
ಬಂಟ್ವಾಳ: ಅಕ್ರಮವಾಗಿ ಮರಳು ಸಾಗಾಟ : ಎಂಟು ಮಂದಿಯ ಬಂಧನ : ಟಿಪ್ಪರ್ ಹಾಗೂ ಮರಳು ವಶ
ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಸಮೀಪ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಎಂಟು ಮಂದಿಯನ್ನು ವಶಕ್ಕೆ ಪಡೆದಿರುವ ಬಂಟ್ವಾಳ ನಗರ ಠಾಣೆ ಪೊಲೀಸರು ಎರಡು ಟಿಪ್ಪರ್ ಲಾರಿ ಮತ್ತು ಮರಳನ್ನು ಜಪ್ತಿ ಮಾಡಿರುವುದಾಗಿ ತಿಳಿಯಲಾಗಿದೆ.
ಲಾರಿಗಳ ಚಾಲಕರಾದ ಸರ್ಫರಾಝ್ ಅಹ್ಮದ್, ಕಿರಣ್, ಮುಹಮ್ಮದ್ ಇಸ್ಮಾಯಿಲ್ ಹಾಗೂ ಮಾಲಕರಾದ ಅಬ್ದುಲ್ ಅಝೀಝ್, ಅವಿಲ್ ಕ್ರಾಸ್ತಾ, ಮುಹಮ್ಮದ್ ಆರಿಫ್ ಟಿಪ್ಪರ್ ಗಳಿಗೆ ಮರಳು ಸರಬರಾಜು ಮಾಡಿದ ಆರೋಪಿಗಳಾದ ವಳಚ್ಚಿಲ್ ನ ಸತ್ತಾರ್ ಮತ್ತು ಅಝರುದ್ದೀನ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಎರಡು ಟಿಪ್ಪರ್ ಲಾರಿಗಳ ಅಂದಾಜು ಮೌಲ್ಯ ಸುಮಾರು ತಲಾ 10 ಲಕ್ಷ ರೂ. ಹಾಗೂ ಸುಮಾರು 3,500 ರೂ. ಮೌಲ್ಯದ ತಲಾ 3 ಯುನಿಟ್ ಮರಳನ್ನು ಹಾಗೂ ಇನ್ನೊಂದು ಟಿಪ್ಪರ್ ಲಾರಿಯ ಅಂದಾಜು ಮೌಲ್ಯ ಸುಮಾರು ತಲಾ 4 ಲಕ್ಷ ರೂ. ಹಾಗೂ ಸುಮಾರು 3,500 ರೂ. ಮೌಲ್ಯದ ಮರಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಸೋಮವಾರ ರಾತ್ರಿ ತಲಪಾಡಿ ಕಡೆಯಿಂದ ಬರುತ್ತಿದ್ದ ಮೂರು ಟಿಪ್ಪರ್ ಲಾರಿಗಳನ್ನು ಪೊಲೀಸರು ತಡೆದು ನಿಲ್ಲಿಸಿ ಚಾಲಕರನ್ನು ವಿಚಾರಿಸಿದಾಗ ಯಾವುದೇ ಪರವಾನಿಗೆ ಇಲ್ಲದೇ ವಳಚ್ಚಿಲ ಎಂಬಲ್ಲಿಂದ ಅಕ್ರಮವಾಗಿ ಮರಳು ತುಂಬಿಸಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಆಧಾರದಲ್ಲಿ ಬಂಟ್ವಾಳ ನಗರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ರಾಮಕೃಷ್ಣ ಹಾಗೂ ಸಿಬ್ಬಂದಿ ಉಮೇಶ, ಗೋಪಾಲ ಈ ಕಾರ್ಯಾಚರಣೆ ನಡೆಸಿದ್ದಾರೆ ಎಂದು ಪೊಲೀಸರಿಂದ ತಿಳಿದು ಬಂದಿದೆ.


