ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಕಡಿವಾಣ ಹಾಕಲು ಹೊಸ ಕಾನೂನು ಸುಗ್ರೀವಾಜ್ಞೆ ಮೂಲಕ ಜಾರಿ,ನಿಯಮ ಉಲ್ಲಂಘಿಸಿ ಸಾಲ ವಸೂಲಿ ಮಾಡಿದರೆ ಕ್ರಮ,3 ವರ್ಷ ಜೈಲು

ಬೆಂಗಳೂರು : ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳದ ವಿರುದ್ಧ ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೆ ರಾಜ್ಯ ಸರ್ಕಾರ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ಕಡಿವಾಣ ಹಾಕಲು
ಮುಂದಾಗಿದ್ದು, ಸಾಲಗಾರರಿಗೆ ಕಿರುಕುಳ ಕೊಡುವುದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವ ಹೊಸ ಕಾನೂನನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ನಿರ್ಧರಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯನವರಅಧ್ಯಕ್ಷತೆಯಲ್ಲಿ ಇಂದು ನಡೆದ ರಾಜ್ಯದ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಾರ್ಯಾಚರಣೆ ಮತ್ತು ಪರಿಣಾಮಗಳ ಕುರಿತ ಉನ್ನತ ಮಟ್ಟದ ಸಭೆಯಲ್ಲಿ ಕಾನೂನು ಬಾಹಿರವಾಗಿ ನಡೆದುಕೊಳ್ಳುವ ಹಣಕಾಸು ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡುವ ತೀರ್ಮಾನವನ್ನು ಕೈಗೊಳ್ಳಲಾಗಿದೆ.

ಪರವಾನಗಿ ಪಡೆದು ಸಾಲಗಾರರಿಗೆ ಸಾಲ ಕೊಡುವ ಮೈಕ್ರೋ ಫೈನಾನ್ಸ್ ಕಂಪೆನಿಗಳು ನಿಯಮ ಬಾಹಿರವಾಗಿ ವರ್ತಿಸುವುದನ್ನು ತಡೆಯಲು ಹಾಗೂ ಪರವಾನಗಿ ಪಡೆಯದೆ ಮೀಟರ್ ಬಡ್ಡಿ ದಂಧೆ ನಡೆಸುವ ಫೈನಾನ್ಸ್ ಕಂಪೆನಿಗಳ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಈ ಕಠಿಣ ಕಾಯ್ದೆಯನ್ನು ಜಾರಿ ಮಾಡಲಾಗುತ್ತಿದೆ.

ಈ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳ ತಡೆಯಲು ಹೊಸ ಕಾಯ್ದೆಯನ್ನು ಸುಗ್ರೀವಾಜ್ಞೆ ಮೂಲಕ ಜಾರಿ ಮಾಡಲು ನಿರ್ಧರಿಸಿದ್ದೇವೆ ಶೀಘ್ರದಲ್ಲೇ ಕಾನೂನನ್ನು ಜಾರಿ ಮಾಡುತ್ತೇವೆ ಎಂದು ಹೇಳಿದರು.’

ಯಾವುದೇ ಹಣಕಾಸು ಸಂಸ್ಥೆಗಳು ಸಾಲಗಾರರಿಗೆ ಸಾಲ ಕೊಡಬೇಡಿ ಎಂದು ನಾವು ಹೇಳಿಲ್ಲ. ಆದರೆ, ಕಾನೂನು ಮೀರಿ ಸಾಲ ವಸೂಲಾತಿಗೆ ಮುಂದಾದರೆ ಅದನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದ್ದೇವೆ. ನಿಯಮಗಳನ್ನು ಪಾಲಿಸದ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.

5 ಗಂಟೆಯ ನಂತರ ಯಾರು ಸಾಲ ವಸೂಲಾತಿಗೆ ಹೋಗಬಾರದು, ರೌಡಿಗಳನ್ನು ಬಳಸದಂತೆಯೂ ಸೂಚನೆ ನೀಡಿದ್ದೇನೆ. ಆರ್‌ಬಿಐ ನಿಯಮದಂತೆ ನಡೆದುಕೊಳ್ಳಲು ಸೂಚನೆ ನೀಡಲಾಗಿದೆ. ಕಾನೂನ ಕಾನೂನು ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವವರಿಗೆ ರಕ್ಷಣೆ ಕೊಡುತ್ತೇವೆ ಎಂದು ಅವರು ಹೇಳಿದರು.

ಕಾನೂನು ಪಾಲಿಸದವರ ವಿರುದ್ಧ ಕ್ರಮ ನಿಶ್ಚಿತ. ಪರವಾನಗಿ ಪಡೆಯದೆ ಸಾಲ ಕೊಡದ ಸಂಸ್ಥೆಗಳ ವಿರುದ್ಧವೂ ಕ್ರಮಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು. ಯಾವುದೇ ಹಣಕಾಸು ಸಂಸ್ಥೆಗಳು ಶೇ. 17.07ಕ್ಕಿಂತ ಹೆಚ್ಚಿನ ಬಡ್ಡಿ ವಿಧಿಸುವಂತಿಲ್ಲ. ಒಬ್ಬರಿಗೆ ಮೂರಕ್ಕಿಂತ ಹೆಚ್ಚು ಬಾರಿ ಸಾಲ ನೀಡುವಂತಿಲ್ಲ. ಇವೆಲ್ಲ ನಿಯಮಗಳನ್ನು ಪಾಲಿಸಲೇಬೇಕು ಎಂದು ಅವರು ಹೇಳಿದರು. ಆರ್‌ಬಿಐ ನಿಯಮಗಳನ್ನು ಉಲ್ಲಂಘಿಸಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲಗಾರರಿಗೆ ಕಿರುಕುಳ ನೀಡುವುದನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿ ಇಂತಹ ಸಂಸ್ಥೆಗಳ ಮುಖ್ಯಸ್ಥರ ವಿರುದ್ಧ ಕನಿಷ್ಠ ೩ ವರ್ಷ ಜೈಲು ಶಿಕ್ಷೆಗೆ ಅವಕಾಶ ನೀಡುವ ಅಂಶ ಈ ನೂತನ ಕಾಯ್ದೆಯಲ್ಲಿ ಇರಲಿದೆ ಎಂದು ಹೇಳಲಾಗಿದೆ.

ಕಾನೂನನ್ನು ಮೀರಿ ಸಾಲಗಾರರಿಗೆ ಕಿರುಕುಳ ನೀಡಿದರೆ ಪ್ರಕರಣ ದಾಖಲಿಸಿ ಕ್ರಮಕೈಗೊಳ್ಳುತ್ತೇವೆ. ಇಂದು ನಡೆದ ಸಭೆಯಲ್ಲಿ ಮೈಕ್ರೋಫೈನಾನ್ಸ್ ಅಸೋಸಿಯೇಷನ್ ಹಾಗೂ ಆರ್‌ಬಿಐ ಅಧಿಕಾರಿಗಳ ಅಭಿಪ್ರಾಯಗಳನ್ನು ಆಲಿಸಿದ್ದೇವೆ ಎಂದು ಹೇಳಿದರು. ಸಾಲಗಾರರ ವಿರುದ್ಧ ದೌರ್ಜನ್ಯವೆಸಗಬಾರದು. ಕಿರುಕುಳಗಳನ್ನು ನೀಡಬಾರದು, ಆರ್‌ಬಿಐ ನಿಯಮಗಳನ್ನು ಪಾಲಿಸಬೇಕು ಹೆಚ್ಚು ಬಡ್ಡಿಯನ್ನು ವಿಧಿಸಬಾರದು ಎಂದು ಎಚ್ಚರಿಕೆ
ನೀಡಿದ್ದೇವೆ. ನಿಯಮ ಮೀರಿದರೆ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಅವರು ಹೇಳಿದರು.

ಈ ಹೊಸ ಕಾಯ್ದೆಯಲ್ಲಿ ಯಾವುದೇ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾಲಗಾರರಿಗೆ ಕಿರುಕುಳ ಕೊಟ್ಟರೆ ಅವರ ವಿರುದ್ಧ ಜಾಮೀನು ರಹಿತ ಪ್ರಕರಣ ದಾಖಲಿಸಿ ಆರೋಪ ಸಾಬೀತಾದರೆ ಮೂರು ವರ್ಷ ಕಠಿಣ ಶಿಕ್ಷೆ, ಜತೆಗೆ ಫೈನಾನ್ಸ್ ಕಂಪೆನಿಗಳ ಲೈಸೆನ್ಸ್ ರದ್ದು ಮಾಡುವ ಅಂಶಗಳು ಈ ನೂತನ ಕಾಯ್ದೆಯಲ್ಲಿ ಇರಲಿದೆ ಎಂದು ಹೇಳಲಾಗಿದೆ.

ಮೈಕ್ರೋ ಫೈನಾನ್ಸ್ ಸಂಸ್ಥೆಗಳನ್ನು ನಿಯAತ್ರಿಸುವ ಈ ಹೊಸ ಕಾಯ್ದೆಯನ್ನು ವಿಧಾನ ಮಂಡಲದ ಮುಂದಿನ ಅಧಿವೇಶನದಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲು ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ. ಆರ್‌ಬಿಐ ಪರವಾನಗಿ ಪಡೆದು ಸಾಲ ನೀಡುತ್ತಿರುವ ಸಂಸ್ಥೆಗಳು ಯಾವುದೇ ಕಾರಣಕ್ಕೂ ಆರ್‌ಬಿಐ ನಿಯಮಗಳನ್ನು ಉಲ್ಲಂಘಿಸಬಾರದು. ಉಲ್ಲAಘಿಸಿದರೆ ಅಂತಹ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಲು ಇಂದಿನ ಸಭೆಯಲ್ಲಿ ಚರ್ಚೆಗಳು ನಡೆದವು ಎನ್ನಲಾಗಿದೆ. ಆರ್‌ಬಿಐ ಪರವಾನಗಿ ಪಡೆಯದೆ ಖಾಸಗಿಯಾಗಿ ಮೀಟರ್ ಬಡ್ಡಿ ದಂಧೆ ನಡೆಸುತ್ತಿರುವ ಹಣಕಾಸು ಸಂಸ್ಥೆಗಳ ವಿರುದ್ಧವೂ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಈ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್, ಕಾನೂನು ಸಚಿವ ಹೆಚ್.ಕೆ. ಪಾಟೀಲ್, ಕಂದಾಯ ಸಚಿವ ಕೃಷ್ಣಭೈರೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅತೀಕ್ ಅಹಮದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಗೃಹ ಇಲಾಖೆಯ ಒಳಾಡಳಿತ, ಕಂದಾಯ, ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.

News Editor

Learn More →

Leave a Reply

Your email address will not be published. Required fields are marked *