ಕರಾವಳಿಗರ ಬಹು ನಿರೀಕ್ಷೆಯ ವಂದೇ ಭಾರತ್ ರೈಲು ಶಿರಾಡಿಘಾಟ್ ಹತ್ತಿ ಬೆಂಗಳೂರು ಸಂಚರಿಸಲು ಆರಂಭಿಸಿದೆ. ಮಂಗಳೂರು-ಬೆಂಗಳೂರು ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಬೇಕು ಎನ್ನುವ ಮನವಿಗೆ ಸ್ಪಂದಿಸಿರುವ ರೈಲು ಇಲಾಖೆ ಇದೀಗ ಪೂರ್ಣ ಪ್ರಮಾಣದ ಪ್ರಾಯೋಗಿಕ ರೈಲು ಸಂಚಾರವನ್ನೂ ಆರಂಭಿಸಿದೆ. ಈ ನಡುವೆ ಪುತ್ತೂರು ರೈಲು ನಿಲ್ದಾಣದಲ್ಲಿ ಈ ರೈಲಿಗೆ ನಿಲುಗಡೆ ನೀಡಬೇಕು ಎನ್ನುವ ಬೇಡಿಕೆಯೂ ಕೇಳಿ ಬರಲಾರಂಭಿಸಿದೆ.

ಬಂದರು ನಗರಿ ಮಂಗಳೂರು ಮತ್ತು ರಾಜ್ಯ ರಾಜಧಾನಿ ಬೆಂಗಳೂರು ನಡುವೆ ಬಹು ನಿರೀಕ್ಷಿತ ವಂದೇ ಭಾರತ್ ರೈಲು ಓಡಾಡಲು ಆರಂಭಿಸಿದೆ. ರೈಲ್ವೇ ಇಲಾಖೆಗೆ ಈ ರೈಲು ಓಡಿಸಲು ಅತೀ ದೊಡ್ಡ ಸವಾಲಾಗಿದ್ದ 55 ಕಿಲೋಮೀಟರ್ ದೂರದ ಶಿರಾಡಿಘಾಟ್ ನಲ್ಲಿ ವಂದೇ ಭಾರತ್ ರೈಲು ಯಾವ ವೇಗದಲ್ಲಿ ಸಂಚರಿಸಬಹುದು ಎನ್ನುವುದೇ ಆಗಿತ್ತು. ಈ ಕಾರಣಕ್ಕಾಗಿ ಹಲವು ಬಾರಿ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಿಂದ ಸಕಲೇಶಪುರ ರೈಲು ನಿಲ್ದಾಣದವರೆಗೆ ಹಲವು ಬಾರಿ ವಂದೇ ಭಾರತ್ ರೈಲನ್ನು ಪರೀಕ್ಷಾರ್ಥ ಓಡಿಸಲಾಗಿತ್ತು. ಘಾಟ್ ನಲ್ಲಿ ಈ ರೈಲನ್ನು 40 ರಂದ 30 ಕಿಲೋಮೀಟರ್ ವೇಗದಲ್ಲಿ ಸುರಕ್ಷಿತವಾಗಿ ಓಡಿಸಬಹುದು ಎಂದು ಖಚಿತಪಡಿಸಿಕೊಂಡ ಬಳಿಕ ಇಲಾಖೆ ಮಂಗಳೂರು-ಬೆಂಗಳೂರು ಮಧ್ಯೆ ಪೂರ್ಣ ಪ್ರಮಾಣದ ಪ್ರಾಯೋಗಿಕ ಓಡಾಟವನ್ನು ಪ್ರಾರಂಭಿಸಿದೆ. ಸೆಪ್ಟೆಂಬರ್ 5 ರಂದು ಮೊದಲ ಪ್ರಯಾಣ ಬೆಳೆಸಿದರೆ, ಸೆಪ್ಟೆಂಬರ್ 10 ರಂದು ಮತ್ತೊಂದು ಎರಡನೇ ಸುತ್ತಿನ ಪರೀಕ್ಷೆ ನಡೆಸಲಾಗುತ್ತಿದೆ. ಪಡೀಲ್, ಮಂಗಳೂರು ಜಂಕ್ಷನ್, ಕಬಕ ಪುತ್ತೂರು, ಸುಬ್ರಹ್ಮಣ್ಯ ರೋಡ್, ಸಕಲೇಶಪುರ, ಹಾಸನ, ಯಶವಂತಪುರ ನಿಲ್ದಾಣದವರೆಗೆ ಈ ರೈಲು ಸಂಚರಿಸಲಿದೆ. ಎರಡನೇ ಪ್ರಾಯೋಗಿಕ ರೈಲು ಓಡಾಟದ ಮಧ್ಯೆ ಪುತ್ತೂರು ಕಬಕ ರೈಲು ನಿಲ್ದಾಣದಲ್ಲಿ ರೈಲು ನಿಲ್ಲಿಸುವ ನಿರೀಕ್ಷೆ ಇದ್ದರೂ, ರೈಲು ಈ ನಿಲ್ದಾಣದಲ್ಲಿ ನಿಲ್ಲಿಸದೆ ನೇರವಾಗಿ ಮಂಗಳೂರಿಗೆ ಪ್ರಯಾಣಿಸಿದೆ. ಬೆಂಗಳೂರಿನಿಂದ ಮಂಗಳೂರಿಗೆ ಬಂದ ಈ ರೈಲನ್ನು ಸ್ವಾಗತಿಸಲು ಪುತ್ತೂರು ಆಸುಪಾಸಿನ ಜನ ರೈಲು ನಿಲ್ದಾಣದಲ್ಲಿ ಜಮಾಯಿಸಿದ್ದರೂ, ರೈಲು ಮಾತ್ರ ನೇರವಾಗಿ ಸುಬ್ರಹ್ಮಣ್ಯ ರೈಲು ನಿಲ್ದಾಣದತ್ತ ಹೊರಟಿದೆ.
ಪುತ್ತೂರು ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲಿಗೆ ನಿಲುಗಡೆ ಕಲ್ಪಿಸಬೇಕು ಎಂದು ಪುತ್ತೂರು ಮತ್ತು ಆಸುಪಾಸಿನ ತಾಲೂಕಿನ ಜನ ಇಲಾಖೆ, ಸ್ಥಳೀಯ ಸಂಸದರಿಗೆ ಈಗಾಗಲೇ ಮನವಿ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಎರಡನೇ ದಿನದ ಪ್ರಾಯೋಗಿಕ ಓಡಾಟದಲ್ಲಿ ರೈಲು ನಿಲುಗಡೆಯಾಗುತ್ತೆ ಎನ್ನುವ ನಿರೀಕ್ಷೆಯಲ್ಲಿ ಜನ ರೈಲು ನಿಲ್ದಾಣದಲ್ಲಿ ರೈಲನ್ನು ನೋಡಲು ಜಮಾಯಿಸಿದ್ದರೂ, ರೈಲು ತನ್ನ ವೇಗವನ್ನು ಕೊಂಚ ತಗ್ಗಿಸಿ ನೇರವಾಗಿ ಬೆಂಗಳೂರಿನಿಂದ ಮಂಗಳೂರಿಗೆ, ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸಿದೆ.
ಮಂಗಳೂರು- ಬೆಂಗಳೂರು ನಡುವಿನ ಸಕಲೇಶಪುರ ತನಕ ಒಂದೇ ಹಳಿಯಿರುವ ಕಾರಣಕ್ಕಾಗಿ ರೈಲಿನ ವೇಗದಲ್ಲೂ ಕೊಂಚ ಇಳಿಮುಖ ಮಾಡಲಾಗಿದೆ. ಅಲ್ಲದೆ ಘಾಟ್ ಸೆಕ್ಷನ್ ನಲ್ಲಿಯೂ ರೈಲು ನಿಧಾನವಾಗಿ ಪ್ರಯಾಣಿಸುವ ಹಿನ್ನಲೆಯಲ್ಲಿ ವಂದೇ ಭಾರತ್ ಜನರ ನಿರೀಕ್ಷೆಯ ಮಟ್ಟದಲ್ಲಿ ಸಮಯದ ಪಾಲನೆ ಮಾಡೋದು ಕಷ್ಟಸಾಧ್ಯ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.
ವರದಿ :ಅನಿಶ್ ಕುಮಾರ್ ಪುತ್ತೂರು.


