ಪುತ್ತೂರು: ಕೆಆರ್ಐಡಿಎಲ್ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಮಾಡಿರುವ ಆರೋಪಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ತಿರುಗೇಟು ನೀಡಿದ್ದಾರೆ.

ಶಾಸಕ ಅಶೋಕ್ ಕುಮಾರ್ ರೈ ಅವರು ತಮ್ಮ ಕ್ಷೇತ್ರದಲ್ಲಿ ನಡೆಸಿರುವ ಎಲ್ಲ ಕಾಮಗಾರಿಗಳ ಕುರಿತು ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕೆಆರ್ಐಡಿಎಲ್ ಸಂಸ್ಥೆಯಲ್ಲಿ ಲಂಚದ ವ್ಯವಹಾರ ನಡೆಯುತ್ತಿದೆ ಎಂಬುದು ಶಾಸಕರಿಗೆ ತಿಳಿದಿಲ್ಲವೇ? ತಿಳಿದಿದ್ದರೂ ಪದೇ ಪದೇ ಅದೇ ಸಂಸ್ಥೆಗೆ ಕಾಮಗಾರಿಗಳನ್ನು ನೀಡುತ್ತಿರುವುದೇಕೆ ಎಂದು ಮಠಂದೂರು ಪ್ರಶ್ನಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆಗಳು ಇರುವಾಗ ಕೆಆರ್ಐಡಿಎಲ್ಗೆ ಮತ್ತೆ ಮತ್ತೆ ಕಾಮಗಾರಿ ವಹಿಸುತ್ತಿರುವ ಉದ್ದೇಶವೇನು? ಕಾಮಗಾರಿ ವಹಿಸಿದ ಬಳಿಕ ಅದೇ ಸಂಸ್ಥೆಯ ವಿರುದ್ಧ ಲಂಚದ ಆರೋಪ ಮಾಡುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಕಾಮಗಾರಿಗಳಲ್ಲೂ ವ್ಯತ್ಯಾಸವಾಗಿದೆ ಎಂದು ಆರೋಪಿಸಿದ ಮಠಂದೂರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲನಿಗಳಲ್ಲಿ ನಡೆಯಬೇಕಾದ ಕಾಮಗಾರಿಗಳನ್ನು ಬೇರೆ ಸಮುದಾಯದವರು ವಾಸಿಸುವ ಪ್ರದೇಶಗಳಲ್ಲಿ ನಡೆಸಲಾಗುತ್ತಿದೆ ಎಂದು ದೂರಿದ್ದಾರೆ.
ಈ ಎಲ್ಲ ಆರೋಪಗಳು ಮತ್ತು ಅವ್ಯವಹಾರಗಳ ಕುರಿತು ಸಮಗ್ರ ತನಿಖೆ ನಡೆಸಲು ಕಾಮಗಾರಿಗಳ ವಿವರಗಳನ್ನು ಲೋಕಾಯುಕ್ತಕ್ಕೆ ನೀಡಬೇಕು. ತನಿಖೆಯಲ್ಲಿ ತಪ್ಪಿತಸ್ಥರು ಕಂಡುಬಂದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಕೆಆರ್ಐಡಿಎಲ್ಗೆ ಕಾಮಗಾರಿ ನೀಡುವುದಿಲ್ಲ ಎಂದು ಹೇಳಿದ್ದು, ಆ ಸಂಸ್ಥೆ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ಪುತ್ತೂರಿನಲ್ಲಿ ಅದೇ ಸಂಸ್ಥೆಗೆ ಕಾಮಗಾರಿ ನೀಡಿರುವುದೇಕೆ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ ಎಂದು ಮಠಂದೂರು ಹೇಳಿದ್ದಾರೆ.
ಆಡಳಿತ ಪಕ್ಷದ ಶಾಸಕರೇ ತಮ್ಮದೇ ಸರ್ಕಾರದ ಅಧಿಕಾರಿಗಳ ವಿರುದ್ಧ ಲಂಚದ ಆರೋಪ ಮಾಡುತ್ತಿರುವುದು, ಸರ್ಕಾರಕ್ಕೆ ತನ್ನ ಅಧಿಕಾರಿಗಳ ಮೇಲೆ ಹಿಡಿತವಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಸಂಜೀವ ಮಠಂದೂರು ಆರೋಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಕಳ್ಳಿಮಾರು, ಪದಾಧಿಕಾರಿಗಳಾದ ಸುನೀಲ್ ದಡ್ಡು, ಸಾಜ ರಾಧಾಕೃಷ್ಣ ಆಳ್ವ, ಯುವರಾಜ ಪೆರಿಯಾತ್ತೋಡಿ, ರಾಜೇಶ್ ಬನ್ನೂರು, ಪ್ರಸನ್ನ ಮಾರ್ತಾ, ವಿಶ್ವನಾಥ ಕುಲಾಲ್ ಉಪಸ್ಥಿತರಿದ್ದರು.


