ಪುತ್ತೂರು: ಲೋಕಾ ಅದಾಲತ್ ನಲ್ಲಿ ಒಂದಾದ ಮೂರು ಜೋಡಿಗಳು-ಲೋಕ ಅದಾಲತ್ ಪುತ್ತೂರಿನಲ್ಲಿ 515 ಪ್ರಕರಣಗಳ ಇತ್ಯರ್ಥ

ಪುತ್ತೂರು: ದಾಂಪತ್ಯದಲ್ಲಿ ಉಂಟಾಗಿದ್ದ ಭಿನ್ನಾಭಿಪ್ರಾಯಗಳಿಂದ ನ್ಯಾಯಾಲಯದ ಮೆಟ್ಟಿಲೇರಿದ್ದ ಮೂರು ದಂಪತಿ ಶನಿವಾರ ‌ಪುತ್ತೂರು ನ್ಯಾಯಾಲಯದಲ್ಲಿ ನಡೆದ ಲೋಕ ಅದಾಲತ್ ನಲ್ಲಿ ರಾಜಿ ಸಂಧಾನದ ಮೂಲಕ ಒಂದಾಗಿ ಹೊಸ ಜೀವನದ ಸಂಕಲ್ಪದೊಂದಿಗೆ ಜತೆಯಾಗಿ ತೆರಳಿದ್ದಾರೆ.
ಪುತ್ತೂರು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯ ಹಾಗೂ ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದ್ದ ಈ ಪ್ರಕರಣಗಳನ್ನು ನ್ಯಾಯಾಧೀಶರಾದ ಪ್ರಕೃತಿ ಕಲ್ಯಾಣಪುರ ಹಾಗೂ ರಮ್ಯಾ ಆರ್. ಅವರು ಇತ್ಯರ್ಥ ಪಡಿಸಿದರು. ೫ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯ್ಕ್ ಅವರು ಜೋಡಿಗಳಿಗೆ ಮಾರ್ಗದರ್ಶನ ಮಾಡಿದರು.
ಈ ಮೂರು ಪ್ರಕರಣಗಳು ವಿವಾಹ ವಿಚ್ಛೇದನ ಹಾಗೂ ಪರಸ್ಪರ ಭಿನ್ನಾಭಿಪ್ರಾಯಗಳಿಗೆ ಸಂಬಂಧಿಸಿದ್ದಾಗಿದ್ದವು. ಸಂದಾನದ ವೇಳೆ ದಾಂಪತ್ಯ ಜೀವನದ ಮಹತ್ವ, ಕುಟುಂಬ ಮೌಲ್ಯಗಳು ಹಾಗೂ ಪರಸ್ಪರ ಹೊಂದಾಣಿಕೆಯ ಜೀವನದ ಕುರಿತು ಮನವರಿಕೆ ಮಾಡಿದಾಗ ವಿರಸದಲ್ಲಿದ್ದ ಜೋಡಿ ಜತೆಯಾಗಿ ಬಾಳುವ ನಿರ್ಧಾರ ಕೈಗೊಂಡಿದ್ದಾರೆ. ಎರಡು ಜೋಡಿ ಪರಸ್ಪರ ಹಾರವನ್ನೂ ಬದಲಿಸಿಕೊಂಡಿದೆ. ನ್ಯಾಯವಾದಿಗಳು, ಸಂಧಾನಕಾರರು ಜೋಡಿಗಳು ಒಂದಾಗುವಲ್ಲಿ ತಮ್ಮ ಪಾತ್ರ ನಿರ್ವಹಿಸಿದರು.

ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮಾರ್ಗದರ್ಶನದಲ್ಲಿ ದ.ಕ.ಜಿಲ್ಲಾ ಹಾಗೂ ಪುತ್ತೂರು ತಾಲೂಕು ಪ್ರಾಧಿಕಾರದ ಸಹಯೋಗದೊಂದಿಗೆ ಪುತ್ತೂರು ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಲೋಕ ಅದಾಲತ್ ನಲ್ಲಿ ಒಟ್ಟು ಕೈಗೆತ್ತಿಕೊಂಡ 897 ಪ್ರಕರಣಗಳಲ್ಲಿ 515ನ್ನು ಇತ್ಯರ್ಥ ಪಡಿಸಿ 74,25,673 ರೂ. ಮೊತ್ತ ಪಾವತಿಗೆ ಆದೇಶಿಸಲಾಗಿದೆ.
ಪುತ್ತೂರು ೫ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಕೈಗೆತ್ತಿಕೊಂಡ 59 ಪ್ರಕರಣಗಳಲ್ಲಿ 7 ಇತ್ಯರ್ಥಗೊಂಡು 10,64,424 ರೂ. ಮೊತ್ತ ಪಾವತಿಗೆ ಆದೇಶಿಸಲಾಗಿದೆ. ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಕೈಗೆತ್ತಿಕೊಂಡ 204 ಪ್ರಕರಣಗಳಲ್ಲಿ 139 ಇತ್ಯರ್ಥಗೊಂಡು 16,05,050 ರೂ‌. ಪಾವತಿಗೆ ಆದೇಶಿಸಲಾಗಿದೆ.
ಹೆಚ್ಚುವರಿ ಹಿರಿಯ ಪ್ರಧಾನ ನ್ಯಾಯಾಲಯದಲ್ಲಿ ಕೈಗೆತ್ತಿಕೊಂಡ 199 ಪ್ರಕರಣಗಳಲ್ಲಿ 110 ಇತ್ಯರ್ಥಗೊಂಡು 16,20,000 ರೂ. ಪಾವತಿಗೆ ಆದೇಶಿಸಲಾಗಿದೆ. ಪ್ರಧಾನ ಸಿವಿಲ್ ನ್ಯಾಯಾಲಯದಲ್ಲಿ ಕೈಗೆತ್ತಿಕೊಂಡ 325 ಪ್ರಕರಣಗಳಲ್ಲಿ 186 ಇತ್ಯರ್ಥಗೊಂಡು 31,32,499 ರೂ. ಪಾವತಿಗೆ ಆದೇಶಿಸಲಾಗಿದೆ. ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಕೈಗೆತ್ತಿಕೊಂಡ 98 ಪ್ರಕರಣಗಳಲ್ಲಿ 71 ಇತ್ಯರ್ಥಪಡಿಸಿ 3700 ರೂ. ಪಾವತಿಗೆ ಆದೇಶಿಸಲಾಗಿದೆ. ೨ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಕೈಗೆತ್ತಿಕೊಂಡ 12 ಪ್ರಕರಣಗಳಲ್ಲಿ 2 ಇತ್ಯರ್ಥಗೊಂಡಿದೆ.
ಪುತ್ತೂರಿನ ನ್ಯಾಯಾಧೀಶರಾದ ಸದಾನಂದ ನಾಗಪ್ಪ ನಾಯ್ಕ್, ಪ್ರಕೃತಿ ಕಲ್ಯಾಣಪುರ, ದೇವರಾಜ್ ವೈ ಎಚ್, ರಮ್ಯಾ ಆರ್. ಅದಾಲತ್ ನಲ್ಲಿ ವಿಚಾರಣೆ ಪ್ರಕ್ರಿಯೆ ನಡೆಸಿದರು.

Star Of Kudla

Learn More →

Leave a Reply

Your email address will not be published. Required fields are marked *