ಉಡುಪಿ: ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕ ಆತ್ಮಹತ್ಯೆ!!

ಉಡುಪಿ: ಕುಂದಾಪುರ ತಾಲೂಕಿನ ಕೋಟೇಶ್ವರದ ಕೋಟಿತೀರ್ಥ ಪುಷ್ಕರಣಿಗೆ ಹಾರಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ‌ ನಡೆದಿದ್ದು ಬುಧವಾರ ಬೆಳಿಗ್ಗೆ ಮೃತದೇಹವನ್ನು ಹುಡುಕಿ ಮೇಲಕ್ಕೆತ್ತಲಾಯಿತು.


ಕೋಟೇಶ್ವರ ಸಮೀಪದ ಹೊದ್ರಾಳಿ ಕೊಳನಕಟ್ಟೆ ನಿವಾಸಿ ಮಹಾಬಲ ಆಚಾರ್ಯ ಅವರ ಪುತ್ರ ಪದ್ಮನಾಭ ಆಚಾರ್ಯ (37) ಆತ್ಮಹತ್ಯೆ ಮಾಡಿಕೊಂಡವರು.
ಘಟನೆ ವಿವರ: ಕುಂದಾಪುರದ ಹೆಂಚಿನ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಪದ್ಮನಾಭ ಅವರು ಕಳೆದ ನಾಲ್ಕು ತಿಂಗಳಿನಿಂದ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಮಂಗಳವಾರ ಬೆಳಿಗ್ಗೆ ಮನೆಯಿಂದ ಅವರು ತೆರಳಿದ್ದು ರಾತ್ರಿಯಾದರೂ‌ ಮನೆಗೆ ವಾಪಾಸ್ಸು ಬಂದಿರಲಿಲ್ಲ. ರಾತ್ರಿ ವೇಳೆ ಇವರ ದ್ವಿಚಕ್ರ ವಾಹನ ದೇವಸ್ಥಾನದ‌ ಸಮೀಪ ಪತ್ತೆಯಾಗಿತ್ತು. ಮನೆಯವರು ಹುಡುಕಾಟ ಮಾಡಿದ್ದರೂ ಸುಳಿವು ದೊರೆತಿರಲಿಲ್ಲ.‌ ಕೋಟಿತೀರ್ಥ ಪುಷ್ಕರಣಿಯ ಪೂರ್ವ ಭಾಗದ ಮೆಟ್ಟಿಲಿನ‌ ಮೇಲೆ ಚಪ್ಪಲಿ ಹಾಗೂ ಟೋಪಿ ಇದ್ದ ಕಾರಣ ಕೆರೆಗೆ ಹಾರಿರುವ ಶಂಕೆ ವ್ಯಕ್ತವಾಗಿದ್ದು ಬುಧವಾರ ಬೆಳಿಗ್ಗೆನಿಂದ ಶೋಧ ನಡೆಸಲಾಯಿತು.

ನಿತ್ಯ ಕೆರೆಯಲ್ಲಿ ಈಜಲು ಬರುವ ಮಾರ್ಕೋಡು ಸುಧೀರ್ ಕುಮಾರ್ ಶೆಟ್ಟಿ, ಪ್ರಭಾಕರ ಶೆಟ್ಟಿ, ಸತ್ಯನಾರಾಯಣ ಮಂಜ ಮೊದಲಾದವರು ಬೋಟ್ ಸಹಾಯದಿಂದ ನೀರಿನಲ್ಲಿ ಶೋಧ ನಡೆಸಿದ್ದು 9 ಗಂಟೆಯ ವೇಳೆ‌ ಮೃತದೇಹ ನೀರಿನಲ್ಲಿರುವುದು ತಿಳಿದುಬಂದಿದೆ. ಇದೇ ಸಮಯಕ್ಕೆ ಆಗಮಿಸಿದ ಮುಳುಗುತಜ್ಞ ಈಶ್ವರ‌ ಮಲ್ಪೆ‌ ಮತ್ತು ತಂಡ ನೀರಿಗಿಳಿದು ಸ್ಥಳೀಯ ಈಜುಗಾರರ ನೆರವಿನಲ್ಲಿ‌ ಮೃತದೇಹ ಮೇಲಕ್ಕೆತ್ತಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ‌ ಮೃತದೇಹವನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಕುಂದಾಪುರ ಪೊಲೀಸರು ಸ್ಥಳಕ್ಕೆ ಭೇಟಿ‌ನೀಡಿ ಪರಿಶೀಲನೆ ನಡೆಸಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *