
ತುಳುನಾಡ ರಾಜಕೀಯದಲ್ಲಿ ಹೊಸ ಚಲನೆಯನ್ನು ಹುಟ್ಟುಹಾಕುವ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ, ಹೋರಾಟಗಾರ ನಾಯಕ ಯೋಗೀಶ್ ಶೆಟ್ಟಿ ಜೆಪ್ಪು ಅವರು ಮತ್ತೆ ಜನತಾದಳ (ಜೆಡಿಎಸ್) ಪಕ್ಷದ ಅಂಗಳಕ್ಕೆ ಕಾಲಿಟ್ಟಿದ್ದು, ಈ ಬೆಳವಣಿಗೆ ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಅವರೊಂದಿಗೆ ಶಶಿರಾಜ್ ಶೆಟ್ಟಿ ಅವರೂ ಜೆಡಿಎಸ್‌ಗೆ ಮರಳಿರುವುದು ಗಮನಾರ್ಹವಾಗಿದೆ.

ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಈ ಇಬ್ಬರು ನಾಯಕರು ಅಧಿಕೃತವಾಗಿ ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಈ ಸೇರ್ಪಡೆ ಕೇವಲ ರಾಜಕೀಯ ಕಾರ್ಯಕ್ರಮವಷ್ಟೇ ಅಲ್ಲ, ತುಳುನಾಡದಲ್ಲಿ ಜೆಡಿಎಸ್ ಪುನಶ್ಚೇತನದ ಮುನ್ಸೂಚನೆ ಎಂಬಂತೆ ಕಾಣಲಾಗುತ್ತಿದೆ.
ಯೋಗೀಶ್ ಶೆಟ್ಟಿ ಜೆಪ್ಪು ಅವರು ತುಳುನಾಡದ ಜನರ ಮಧ್ಯೆ ಹೋರಾಟಗಾರ ನಾಯಕನಾಗಿ ತನ್ನದೇ ಆದ ಗುರುತನ್ನು ನಿರ್ಮಿಸಿಕೊಂಡವರು. ಸಾಮಾಜಿಕ, ಸ್ಥಳೀಯ ಹಾಗೂ ಜನಪರ ವಿಚಾರಗಳಲ್ಲಿ ನೇರವಾಗಿ ಧ್ವನಿಯೆತ್ತಿ, ಹೋರಾಟದ ಮೂಲಕ ಜನರ ಗಮನ ಸೆಳೆದ ಅವರು, ತುಳುನಾಡ ರಕ್ಷಣಾ ವೇದಿಕೆಯ ಮೂಲಕ ಪ್ರಭಾವಿ ನಾಯಕತ್ವ ತೋರಿಸಿದ್ದರು.
ಅವರಂತಹ ಚಟುವಟಿಕೆಯ ನಾಯಕ ಮತ್ತೆ ಸಕ್ರಿಯ ರಾಜಕೀಯ ವೇದಿಕೆಗೆ ಮರಳಿರುವುದು ಜೆಡಿಎಸ್ ಪಕ್ಷಕ್ಕೆ ದಕ್ಷಿಣ ಕನ್ನಡದಲ್ಲಿ ಹೊಸ ಬಲ ನೀಡುವ ಸಾಧ್ಯತೆಯನ್ನು ಹೆಚ್ಚಿಸಿದೆ. ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಚೈತನ್ಯ ಕಳೆದುಕೊಂಡಂತೆ ಕಂಡುಬಂದ ಜೆಡಿಎಸ್‌ಗೆ, ಈ ವಾಪಸ್ಸು ಕಾರ್ಯಕರ್ತರಲ್ಲಿ ಹೊಸ ಉತ್ಸಾಹ ತುಂಬುವ ಬೆಳವಣಿಗೆಯಾಗಿದೆ.
ಯೋಗೀಶ್ ಶೆಟ್ಟಿ ಜೆಪ್ಪು ಮತ್ತು ಶಶಿರಾಜ್ ಶೆಟ್ಟಿ ಅವರು ಈ ಹಿಂದೆ ಜೆಡಿಎಸ್ ಪಕ್ಷದಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ ಪ್ರಭಾವ ಮೂಡಿಸಿದ್ದರು. ನಂತರ ಕಾರಣಾಂತರಗಳಿಂದ ಪಕ್ಷದಿಂದ ದೂರಾಗಿ ರಾಜಕೀಯೇತರ ಸಂಘಟನೆಗಳ ಮೂಲಕ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಮತ್ತೆ ತಮ್ಮ ಮೂಲ ರಾಜಕೀಯ ವೇದಿಕೆಗೆ ಮರಳಿರುವುದು, ಹಳೆಯ ಬಾಂಧವ್ಯಕ್ಕೆ ಹೊಸ ಆರಂಭವೆಂಬ ಸಂದೇಶವನ್ನು ನೀಡುತ್ತಿದೆ.
ಪಕ್ಷದ ಹಿರಿಯ ಮುಖಂಡರಾದ ಮಾಜಿ ಜಿಲ್ಲಾ ಅಧ್ಯಕ್ಷ ಎಂ.ಬಿ. ಸದಾಶಿವ್ ಮತ್ತು ಜಾಕೆ ಮಾಧವ ಗೌಡರ ಅವರ ಪ್ರಯತ್ನದಿಂದಲೇ ಈ ಘರ್ ವಾಪ್ಸಿ ಸಾಧ್ಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜೆಡಿಎಸ್ ಕೇಂದ್ರ ಕಚೇರಿಯಲ್ಲಿ ನಡೆದ ಈ ಸೇರ್ಪಡೆ ಕಾರ್ಯಕ್ರಮ ಪಕ್ಷದ ದೃಷ್ಟಿಯಿಂದ ತುಳುನಾಡ ಭಾಗಕ್ಕೆ ಮಹತ್ವ ನೀಡುವ ರಾಜಕೀಯ ಸಂದೇಶವನ್ನೂ ರವಾನಿಸಿದೆ.
ಇನ್ನೊಂದೆಡೆ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಜೆಡಿಎಸ್ ಪಕ್ಷದ ಸ್ಥಿತಿ ಕಳೆದ ಕೆಲವು ಸಮಯಗಳಿಂದ ನಿರೀಕ್ಷಿತ ಮಟ್ಟದಲ್ಲಿ ಕಾಣಿಸಿಕೊಂಡಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿದ್ದವು. ಜನಪರ ಹೋರಾಟಗಳ ಕೊರತೆ, ಕಾರ್ಯಕರ್ತರಲ್ಲಿ ನಿರಾಸೆ, ನಾಯಕತ್ವದ ಮಂದಗತಿ ಹಾಗೂ ಇತರ ಪಕ್ಷಗಳತ್ತ ವಲಸೆ ಇಂತಹ ಕಾರಣಗಳಿಂದ ಪಕ್ಷ ಸಂಘಟನಾ ಮಟ್ಟದಲ್ಲಿ ದುರ್ಬಲವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು.
ಈಂತಹ ಸವಾಲಿನ ನಡುವೆ, ಯೋಗೀಶ್ ಶೆಟ್ಟಿ ಜೆಪ್ಪು ಅವರಂತಹ ಮೈದಾನದ ನಾಯಕನ ಆಗಮನ ಜೆಡಿಎಸ್‌ಗೆ ಹೊಸ ಆಕ್ಸಿಜನ್ ನೀಡುವ ಬೆಳವಣಿಗೆಯಾಗಿ ಕಾಣುತ್ತಿದೆ. ಅವರ grassroots connect ಮತ್ತು ಹೋರಾಟದ ಹಿನ್ನಲೆ ಪಕ್ಷಕ್ಕೆ ಪುನರ್ಜೀವ ನೀಡುವ ಶಕ್ತಿ ಹೊಂದಿದೆ ಎಂದು ರಾಜಕೀಯ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗಿದೆ.
ಈಗ ಎಲ್ಲರ ಗಮನ ಜೆಡಿಎಸ್ ರಾಜ್ಯ ನಾಯಕತ್ವದ ಮುಂದಿನ ಹೆಜ್ಜೆಯ ಮೇಲೆ ನೆಟ್ಟಿದೆ. ಯೋಗೀಶ್ ಶೆಟ್ಟಿ ಜೆಪ್ಪು ಅವರಿಗೆ ಯಾವ ಹುದ್ದೆ ನೀಡಲಾಗುತ್ತದೆ? ಅವರ ಶಕ್ತಿಯನ್ನು ಸಂಘಟನಾ ಮಟ್ಟದಲ್ಲಿ ಹೇಗೆ ಬಳಸಿಕೊಳ್ಳಲಾಗುತ್ತದೆ? ತುಳುನಾಡದಲ್ಲಿ ಜೆಡಿಎಸ್ ಮತ್ತೆ ಬಲ ಪಡೆಯುತ್ತದೆಯೇ? ಎಂಬ ಪ್ರಶ್ನೆಗಳು ಇದೀಗ ಪ್ರಮುಖವಾಗಿವೆ.
ಒಟ್ಟಿನಲ್ಲಿ, ಈ ಘರ್ ವಾಪ್ಸಿ ತುಳುನಾಡ ರಾಜಕೀಯದಲ್ಲಿ ಹೊಸ ಚಲನೆಯನ್ನು ಹುಟ್ಟುಹಾಕುವ ಸಾಮರ್ಥ್ಯ ಹೊಂದಿದೆ. ಯೋಗೀಶ್ ಶೆಟ್ಟಿ ಜೆಪ್ಪು ಅವರಂತಹ ಹೋರಾಟಗಾರ ನಾಯಕನಿಗೆ ಸೂಕ್ತ ಅವಕಾಶ ನೀಡಿದರೆ, ಜೆಡಿಎಸ್‌ಗೆ ದಕ್ಷಿಣ ಕನ್ನಡದಲ್ಲಿ ಹೊಸ ಅಧ್ಯಾಯ ಆರಂಭವಾಗುವ ಸಾಧ್ಯತೆ ಇದೆ.


