
ಕಾರವಾರ: ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಯ ಮೇಲೆ ಮತಾಂಧರು ಕಲ್ಲು ತೂರಾಟ ನಡೆಸಿದ್ದು ಖಂಡನೀಯವಾಗಿದ್ದು, ಕಾಂಗ್ರೆಸ್ ಸರ್ಕಾರ ಪ್ರತಿಯೊಂದು ಘಟನೆಯಲ್ಲೂ ಹಿಂದುಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದ ಓಲೈಕೆ ಪರಿಣಾಮವಾಗಿ ಮತಾಂಧರು ಹಿಂದುಗಳ ಹಬ್ಬದಲ್ಲಿ ಕಲ್ಲು ತೂರುವಷ್ಟು ಧೈರ್ಯ ತೋರುತ್ತಿದ್ದಾರೆ. ಇದರಿಂದ ಹಿಂದುಗಳು ಹಬ್ಬವನ್ನೇ ಆಚರಿಸದಂತಹ ಪರಿಸ್ಥಿತಿ ಎದುರಾಗಿದೆ. ಇದೊಂದು ಹಿಂದು ವಿರೋಧಿ ಸರ್ಕಾರವಾಗಿದೆ. ಕಲ್ಲು ತೂರಾಟ ನಡೆಸಿದ್ದನ್ನು ವಿರೋಧಿಸಿದ ಅಮಾಯಕ ಮಹಿಳೆಯರು, ವೃದ್ಧರ ಮೇಲೆ ಲಾಠಿ ಪ್ರಹಾರ ನಡೆಸಲಾಗಿದೆ. ಸರ್ಕಾರ ಪೊಲೀಸರನ್ನು ತಮ್ಮ ಹಿಡನ್ ಅಜೆಂಡಾ ಜಾರಿಗೊಳಿಸಲು ಬಳಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಕಲ್ಲು ತೂರಾಟ ನಡೆಸಿದ ಸಮಾಜ ಘಾತುಕರಿಗೆ ಕಠಿಣ ಶಿಕ್ಷೆಯಾಗಬೇಕು. ಇನ್ನು ಮುಂದೆ ಹಿಂದುಗಳ ತಂಟೆಗೆ ಅವರು ಬರಬಾರದು. ಸರ್ಕಾರ ಕೂಡಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ರೂಪಾಲಿ ಎಸ್.ನಾಯ್ಕ ಆಗ್ರಹಿಸಿದ್ದಾರೆ.

