ಪುತ್ತೂರು: ಏಳು ದಿನಗಳ ಕಾಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಭ್ರಮಕ್ಕೆ ಸಾಕ್ಷಿಯಾಗಿದ್ದ ಇತಿಹಾಸ ಪ್ರಸಿದ್ದ ಪುತ್ತೂರು ಕಿಲ್ಲೆ ಮೈದಾನದ 68ನೇ ವರ್ಷದ ಸಾರ್ವಜನಿಕ ಶ್ರೀ ಮಹಾಗಣೇಶೋತ್ಸವವು ಸೆ.20ರಂದು ಸಂಪನ್ನಗೊಂಡಿತು. ಶ್ರೀ ದೇವತಾ ಸಮಿತಿಯ ಆಶ್ರಯದಲ್ಲಿ ನಡೆದ ಗಣೇಶೋತ್ಸವದ ಸಮಾರೋಪದ ಅಂಗವಾಗಿ ಸೆ.20ರ ರಾತ್ರಿ ನಡೆದ ಶ್ರೀ ಮಹಾಗಣಪತಿಯ ವೈಭವದ ಶೋಭಾಯಾತ್ರೆಯು ಭಕ್ತಿ, ಸಂಸ್ಕೃತಿ ಹಾಗೂ ಜನಪದ ಕಲೆಯ ಅಪೂರ್ವ ಸಂಗಮವಾಗಿ ಗಮನ ಸೆಳೆಯಿತು. ಶ್ರೀ ದೇವತಾ ಸಮಿತಿ ಅಧ್ಯಕ್ಷ ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ ಅವರ ನೇತೃತ್ವದಲ್ಲಿ ಏಳು ದಿನಗಳ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆದವು. ಧಾರ್ಮಿಕ ಕಾರ್ಯಕ್ರಮಗಳ ನೇತೃತ್ವವನ್ನು ಪುರೋಹಿತ ಸುಬ್ರಹ್ಮಣ್ಯ ಹೊಳ್ಳ ವಹಿಸಿದ್ದರು.

ಸೆ.20ರಂದು ಬೆಳಗ್ಗೆ 108 ಕಾಯಿ ಗಣಪತಿ ಹೋಮ ನಡೆಯಿತು. ಮಧ್ಯಾಹ್ನ ದೇವರ ಬಲಿ ಉತ್ಸವ ನೆರವೇರಿತು. ರಾತ್ರಿ ಸರ್ವವಾದ್ಯಗಳೊಂದಿಗೆ ಶ್ರೀ ದೇವರ ಬಲಿ ಉತ್ಸವ ನೆರವೇರಿದ ಬಳಿಕ ದರ್ಶನ ಬಲಿ ಉತ್ಸವ ನಡೆಯಿತು. ಹಂಸರೂಢ ರಥದಲ್ಲಿ ವಿರಾಜಮಾನರಾಗಿದ್ದ ಮಹಾಗಣಪತಿಗೆ ಉತ್ಸವ ಮೂರ್ತಿಯನ್ನು ಹೊತ್ತ ಬ್ರಹ್ಮವಾಹಕರು ಪ್ರದಕ್ಷಿಣೆಯೊಂದಿಗೆ ಹೆಜ್ಜೆ ಹಾಕುತ್ತಾ ದರ್ಶನಬಲಿ ನೆರವೇರಿಸಿದರು. ರಾತ್ರಿ 9.20ರ ಸುಮಾರಿಗೆ ಸ್ಥಳ ಭೂಮಿಯ ದೈವ ರಕೇಶ್ವರಿ ಹಾಗೂ ಕಾರೆಕ್ಕಾಡಿನ ಪಂಜುರ್ಲಿ ದೈವದ ಕೋಲ ನಡೆಯಿತು. ಶಶಾಂಕ್ ನೆಲ್ಲಿತ್ತಾಯ ಅವರು ದೈವಗಳ ಮಧ್ಯಸ್ಥರಾಗಿ ಸೇವೆ ಸಲ್ಲಿಸಿದರು.

ಬಳಿಕ ಶ್ರೀ ಮಹಾಗಣಪತಿಗೆ ಮಹಾಪೂಜೆ ನೆರವೇರಿತು. ಏಳು ದಿನಗಳ ಕಾರ್ಯಕ್ರಮದಲ್ಲಿ ಸಮರ್ಪಣಾ ಭಾವದಿಂದ ಸಹಕರಿಸಿದವರಿಗೆ ಶ್ರೀ ದೇವತಾ ಸಮಿತಿ ಅಧ್ಯಕ್ಷರಿಂದ ಪ್ರಸಾದ ವಿತರಿಸಲಾಯಿತು. ಮಹಾಪೂಜೆಯ ಬಳಿಕ ಭಕ್ತರ ಕಾತರಕ್ಕೆ ತೆರೆ ಎಳೆದಂತೆ ರಾತ್ರಿ 10.42ರ ಸುಮಾರಿಗೆ ಶ್ರೀ ಮಹಾಗಣಪತಿಯ ವೈಭವದ ಶೋಭಾಯಾತ್ರೆ ವೇದಿಕೆಯಿಂದ ಹೊರಟಿತು. ೧೦.೪೮ರ ಸುಮಾರಿಗೆ ಮೈದಾನದ ದ್ವಾರವನ್ನು ದಾಟಿದ ಶೋಭಾಯಾತ್ರೆಗೆ ಸುಡುಮದ್ದು ಪ್ರದರ್ಶನ ವಿಶೇಷ ಮೆರುಗು ನೀಡಿತು. ಚೆಂಡೆ, ಸರ್ವವಾದ್ಯ, ತಾಸೆ, ಸ್ಯಾಕ್ರೋ-ನ್ಗಳ ನಾದದ ನಡುವೆ ಸಾಗಿದ ಶೋಭಾಯಾತ್ರೆಯಲ್ಲಿ ವಿವಿಧ ಕಲಾ ತಂಡಗಳ ಪ್ರದರ್ಶನಗಳು ಜನಮನ ಸೆಳೆದವು. ಶ್ರೀ ಮಹಾಲಿಂಗೇಶ್ವರ ದೇವರ ಬೃಹತ್ ಭಾವಚಿತ್ರವನ್ನು ಹೊತ್ತ ವಾಹನ, ತಾಲೀಮು ಪ್ರದರ್ಶನ, ಗೊಂಬೆ ಕುಣಿತ, ಕುಣಿತ ಭಜನೆ ಸೇರಿದಂತೆ ವಿವಿಧ ಆಕರ್ಷಣೆಗಳು ಶೋಭಾಯಾತ್ರೆಯ ವೈಭವವನ್ನು ಹೆಚ್ಚಿಸಿದವು. ಗಣಪತಿಯ ಮೂರ್ತಿಯೊಂದಿಗೆ ದೈವಗಳೂ ಸಾಗುತ್ತಿದ್ದ ದೃಶ್ಯ ಭಕ್ತರ ಗಮನ ಸೆಳೆಯಿತು. ಸಾಂಪ್ರದಾಯಿಕ ವಾದ್ಯಗಳ ನಾದಕ್ಕೆ ಹೆಜ್ಜೆ ಹಾಕಿದ ಕಲಾವಿದರು ಹಾಗೂ ಭಕ್ತರು ಶೋಭಾಯಾತ್ರೆಗೆ ಮತ್ತಷ್ಟು ಮೆರಗು ತುಂಬಿದರು. ಶೋಭಾಯಾತ್ರೆಯಲ್ಲಿ ಭಾಗವಹಿಸಿದ ವಿವಿಧ ತಂಡಗಳ ಕಲಾ ಪ್ರದರ್ಶನವು ನೆಲ್ಲಿಕಟ್ಟೆ ದಿ. ಸುಧಾಕರ್ ಶೆಟ್ಟಿ ವೇದಿಕೆಯಲ್ಲಿ ವಿಶೇಷ ಆಕರ್ಷಣೆಯಾಯಿತು. ಬನ್ನೂರಿನ ಶನೀಶ್ವರ ಕುಣಿತ ಭಜನಾ ತಂಡದ ಕುಣಿತ ಭಜನೆ, ಕಲ್ಲಡ್ಕದ ಶಿಲ್ಪಾ ಗೊಂಬೆ ಬಳಗದ ಗೊಂಬೆ ಕುಣಿತ ಹಾಗೂ ಇತರ ಕಲಾ ಪ್ರದರ್ಶನಗಳು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾದವು.

ಮಂಗಳೂರಿನ ಮುನೀಶ್ವರ ವ್ಯಾಯಾಮ ಶಾಲೆಯ ವತಿಯಿಂದ ಮೈದಾನದಲ್ಲಿ ತಾಲೀಮು ಪ್ರದರ್ಶನ ನಡೆಯಿತು. ಶಿಲ್ಪಾ ಗೊಂಬೆ ಬಳಗದ ವತಿಯಿಂದ ತುಳುನಾಡಿನ ಜನಪದ ಸೊಗಡನ್ನು ಬಿಂಬಿಸುವ ಗೊಂಬೆಗಳ ಪ್ರದರ್ಶನ ಗಮನ ಸೆಳೆಯಿತು. ಅರವಿಂದ ಬೋಳಾರ್ ಸೇರಿದಂತೆ ತುಳು ನಾಟಕ ಕ್ಷೇತ್ರದ ಕಲಾವಿದರ ಗೊಂಬೆಗಳು ಹಾಗೂ ಮೋಟು-ಪಟ್ಟು ಗೊಂಬೆಗಳು ವಿಶೇಷ ಆಕರ್ಷಣೆಯಾಗಿದ್ದವು. ಕಿಲ್ಲೆ ಮೈದಾನದಲ್ಲಿ ಏಳು ದಿನಗಳ ಕಾಲ ನಡೆದ ಗಣೇಶೋತ್ಸವದ ಮತ್ತೊಂದು ಪ್ರಮುಖ ವಿಶೇಷತೆ ಮಹಾ ಅನ್ನಸಂತರ್ಪಣೆ. ಲಕ್ಷಾಂತರ ಭಕ್ತರಿಗೆ ಅನ್ನಪ್ರಸಾದ ವಿತರಿಸಲಾಯಿತು. ಶ್ರೀ ದೇವತಾ ಸಮಿತಿಯ ನೇತೃತ್ವದಲ್ಲಿ ತುಳಸಿ ಕೆಟರರ್ಸ್ನ ಹರೀಶ್ ರಾವ್ ಅವರ ತಂಡ ನಳಪಾಕದ ಸೇವೆ ಸಲ್ಲಿಸಿತು. ಪ್ರತಿದಿನವೂ ವೈವಿಧ್ಯಮಯ ಆಹಾರ ಪದಾರ್ಥಗಳೊಂದಿಗೆ ಪಾಯಸವನ್ನು ಭಕ್ತರಿಗೆ ಉಣ ಬಡಿಸಲಾಯಿತು. ಅನ್ನಸಂತರ್ಪಣೆಗೆ ಪ್ರತ್ಯೇಕ ಹಾಗೂ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಧ್ಯಾಹ್ನ ಆರಂಭವಾದ ಅನ್ನಪ್ರಸಾದ ಸೇವೆ ತಡ ರಾತ್ರಿ ತನಕವೂ ಮುಂದುವರಿಯುತ್ತಿತ್ತು. ನೆಲ್ಲಿಕಟ್ಟೆ ಮಿತ್ರವೃಂದದ ವತಿಯಿಂದ ಕಿಲ್ಲೆ ಗಣಪತಿಗೆ ಬೃಹತ್ ಹೂವಿನ ಮಾಲೆಯನ್ನು ಸಮರ್ಪಿಸಲಾಯಿತು.

ನೆಲ್ಲಿಕಟ್ಟೆಯಿಂದ ಮೆರವಣಿಗೆಯ ಮೂಲಕ ಕಿಲ್ಲೆ ಮೈದಾನಕ್ಕೆ ಮಾಲೆಯನ್ನು ತಂದು ಮಹಾಗಣಪತಿಗೆ ಅರ್ಪಿಸಲಾಯಿತು. ಸಮಯದ ಮಿತಿಯಿಲ್ಲದೆ ಆಗಮಿಸಿದ ಭಕ್ತರಿಗೆ ಅನ್ನಪ್ರಸಾದ ಹಾಗೂ ಪಾಯಸ ವಿತರಿಸುವ ಮೂಲಕ ಸೇವಾಭಾವ ಮೆರೆದರು. ಏಳು ದಿನಗಳ ಗಣೇಶೋತ್ಸವದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ವಿಶೇಷ ಆದ್ಯತೆ ನೀಡಲಾಗಿತ್ತು. ಭಜನೆ, ಸ್ಯಾಕ್ರೋಫೋನ್ ವಾದನ, ಸಂಗೀತ ಕಛೇರಿ, ವಿವಿಧ ನೃತ್ಯ ಕಾರ್ಯಕ್ರಮಗಳು, ಯಕ್ಷಗಾನ, ಮಕ್ಕಳ ಯಕ್ಷಗಾನ, ನಾಟಕ ಸೇರಿದಂತೆ ಹಲವು ಕಾರ್ಯಕ್ರಮಗಳು ಕಿಲ್ಲೆ ಮೈದಾನದಲ್ಲಿ ಕಲಾ ರಸದೌತಣ ನೀಡಿದವು. ಮಹಾಗಣಪತಿಯ ವೈಭವದ ಶೋಭಾಯಾತ್ರೆಯು ಕೋರ್ಟ್ ರಸ್ತೆ, ದರ್ಬೆ, ಪರ್ಲಡ್ಕ, ತಾಲ್ಲೂಕು ಆಫೀಸ್ ರಸ್ತೆ, ರಾಧಾಕೃಷ್ಣ ಮಂದಿರ, ಬೊಳುವಾರು, ಮಂಜಲ್ಪಡು ಕೆರೆಯಲ್ಲಿ ಶ್ರೀ ಗಣೇಶ ವಿಗ್ರಹವನ್ನು ವಿಸರ್ಜನೆ ಮಾಡಿ ಸಮಾಪ್ತಿಯಾಯಿತು.



