ಸರಕಾರಿ ಶಾಲಾ ಮಕ್ಕಳಿಗೆ ವಿತರಿಸಲಾಗುತ್ತಿರುವ ಚಪ್ಪಲಿ–ಶೂ–ಸಾಕ್ಸ್‌ಗಳ ಗುಣಮಟ್ಟದ ಬಗ್ಗೆ ಗಂಭೀರ ಆಕ್ಷೇಪ- ಸಮಗ್ರ ತನಿಖೆಗೆ SDMC ಸಮನ್ವಯ ಕೇಂದ್ರ ವೇದಿಕೆ(ರಿ.) ಆಗ್ರಹ

ರಾಜ್ಯದ ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಸರ್ಕಾರದ ವತಿಯಿಂದ ಉಚಿತವಾಗಿ ಚಪ್ಪಲಿ, ಶೂ ಹಾಗೂ ಸಾಕ್ಸ್‌ಗಳನ್ನು ಒದಗಿಸುವುದು ಸ್ವಾಗತಾರ್ಹ ಕ್ರಮವಾಗಿದೆ. ಆದರೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಈ ಸಾಮಗ್ರಿಗಳನ್ನು ಇಲಾಖೆಯೇ ನೇರವಾಗಿ ಖರೀದಿಸಿ ಶಾಲೆಗಳಿಗೆ ವಿತರಿಸುತ್ತಿರುವ ಪ್ರಕ್ರಿಯೆ ಹಾಗೂ ವಿತರಿಸಲಾಗುತ್ತಿರುವ ಚಪ್ಪಲಿಗಳ ಗುಣಮಟ್ಟದ ಬಗ್ಗೆ ಹಲವು ಗಂಭೀರ ಪ್ರಶ್ನೆಗಳು ಮತ್ತು ಆಕ್ಷೇಪಗಳು ಎಸ್ಡಿಎಂಸಿ ಮತ್ತು ಪೋಷಕರಿಂದ ಕೇಳಿಬರುತ್ತಿವೆ.

ಈ ಹಿಂದೆ ಸರಕಾರಿ ಶಾಲೆಗಳ ಮಕ್ಕಳಿಗೆ ಶೂ–ಚಪ್ಪಲಿ ಹಾಗೂ ಸಾಕ್ಸ್‌ಗಳನ್ನು ಖರೀದಿಸುವ ಸಂದರ್ಭದಲ್ಲಿ ಖರೀದಿ ಪ್ರಕ್ರಿಯೆಯನ್ನು ಸ್ಥಳೀಯ ಮಟ್ಟದಲ್ಲಿ ಕೈಗೊಳ್ಳುವ ವ್ಯವಸ್ಥೆ ಇತ್ತು. ಸಮೀಪದ ಶಾಲೆಗಳು ಸೇರಿ ಒಬ್ಬರಿಂದಲೇ ಸಾಮಗ್ರಿಗಳನ್ನು ಖರೀದಿಸಬಾರದು, ಇಲಾಖೆಯು ನಿಗದಿಪಡಿಸಿದ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿ ಸಾಮಗ್ರಿಗಳನ್ನು ಖರೀದಿಸಬೇಕು ಹಾಗೂ ಪ್ರತಿಷ್ಠಿತ ಕಂಪನಿಗಳ ಉತ್ಪನ್ನಗಳನ್ನು ಪರಿಗಣಿಸಬೇಕು ಎಂಬಂತಹ ನಿಯಮಗಳು ಮತ್ತು ಮಾರ್ಗಸೂಚಿಗಳಿದ್ದವು.
ಅದೇ ರೀತಿ, ಖರೀದಿಸಿದ ಶೂ ಅಥವಾ ಚಪ್ಪಲಿಗಳ ಗುಣಮಟ್ಟವನ್ನು ಪರಿಶೀಲಿಸಲು ಐದು ಸದಸ್ಯರ ಸಮಿತಿಯ ಮೂಲಕ ಗುಣಮಟ್ಟ ಪರಿಶೀಲನೆ ನಡೆಸಿ, ಮಕ್ಕಳಿಗೆ ವಿತರಿಸುವ ಮೊದಲು ಅವು ಬಳಕೆಗೆ ಯೋಗ್ಯವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವ ವ್ಯವಸ್ಥೆಯೂ ಇತ್ತು.

ಆದರೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಹಂತದಲ್ಲಿಯೇ ಖರೀದಿ ಪ್ರಕ್ರಿಯೆ ನಡೆಸಿ, ಅಲ್ಲಿಂದ ಜಿಲ್ಲಾ ಹಾಗೂ ತಾಲೂಕು ಹಂತದ ಶಿಕ್ಷಣಾಧಿಕಾರಿಗಳ ಕಚೇರಿಗಳ ಮೂಲಕ ಶಾಲೆಗಳಿಗೆ ಚಪ್ಪಲಿ, ಶೂ ಮತ್ತು ಸಾಕ್ಸ್‌ಗಳು ತಲುಪುತ್ತಿರುವ ವ್ಯವಸ್ಥೆ ಜಾರಿಯಲ್ಲಿದೆ. ಇದರಿಂದ ಸ್ಥಳೀಯವಾಗಿ ಗುಣಮಟ್ಟ ಪರಿಶೀಲನೆ ಮಾಡುವ ಅವಕಾಶವೂ ಕಡಿಮೆಯಾಗಿರುವುದಲ್ಲದೆ, ಶಾಲಾ ಮಟ್ಟದಲ್ಲಿ ಸಾಮಗ್ರಿಗಳ ಗುಣಮಟ್ಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರೂ ಅವುಗಳನ್ನು ಹಿಂತಿರುಗಿಸುವ ಅಥವಾ ಬದಲಾಯಿಸುವ ವ್ಯವಸ್ಥೆ ಸ್ಪಷ್ಟವಾಗಿರುವುದಿಲ್ಲ 

ಇದರ ಜೊತೆಗೆ ಮಕ್ಕಳ ಕಾಲಿನ ಅಳತೆಗಳನ್ನು ಶಿಕ್ಷಕರೇ ತೆಗೆದುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿರುವ ಬಗ್ಗೆಯೂ ಶಿಕ್ಷಕರು ಈ ಹಿಂದೆಯೇ ಆಕ್ಷೇಪ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಶಿಕ್ಷಕರ ಪ್ರಮುಖ ಕರ್ತವ್ಯವಾದ ಬೋಧನೆ ಮತ್ತು ಮಕ್ಕಳ ಶೈಕ್ಷಣಿಕ ಪ್ರಗತಿಯ ಮೇಲೆ ಪರಿಣಾಮ ಬೀಳದಂತೆ ಇಂತಹ ಹೆಚ್ಚುವರಿ ಕಾರ್ಯಗಳನ್ನು ನಿರ್ವಹಿಸುವ ವ್ಯವಸ್ಥೆಯನ್ನು ಇಲಾಖೆ ವೈಜ್ಞಾನಿಕವಾಗಿ ರೂಪಿಸಬೇಕಾಗಿದೆ.

 ಪ್ರಸ್ತುತ  ಶಾಲೆಗಳಿಗೆ ತಲುಪಿರುವ ಚಪ್ಪಲಿಗಳ ಗುಣಮಟ್ಟದ ಬಗ್ಗೆ ಪೋಷಕರು, SDMC ಸದಸ್ಯರು ಹಾಗೂ ಸಾರ್ವಜನಿಕರಿಂದ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ವಿತರಿಸಿರುವ ಚಪ್ಪಲಿಗಳ ಮೇಲೆ ತಯಾರಿಕಾ ಕಂಪನಿಯ ಹೆಸರು, ಉತ್ಪನ್ನದ ವಿವರಗಳು ಅಥವಾ ಗುಣಮಟ್ಟಕ್ಕೆ ಸಂಬಂಧಿಸಿದ ಅಗತ್ಯ ಮಾಹಿತಿಗಳು ಸ್ಪಷ್ಟವಾಗಿ ಕಾಣಿಸದಿರುವುದು ಕೂಡ ಪ್ರಶ್ನೆಗಳಿಗೆ ಕಾರಣವಾಗಿದೆ.

ಮಕ್ಕಳು ದಿನನಿತ್ಯ ಶಾಲೆಗೆ ಹೋಗುವ ಸಂದರ್ಭದಲ್ಲಿ ಬಳಸಬೇಕಾದ ಚಪ್ಪಲಿಗಳು ಸುರಕ್ಷಿತವಾಗಿ ಮತ್ತು ಆರಾಮವಾಗಿ ಬಳಸಲು ಯೋಗ್ಯವಾಗಿರಬೇಕು. ಆದರೆ ವಿತರಿಸಲಾಗುತ್ತಿರುವ ಚಪ್ಪಲಿಗಳ ಗುಣಮಟ್ಟವು ನಿರೀಕ್ಷಿತ ಮಟ್ಟದಲ್ಲಿಲ್ಲ ಎಂಬ ದೂರುಗಳಿದ್ದು, ಅವುಗಳನ್ನು ಮಕ್ಕಳಿಗೆ ನೀಡುವ ಮೊದಲು ಸಮರ್ಪಕ ಗುಣಮಟ್ಟ ಪರೀಕ್ಷೆ ನಡೆಸಲಾಗಿದೆಯೇ ಎಂಬುದನ್ನು ಇಲಾಖೆ ಸ್ಪಷ್ಟಪಡಿಸಬೇಕು.

ಮಕ್ಕಳಿಗೆ ನೀಡುವ ಉಚಿತ ಸೌಲಭ್ಯ ಎಂಬ ಕಾರಣಕ್ಕೆ ಅದರ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ಸರಕಾರಿ ಶಾಲೆಯ ಮಕ್ಕಳು ಕೂಡ ಇತರ ಮಕ್ಕಳಂತೆ ಉತ್ತಮ ಗುಣಮಟ್ಟದ ಸೌಲಭ್ಯ ಪಡೆಯುವ ಹಕ್ಕು ಹೊಂದಿದ್ದಾರೆ.

ಇಲಾಖೆಯೇ ರಾಜ್ಯ ಮಟ್ಟದಲ್ಲಿ ದೊಡ್ಡ ಪ್ರಮಾಣದಲ್ಲಿ ಶೂ, ಚಪ್ಪಲಿ ಮತ್ತು ಸಾಕ್ಸ್‌ಗಳನ್ನು ಖರೀದಿಸುವಾಗ:
ಟೆಂಡರ್ ಅಥವಾ ಖರೀದಿ ಪ್ರಕ್ರಿಯೆಯನ್ನು ಯಾವ ನಿಯಮದಡಿ ನಡೆಸಲಾಗಿದೆ?
ಯಾವ ಸಂಸ್ಥೆ/ಕಂಪನಿಗೆ ಖರೀದಿ ಆದೇಶ ನೀಡಲಾಗಿದೆ?
ಒಟ್ಟು ಎಷ್ಟು ಜೋಡಿ ಶೂ, ಚಪ್ಪಲಿ ಮತ್ತು ಸಾಕ್ಸ್‌ಗಳನ್ನು ಖರೀದಿಸಲಾಗಿದೆ?
ಪ್ರತಿ ಜೋಡಿಯ ಖರೀದಿ ದರ ಎಷ್ಟು?
ಗುಣಮಟ್ಟದ ಮಾನದಂಡಗಳನ್ನು ಯಾರು ನಿಗದಿಪಡಿಸಿದ್ದಾರೆ?
ಗುಣಮಟ್ಟ ಪರೀಕ್ಷೆಯನ್ನು ಯಾವ ಸಂಸ್ಥೆ ಅಥವಾ ಪ್ರಯೋಗಾಲಯದಿಂದ ಮಾಡಿಸಲಾಗಿದೆ?
ಶಾಲೆಗಳಿಗೆ ಕಳುಹಿಸುವ ಮೊದಲು ಗುಣಮಟ್ಟ ಪರಿಶೀಲನೆ ನಡೆಸಲಾಗಿದೆಯೇ?
ವಿತರಿಸಲಾಗುತ್ತಿರುವ ಉತ್ಪನ್ನಗಳ ಮೇಲೆ ಕಂಪನಿಯ ಹೆಸರು, ಉತ್ಪಾದನಾ ವಿವರಗಳು ಮತ್ತು ಅಗತ್ಯ ಗುರುತುಗಳಿಲ್ಲದಿದ್ದರೆ ಅದರ ಕಾರಣವೇನು?
ಕಳಪೆ ಗುಣಮಟ್ಟ ಕಂಡುಬಂದಲ್ಲಿ ಅವುಗಳನ್ನು ಹಿಂತಿರುಗಿಸಿ ಬದಲಾಯಿಸುವ ವ್ಯವಸ್ಥೆ ಏನು?
ಎಂಬ ಪ್ರಶ್ನೆಗಳಿಗೆ ಶಿಕ್ಷಣ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು.

ಹಿಂದಿನ ವ್ಯವಸ್ಥೆಯಲ್ಲಿ ಸ್ಥಳೀಯ ಖರೀದಿ, ವಿವಿಧ ಶಾಲೆಗಳ ನಡುವೆ ಸಮನ್ವಯ, ಇಲಾಖೆಯ ಸೂಚಿಸಿದ ಗುಣಮಟ್ಟದ ಮಾನದಂಡಗಳು ಹಾಗೂ ಐದು ಸದಸ್ಯರ ಸಮಿತಿಯ ಮೂಲಕ ಗುಣಮಟ್ಟ ಪರಿಶೀಲನೆ ಮುಂತಾದ ವ್ಯವಸ್ಥೆಗಳಿದ್ದರೆ, ಪ್ರಸ್ತುತ ಇಲಾಖೆಯೇ ನೇರವಾಗಿ ಖರೀದಿ ಮಾಡುವ ವ್ಯವಸ್ಥೆಯಲ್ಲಿ ಅವುಗಳನ್ನು ಹೇಗೆ ಅನುಸರಿಸಲಾಗಿದೆ ಎಂಬುದನ್ನು ತಿಳಿಸಬೇಕು.
ನಿಯಮಗಳನ್ನು ಬದಲಾಯಿಸುವುದು ಅಥವಾ ಕೇಂದ್ರಿಕೃತವಾಗಿ ಖರೀದಿ ಮಾಡುವುದು ಇಲಾಖೆಯ ನೀತಿ ನಿರ್ಧಾರವಾಗಿರಬಹುದು. ಆದರೆ ಯಾವುದೇ ವ್ಯವಸ್ಥೆಯಲ್ಲಿಯೂ ಮಕ್ಕಳಿಗೆ ದೊರೆಯುವ ಸಾಮಗ್ರಿಯ ಗುಣಮಟ್ಟ, ಖರೀದಿ ದರ ಮತ್ತು ಸಾರ್ವಜನಿಕ ಹಣದ ಸದ್ಬಳಕೆ ಅತ್ಯಂತ ಮುಖ್ಯವಾಗಿರಬೇಕು.

ಖರೀದಿ ಪ್ರಕ್ರಿಯೆಯ ವಿವರಗಳು, ಕಂಪನಿಯ ಮಾಹಿತಿ, ದರ, ಗುಣಮಟ್ಟ ಪರೀಕ್ಷೆ ಮತ್ತು ವಿತರಣೆಯ ವಿವರಗಳು ಸಾರ್ವಜನಿಕವಾಗಿ ಸ್ಪಷ್ಟವಾಗಿ ಲಭ್ಯವಿಲ್ಲದಿದ್ದರೆ ಸಹಜವಾಗಿಯೇ ಹಲವು ಅನುಮಾನಗಳಿಗೆ ಅವಕಾಶವಾಗುತ್ತದೆ.
ಆದ್ದರಿಂದ ಈ ಖರೀದಿ ಪ್ರಕ್ರಿಯೆಯಲ್ಲಿ ಯಾವುದೇ ಅಕ್ರಮ ಅಥವಾ ಅವ್ಯವಹಾರ ನಡೆದಿರುವ ಸಾಧ್ಯತೆಯನ್ನು ಮುಂಚಿತವಾಗಿ ತೀರ್ಮಾನಿಸುವ ಬದಲು, ಸಂಪೂರ್ಣ ಖರೀದಿ ಪ್ರಕ್ರಿಯೆ, ಟೆಂಡರ್ ದಾಖಲೆಗಳು, ದರಪಟ್ಟಿ, ಗುಣಮಟ್ಟ ಪರೀಕ್ಷಾ ವರದಿ ಹಾಗೂ ವಿತರಣೆ ದಾಖಲೆಗಳನ್ನು ಪರಿಶೀಲಿಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಕರ್ನಾಟಕ ರಾಜ್ಯ SDMC ಸಮನ್ವಯ ಕೇಂದ್ರ ವೇದಿಕೆಯು ಆಗ್ರಹಿಸುತ್ತದೆ.

ಸಾರ್ವಜನಿಕ ಹಣದಿಂದ ಖರೀದಿಸಲಾಗುತ್ತಿರುವುದರಿಂದ ಈ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಇರಬೇಕು.
ಅದರಿಂದ ಕಳಪೆ ಗುಣಮಟ್ಟದ ಚಪ್ಪಲಿಗಳನ್ನು ತಕ್ಷಣ ಹಿಂತೆಗೆದುಕೊಳ್ಳಬೇಕು
ಈಗಾಗಲೇ ಶಾಲೆಗಳಿಗೆ ವಿತರಿಸಲಾಗುತ್ತಿರುವ ಚಪ್ಪಲಿಗಳ ಗುಣಮಟ್ಟ ನಿಗದಿತ ಮಾನದಂಡಕ್ಕೆ ಹೊಂದಿಕೆಯಾಗದಿರುವುದು ಪರೀಕ್ಷೆಯಲ್ಲಿ ದೃಢಪಟ್ಟಲ್ಲಿ, ಅಂತಹ ಚಪ್ಪಲಿಗಳನ್ನು ಮಕ್ಕಳಿಗೆ ವಿತರಿಸುವುದನ್ನು ತಕ್ಷಣ ಸ್ಥಗಿತಗೊಳಿಸಬೇಕು.
ಈಗಾಗಲೇ ವಿತರಿಸಲಾಗಿರುವ ಕಳಪೆ ಗುಣಮಟ್ಟದ ಚಪ್ಪಲಿಗಳನ್ನು ಶಾಲೆಗಳಿಂದ ಹಿಂತೆಗೆದುಕೊಂಡು, ಮಕ್ಕಳಿಗೆ ಕನಿಷ್ಠ ಉಳಿದಿರುವ ಆರು ತಿಂಗಳ ಕಾಲ ಬಳಸಲು ಯೋಗ್ಯವಾಗಿರುವ ಉತ್ತಮ ಗುಣಮಟ್ಟದ ಚಪ್ಪಲಿ ಅಥವಾ ಶೂ ಮತ್ತು ಸಾಕ್ಸ್‌ಗಳನ್ನು ವಿತರಿಸಬೇಕು.
ಅಗತ್ಯವಿದ್ದಲ್ಲಿ ಪ್ರತಿ ಜಿಲ್ಲೆಯಲ್ಲಿ ಮಾದರಿ ಚಪ್ಪಲಿಗಳನ್ನು ಸಂಗ್ರಹಿಸಿ, ಸ್ವತಂತ್ರ ಗುಣಮಟ್ಟ ಪರೀಕ್ಷಾ ಸಂಸ್ಥೆಯ ಮೂಲಕ ಪರೀಕ್ಷೆ ನಡೆಸಬೇಕು. ಪರೀಕ್ಷಾ ವರದಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸಬೇಕು.

ಸರಕಾರಿ ಶಾಲೆಗಳ ಮಕ್ಕಳಿಗೆ ನೀಡಲಾಗುವ ಯಾವುದೇ ಸೌಲಭ್ಯವು ಶಾಲೆಯ ಮಕ್ಕಳಿಗೆ ನೇರವಾಗಿ ಸಂಬಂಧಿಸಿದ್ದಾಗಿರುವುದರಿಂದ, ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಗಳಾದ SDMCಗಳಿಗೆ ಅದರ ಗುಣಮಟ್ಟ ಪರಿಶೀಲನೆಯಲ್ಲಿ ಸೂಕ್ತ ಪಾತ್ರ ನೀಡಬೇಕು.
ಶಾಲೆಗೆ ಬಂದಿರುವ ಶೂ, ಚಪ್ಪಲಿ ಮತ್ತು ಸಾಕ್ಸ್‌ಗಳ ಗುಣಮಟ್ಟದ ಬಗ್ಗೆ ಪೋಷಕರು ಅಥವಾ SDMC ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರೆ, ಅವರ ದೂರನ್ನು ದಾಖಲಿಸಿ ಕೂಡಲೇ ಬದಲಿ ವ್ಯವಸ್ಥೆಯನ್ನು ಇಲಾಖೆ ರೂಪಿಸಬೇಕು.

ಪ್ರಸ್ತುತ ವಿತರಿಸಲಾಗುತ್ತಿರುವ ಶೂ–ಚಪ್ಪಲಿ–ಸಾಕ್ಸ್‌ಗಳ ಗುಣಮಟ್ಟವನ್ನು ತಕ್ಷಣ ಪರಿಶೀಲಿಸಬೇಕು.
ಕಳಪೆ ಗುಣಮಟ್ಟ ಕಂಡುಬಂದಲ್ಲಿ ಅಂತಹ ಸಾಮಗ್ರಿಗಳ ವಿತರಣೆಯನ್ನು ತಕ್ಷಣ ಸ್ಥಗಿತಗೊಳಿಸಬೇಕು.
ಈಗಾಗಲೇ ವಿತರಿಸಿರುವ ಕಳಪೆ ಗುಣಮಟ್ಟದ ಚಪ್ಪಲಿಗಳನ್ನು ಹಿಂತೆಗೆದುಕೊಂಡು ಉತ್ತಮ ಗುಣಮಟ್ಟದ ಚಪ್ಪಲಿ/ಶೂಗಳನ್ನು ನೀಡಬೇಕು.
ಖರೀದಿಸಿದ ಕಂಪನಿ, ಟೆಂಡರ್ ವಿವರ, ಒಟ್ಟು ಪ್ರಮಾಣ, ಪ್ರತಿ ಜೋಡಿಯ ದರ ಹಾಗೂ ಒಟ್ಟು ವೆಚ್ಚವನ್ನು ಸಾರ್ವಜನಿಕಗೊಳಿಸಬೇಕು.
ಗುಣಮಟ್ಟ ಪರೀಕ್ಷೆ ನಡೆಸಲಾಗಿದ್ದರೆ ಅದರ ವರದಿಯನ್ನು ಬಹಿರಂಗಪಡಿಸಬೇಕು.
ಖರೀದಿ ಪ್ರಕ್ರಿಯೆಯಲ್ಲಿ ಅನುಸರಿಸಲಾದ ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ಸಾರ್ವಜನಿಕರಿಗೆ ತಿಳಿಸಬೇಕು.
ಯಾವುದೇ ಅಕ್ರಮ ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು.
ಮುಂದಿನ ಶೈಕ್ಷಣಿಕ ವರ್ಷದಿಂದ ಮೊದಲಿನಂತೆಯೇ ಎಸ್ಡಿಎಂಸಿಯವರೆ ಖರೀದಿಸುವಂತಾಗಬೇಕು. ಖರೀದಿಗಳಲ್ಲಿ SDMC ಪ್ರತಿನಿಧಿಗಳು ಹಾಗೂ ಪೋಷಕರಿಗೂ ಗುಣಮಟ್ಟ ಪರಿಶೀಲನೆಯಲ್ಲಿ ಸೂಕ್ತ ಅವಕಾಶ ನೀಡಬೇಕು.

ಸರಕಾರಿ ಶಾಲಾ ಮಕ್ಕಳಿಗೆ ನೀಡಲಾಗುವ ಸೌಲಭ್ಯಗಳು ಕೇವಲ ಸರ್ಕಾರದ ಯೋಜನೆಯ ಭಾಗವಲ್ಲ; ಅವು ಮಕ್ಕಳ ಹಕ್ಕು ಮತ್ತು ಸಾರ್ವಜನಿಕರ ತೆರಿಗೆ ಹಣದಿಂದ ಒದಗಿಸಲಾಗುತ್ತಿರುವ ಸೌಲಭ್ಯಗಳಾಗಿವೆ. ಆದ್ದರಿಂದ “ಉಚಿತವಾಗಿ ಸಿಗುತ್ತಿದೆ” ಎಂಬ ಕಾರಣಕ್ಕೆ ಕಳಪೆ ಗುಣಮಟ್ಟದ ವಸ್ತುಗಳನ್ನು ಮಕ್ಕಳಿಗೆ ನೀಡುವುದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ.
ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಮೂಲಭೂತ ಸೌಲಭ್ಯಗಳೂ ದೊರೆಯಬೇಕು ಎಂಬುದು ಕರ್ನಾಟಕ ರಾಜ್ಯ SDMC ಸಮನ್ವಯ ಕೇಂದ್ರ ವೇದಿಕೆಯ ಸ್ಪಷ್ಟ ನಿಲುವಾಗಿದೆ.

ಮೊಯ್ದಿನ್ ಕುಟ್ಟಿ
ರಾಜ್ಯ ಸಂಚಾಲಕರು
ಕರ್ನಾಟಕ ರಾಜ್ಯ SDMC ಸಮನ್ವಯ ಕೇಂದ್ರ ವೇದಿಕೆ (ರಿ.)
9743734020
7090004020

Star Of Kudla

Learn More →

Leave a Reply

Your email address will not be published. Required fields are marked *