ಪ್ರೀತಿ ನಿರಾಕರಿಸಿದಕ್ಕೆ ಚಾಕುವಿನಿಂದ ಇರಿದು ಯುವತಿಯ ಕೊಲೆ; ಆರೋಪಿ ಪರಾರಿ.

ಹುಬ್ಬಳ್ಳಿ: ಪ್ರೀತಿ ನಿರಾಕರಿಸಿದ ಕಾರಣಕ್ಕೆ ಕೋಪಗೊಂಡ ಯುವಕ, ಯುವತಿಯ ಮನೆಗೆ ನುಗ್ಗಿ ಆಕೆ ಮಲಗಿರುವಾಗಲೇ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಹುಬ್ಬಳ್ಳಿಯ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ವೀರಾಪುರದಲ್ಲಿ ನಡೆದಿದೆ.

ಕೊಲೆಯಾದ ಯುವತಿಯನ್ನು ಅಂಜಲಿ ಅಂಬಿಗೇರ (20) ಹಾಗೂ ಕೊಲೆಗೈದ ಯುವಕ ವಿಶ್ವ ಅಲಿಯಾಸ್ ಗಿರೀಶ್ ಸಾವಂತ್ (21)ಎಂದು ಗುರುತಿಸಲಾಗಿದೆ.

ನೇಹಾ ಮಾದರಿಯಲ್ಲಿ ಹತ್ಯೆ ಮಾಡುತ್ತೇನೆ ಎಂದು ಅಂಜಲಿ ಅಂಬಿಗೇರಗೆ ವಿಶ್ವ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಅದರಂತೆಯೇ ಬುಧವಾರ ಬೆಳಗ್ಗೆ 5.30ಕ್ಕೆ ಮನೆಗೆ ನುಗ್ಗಿ ಚಾಕುವಿನಿಂದ ಇರಿದಿದ್ದಾನೆ. ಮನೆಯವರು ತಡೆಯಲು ಮುಂದಾದರೂ ಬಿಡದೆ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.

ಈ ಹಿಂದೆ ಮೈಸೂರಿಗೆ ಬಾ ಎಂದು ಅಂಜಲಿಗೆ ವಿಶ್ವ ಧಮ್ಕಿ ಹಾಕಿದ್ದ. ಅಕಸ್ಮಾತ್ ನೀನು ನನ್ನ ಜೊತೆ ಬರದೆ ಹೋದರೆ ನಿರಂಜನ ಹಿರೇಮಠ ಮಗಳಿಗೆ ಆದ ಹಾಗೆಯೇ ನಿನಗೂ ಮಾಡುತ್ತೇನೆ ಎಂದು ಧಮ್ಕಿ ಹಾಕಿದ್ದ. ಈತನ ವಿರುದ್ಧ ಹಲವು ಕಳ್ಳತನ ಪ್ರಕರಣಗಳಲ್ಲಿ ಶಾಮೀಲಾದ ಆರೋಪವೂ ಇದೆ. ಜತೆಗೆ, ಬೈಕ್ ಕಳ್ಳತನದಲ್ಲಿಯೂ ಆರೋಪಿಯಾಗಿದ್ದಾನೆ.

ಮನೆಗೆ ನುಗ್ಗಿದ ವಿಶ್ವ ಅಂಜಲಿಯನ್ನು ಆಕೆಯ ಅಜ್ಜಿ ಹಾಗೂ ಇಬ್ಬರು ಸಹೋದರಿಯರ ಮುಂದೆಯೇ ಭೀಕರವಾಗಿ ಹತ್ಯೆ ಮಾಡಿದ್ದಾನೆ. ಮನೆ ತುಂಬೆಲ್ಲಾ ಎಳೆದಾಡಿ ಚಾಕುವಿನಿಂದ ಇರಿದಿದ್ದಾನೆ. ಮೊದಲಿಗೆ ಮನೆಯ ಪಡಸಾಲಿಯಲ್ಲಿ ಅಂಜಲಿಗೆ ಚಾಕು ಹಾಕಿದ ವಿಶ್ವ, ಬಳಿಕ ಕುತ್ತಿಗೆ ಹಿಡಿದು ಗೋಡೆಯತ್ತ ಎಳೆದಕೊಂಡು ಹೋಗಿ ಹೊಟ್ಟೆ ಭಾಗಕ್ಕೆ ಚಾಕು ಹಾಕಿದ್ದಾನೆ. ಅಲ್ಲಿಂದ ಅಡುಗೆಯ ಮನೆಗೆ ಎಳೆದೊಯ್ದು ಮನ ಬಂದಂತೆ ಚಾಕು ಚುಚ್ಚಿದ್ದಾನೆ. ಅಂಜಲಿ ಕೊನೆಯುಸಿರೆಳೆದಿದ್ದಾಳೆ. ಈತ ಯುವತಿಯನ್ನು ಹತ್ಯೆ ಮಾಡಿದ್ದು, ನಂತರ ತಲೆಮರೆಸಿಕೊಂಡಿದ್ದಾನೆ.

News Editor

Learn More →

Leave a Reply

Your email address will not be published. Required fields are marked *