇವಸ್ಥಾನದ ಪವಿತ್ರ ಪುಷ್ಕರಣಿಯ ಕಾಮಗಾರಿಯೂ ಪೂರ್ಣಗೊಳ್ಳದೇ ಇದ್ದು, ಅಂತಹ ಅಪೂರ್ಣ ಸ್ಥಿತಿಯಲ್ಲಿರುವ ಕೆರೆಯಲ್ಲಿ ಶ್ರೀ ದೇವರ ಕೆರೆ ಆಯನ ನಡೆಸುವುದು ಆಗಮಶಾಸ್ತ್ರಕ್ಕೆ ವಿರುದ್ಧವಾಗಿದೆ. ಜತೆಗೆ ಭಕ್ತರ ಆಕ್ಷೇಪದ ನಡುವೆಯೂ ಇಲಾಖೆಯ ಅನುಮತಿ ಇಲ್ಲದೆ ದೇವಸ್ಥಾನದ ಬಳಿ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಹಿಂಪ ಪ್ರಮುಖರಾದ ಮಾಧವ ಪೂಜಾರಿ, ಸತೀಶ್ ಬಿ.ಎಸ್, ಚೇತನ್, ಹರೀಶ್ ದೋಳ್ಪಾಡಿ ಉಪಸ್ಥಿತರಿದ್ದರು.

Star Of Kudla

Learn More →

Leave a Reply

Your email address will not be published. Required fields are marked *