ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಲೆಕ್ಕಾಚಾರ ಹಾಗೂ ಹಣಕಾಸು ನಿರ್ವಹಣೆಯಲ್ಲಿ ಭಾರಿ ಅಕ್ರಮ ಮತ್ತು ಭ್ರಷ್ಟಾಚಾರ ನಡೆದಿದೆ ಎಂದು ಪತ್ರಿಕಾಗೋಷ್ಠಿ

ಪುತ್ತೂರು :ಐತಿಹಾಸಿಕ ಪ್ರಸಿದ್ಧ ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಲೆಕ್ಕಾಚಾರ ಹಾಗೂ ಹಣಕಾಸು ನಿರ್ವಹಣೆಯಲ್ಲಿ ಭಾರಿ ಅಕ್ರಮ ಮತ್ತು ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಪುತ್ತೂರು ಬಿಜೆಪಿ ಘಟಕ, ಈ ಕುರಿತು ಧಾರ್ಮಿಕ ದತ್ತಿ ಇಲಾಖೆ ತಕ್ಷಣವೇ ಸಮಗ್ರ ತನಿಖೆ ನಡೆಸಬೇಕು ಎಂದು ಉಗ್ರವಾಗಿ ಆಗ್ರಹಿಸಿದೆ. ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕರು, ಸೂಕ್ತ ತನಿಖೆಗೆ ಒತ್ತಾಯಿಸಿ ಸೆಪ್ಟೆಂಬರ್ 29 ರಂದು ಪುತ್ತೂರು ಸಹಾಯಕ ಆಯುಕ್ತರ ಕಚೇರಿ ಮುಂಭಾಗದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
“ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರ ಮಾರ್ಗದರ್ಶನದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಕೈಗೊಂಡಿರುವ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ಬಿಜೆಪಿ ಸಂಪೂರ್ಣ ಸಹಕಾರ ನೀಡಲಿದೆ. ಈ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸಿದ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ. ಆದರೆ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸುವ ಮೊದಲು ಇಲಾಖೆಯ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಪ್ರಸ್ತುತ ವ್ಯವಸ್ಥಾಪನಾ ಸಮಿತಿಯು ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ, ಉಪಯೋಗವಿಲ್ಲದ ವಸ್ತುಗಳನ್ನು ನಿಯಮಾನುಸಾರ ಏಲಂ ಮಾಡದೆ ಏಕಾಏಕಿ ಮಾರಾಟ ಮಾಡಿದೆ. ಅಲ್ಲದೆ ಲೋಕೋಪಯೋಗಿ ಇಲಾಖೆಯ ಮೂಲಕ ದರ ನಿಗದಿ ಪ್ರಕ್ರಿಯೆಯನ್ನೂ ನಡೆಸಿಲ್ಲ” ಎಂದು ಬಿಜೆಪಿ ನಾಯಕರು ಆಪಾದಿಸಿದರು.

ದೇವಸ್ಥಾನದ 2025 ರ ಆಡಿಟ್ ವರದಿಯೇ ಈ ಎಲ್ಲಾ ನಿಯಮ ಉಲ್ಲಂಘನೆಗಳಿಗೆ ಸಾಕ್ಷಿಯಾಗಿದೆ ಎಂದ ಬಿಜೆಪಿ ನಾಯಕರು, ಹಲವು ಅನುಮಾನಾಸ್ಪದ ಖರ್ಚುಗಳನ್ನು ಬಹಿರಂಗಪಡಿಸಿದ್ದಾರೆ:
₹40 ಲಕ್ಷ ಚಿಲ್ಲರೆ ಖರ್ಚು: 2025-26 ರ ಅವಧಿಯಲ್ಲಿ ‘ಸಣ್ಣಪುಟ್ಟ ಖರ್ಚು’ ಎಂಬ ನೆಪದಲ್ಲಿ ದೇವಸ್ಥಾನದ ಖಾತೆಯಿಂದ ಅಂದಾಜು ₹40 ಲಕ್ಷ ಹಿಂಪಡೆಯಲಾಗಿದೆ.

ಸಮಿತಿ ಸದಸ್ಯನಿಗೆ ₹70 ಲಕ್ಷ ಬಿಲ್: ಜೆಸಿಬಿ ಬಿಲ್ ಹೆಸರಿನಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯನೊಬ್ಬನಿಗೆ ಬರೋಬ್ಬರಿ ₹70 ಲಕ್ಷ ಪಾವತಿಸಲಾಗಿದೆ.

ವಿಐಪಿ ಮತ್ತು ತಂತ್ರಿಗಳಿಗೆ ಉಪಚಾರ ಮಾಡಿದವರಿಗೆ ನೀಡಿರುವುದಾಗಿ ₹3 ಲಕ್ಷಕ್ಕೂ ಅಧಿಕ ಹಣ ಪಡೆಯಲಾಗಿದೆ.
ದೇವಸ್ಥಾನದ ಆವರಣದಲ್ಲಿದ್ದ ಮನೆಗಳನ್ನು ತೆರವುಗೊಳಿಸುವಾಗ ಸಿಕ್ಕಿದ್ದ ಬೆಲೆಬಾಳುವ ಮರದ ಕಿಟಕಿ, ಕಬ್ಬಿಣ ಹಾಗೂ ಪರಿಸರದಲ್ಲಿದ್ದ ಮರಮಟ್ಟುಗಳ ಯಾವುದೇ ಲೆಕ್ಕಾಚಾರ ನೀಡಿಲ್ಲ.

ದೇವಳದ ಒಂದೊಂದು ಕಟ್ಟೆ ನಿರ್ಮಾಣಕ್ಕೆ ತಲಾ ₹25 ಲಕ್ಷದಂತೆ ಐದು ಕಟ್ಟೆಗಳಿಗೆ ಭಕ್ತರಿಂದ ಹಣ ಸಂಗ್ರಹಿಸಲಾಗಿದೆ. ಆದರೆ ಹಣ ನೀಡಿದ ಭಕ್ತರಿಗೆ ಯಾವ ರಶೀದಿ ನೀಡಲಾಗಿದೆ ಎಂಬುದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು.
ದೇವಸ್ಥಾನದ ಆವರಣದಲ್ಲಿರುವ ಅಯ್ಯಪ್ಪ ವಿಗ್ರಹ, ನಾಗನ ಗುಡಿ ಹಾಗೂ ನವಗ್ರಹ ಗುಡಿಗಳಿಗೆ ದಿನನಿತ್ಯ ಸಲ್ಲುತ್ತಿದ್ದ ನಿತ್ಯ ಪೂಜೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಇದು ಸ್ಥಳೀಯ ಭಕ್ತಾದಿಗಳ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಕಿಡಿಕಾರಿದ ಬಿಜೆಪಿ, ಈ ಎಲ್ಲಾ ಗಂಭೀರ ವಿಷಯಗಳ ಕುರಿತು ಧಾರ್ಮಿಕ ದತ್ತಿ ಇಲಾಖೆ ತಕ್ಷಣವೇ ಉನ್ನತ ಮಟ್ಟದ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರತರಬೇಕು ಎಂದು ಆಗ್ರಹಿಸಿದೆ. ಪತ್ರಿಕಾಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಬಿಜೆಪಿ ಮಹಿಳಾ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ, ಬಿಜೆಪಿ ನಗರ ಮಂಡಲದ ಮಾಧ್ಯಮ ಪ್ರಮುಖ್ ಮಹೇಶ್ ಕೇರಿ ಉಪಸ್ಥಿತರಿದ್ದರು.

Star Of Kudla

Learn More →

Leave a Reply

Your email address will not be published. Required fields are marked *