ಬೆಂಗಳೂರು ಲಾಡ್ಜ್‌ನಲ್ಲಿ ಪುತ್ತೂರಿನ ಯುವಕನ ನಿಗೂಢ ಸಾವು

ಪುತ್ತೂರು : ಪುತ್ತೂರು ತಾಲೂಕಿನ ಕೋಡಿಂಬಾಡಿ ಗ್ರಾಮದ ಸೇಡಿಯಾಪು ನಿವಾಸಿ ತಕ್ಷಿತ್ (20) ಎಂಬ ಯುವಕ ಬೆಂಗಳೂರಿನ ವಸತಿಗೃಹದಲ್ಲಿ ನಿಗೂಢವಾಗಿ ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಕ್ಷಿತ್ ಅವರು ಸೇಡಿಯಾಪಿನಲ್ಲಿ ತಂದೆ ಪ್ರಸಾದ್, ತಾಯಿ ಮತ್ತು ಅಕ್ಕನೊಂದಿಗೆ ವಾಸಿಸುತ್ತಿದ್ದರು. ಅಕ್ಕನಿಗೆ ಈಗಾಗಲೇ ವಿವಾಹವಾಗಿದೆ. ಶುಕ್ರವಾರ ಬೆಳಗ್ಗೆಯಿಂದ ತಂದೆ ಪ್ರಸಾದ್ ಅವರು ತಕ್ಷಿತ್‌ಗೆ ಕರೆ ಮಾಡುತ್ತಿದ್ದರೂ ಆತ ಕರೆ ಸ್ವೀಕರಿಸಿರಲಿಲ್ಲ. ಸಂಜೆ ವೇಳೆಗೆ ಮಡಿವಾಳ ಪೊಲೀಸರು ಕರೆಮಾಡಿ ತಕ್ಷಿತ್ ವಸತಿಗೃಹದಲ್ಲಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ತಕ್ಷಿತ್ ಕೊಠಡಿ ಪಡೆಯಲು ನೀಡಿದ್ದ ಆಧಾರ್ ಕಾರ್ಡ್‌ನಲ್ಲಿ ಕೌಡಿಚ್ಚಾರು ವಿಳಾಸವಿದ್ದುದರಿಂದ ಪ್ರಾರಂಭದಲ್ಲಿ ಪೊಲೀಸರು ಅಲ್ಲಿ ಸಂಪರ್ಕಿಸಿದ್ದರು. ನಂತರ ಅವರು ಸೇಡಿಯಾಪಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಮಾಹಿತಿ ದೊರಕಿತು. ಅಂತ್ಯಸಂಸ್ಕಾರವನ್ನು ತಮಿಳುನಾಡಿನಲ್ಲಿ ನೆರವೇರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಎಂಟು ದಿನಗಳಿಂದ ಜತೆಗಿದ್ದ ಜೋಡಿ
ತಕ್ಷಿತ್ ಮಂಗಳೂರು ಪಣಂಬೂರಿನ ಕಾಲೇಜೊಂದರಲ್ಲಿ ಬಿಬಿಎ ಓದುತ್ತಿದ್ದರು. ಅದೇ ಕಾಲೇಜಿನಲ್ಲಿ ವೀರಾಜಪೇಟೆಯ ವಿದ್ಯಾರ್ಥಿನಿಯೊಬ್ಬಳೂ ಇದ್ದಳು. ಬ್ಯಾಕ್‌ಲಾಗ್ ಕಾರಣದಿಂದ ಇಬ್ಬರೂ ಕಾಲೇಜು ಬಿಟ್ಟಿದ್ದರು ಎಂದು ತಿಳಿದುಬಂದಿದೆ.

ತಕ್ಷಿತ್ ಮನೆಯಿಂದ ಮೈಸೂರಿಗೆ ಓದಲು ಹೋಗುತ್ತಿದ್ದೇನೆ ಎಂದು ಹೇಳಿ ವಾಸ್ತವದಲ್ಲಿ ಅಕ್ಟೋಬರ್ 9ರಿಂದ ಬೆಂಗಳೂರಿನ ಗ್ರಾಂಡ್ ಚಾಯ್ಸ್ ವಸತಿಗೃಹದಲ್ಲಿ ಆ ವಿದ್ಯಾರ್ಥಿನಿಯೊಂದಿಗೆ ವಾಸಿಸುತ್ತಿದ್ದರು. ಇಬ್ಬರೂ ಊಟವನ್ನು ಆನ್‌ಲೈನ್ ಮೂಲಕ ತರಿಸಿಕೊಂಡು ಕೊಠಡಿಯಲ್ಲೇ ಉಳಿದುಕೊಂಡಿದ್ದರು.

ಘಟನೆಯ ದಿನವೂ ಅವರು ಆನ್‌ಲೈನ್‌ನಲ್ಲಿ ಆಹಾರ ತರಿಸಿಕೊಂಡಿದ್ದು, ನಂತರ ಇಬ್ಬರಿಗೂ ಫುಡ್ ಪಾಯ್ಸನ್ ಲಕ್ಷಣಗಳು ಕಾಣಿಸಿಕೊಂಡಿವೆ ಎನ್ನಲಾಗಿದೆ. ಅದಾದ ನಂತರ ಯುವತಿ ವಸತಿಗೃಹದಿಂದ ಹೊರಟು ಹೋಗಿದ್ದಳು. ತಕ್ಷಿತ್ ಕೊಠಡಿಯಿಂದ ಹೊರಗೆ ಬರದೇ ಇದ್ದ ಕಾರಣ ಸಿಬ್ಬಂದಿ ಅನುಮಾನ ಪಟ್ಟು ಮಾಸ್ಟರ್ ಕೀ ಬಳಸಿ ಬಾಗಿಲು ತೆರೆಯುವಾಗ ತಕ್ಷಿತ್ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *