ಚಿಕಿತ್ಸೆ ನಿರಾಕರಣೆ: ಮಂಗಳೂರಿನ ಪ್ರತಿಷ್ಠಿತ ಎ.ಜೆ. ಆಸ್ಪತ್ರೆಗೆ ಕಾನೂನು ಸೇವೆಗಳ ಪ್ರಾಧಿಕಾರ ನೋಟೀಸ್

ಚಿಕಿತ್ಸೆ ನಿರಾಕರಣೆ: ಮಂಗಳೂರಿನ ಪ್ರತಿಷ್ಠಿತ ಎ.ಜೆ. ಆಸ್ಪತ್ರೆಗೆ ಕಾನೂನು ಸೇವೆಗಳ ಪ್ರಾಧಿಕಾರ ನೋಟೀಸ್

ಕೂಲಿ ಕಾರ್ಮಿಕರೊಬ್ಬರಿಗೆ ಚಿಕಿತ್ಸೆ ನಿರಾಕರಣೆ ಮಾಡಿದ ಹಿನ್ನೆಲೆಯಲ್ಲಿ ಮಂಗಳೂರಿನ ಪ್ರತಿಷ್ಠಿತ ಎ.ಜೆ. ಆಸ್ಪತ್ರೆಗೆ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ನೋಟೀಸ್ ಜಾರಿಗೊಳಿಸಿದೆ.

ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಜೈಬುನ್ನಿಸಾ ಅವರು ಈ ನೋಟಿಸ್ ಜಾರಿಗೊಳಿಸಿದ್ದಾರೆ.

ಆಸ್ಪತ್ರೆಯು ABARK ಯೋಜನೆಯಡಿ ಪ್ಯಾನಲ್ ಆಸ್ಪತ್ರೆಯ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದರೂ ಅರ್ಹ ಫಲಾನುಭವಿಗೆ ಚಿಕಿತ್ಸೆ ನಿರಾಕರಿಸಿತ್ತು. ಈ ಬಗ್ಗೆ ಪ್ರಾಧಿಕಾರಕ್ಕೆ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಬಗ್ಗೆ ಸೂಕ್ತ ಉತ್ತರ ನೀಡುವಂತೆ ಪ್ರಾಧಿಕಾರ ತನ್ನ ನೋಟೀಸ್‌ನಲ್ಲಿ ಸೂಚಿಸಿದೆ.

ಮೆಡಿಕಲ್ ಕೌನ್ಸಿಲ್ ನೀತಿಶಾಸ್ತ್ರದ ಪ್ರಕಾರ ಮತ್ತು ದೇಶದ ಸಂವಿಧಾನದ ಪ್ರಕಾರ ಯಾರೊಬ್ಬರಿಗೂ ಆಸ್ಪತ್ರೆ ಚಿಕಿತ್ಸೆ ನಿರಾಕರಣೆ ಮಾಡುವಂತಿಲ್ಲ. ಆದರೂ, ಆಸ್ಪತ್ರೆಗೆ ಅರ್ಹ ಫಲಾನುಭವಿಗೆ ಚಿಕಿತ್ಸೆ ನಿರಾಕರಿಸಿರುವುದು ಗಮನಕ್ಕೆ ಬಂದಿದೆ.

ಬೆನ್ನು ಮೂಳೆ ಮುರಿತದ ಪರಿಣಾಮ ಕೊಡಗು ಜಿಲ್ಲೆಯ ಶ್ರೀ ಶಿವಕುಮಾರ್ ಎಂಬವರು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಚಿಕಿತ್ಸೆಗಾಗಿ ಆಗಮಿಸಿದ್ದರು. ಅವರು ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕಾರ್ಡ್ ಹೊಂದಿದ್ದು ಸೂಕ್ತ ಹಾಗೂ ಉಚಿತ ಚಿಕಿತ್ಸೆಗೆ ಅರ್ಹರಾಗಿದ್ದರು. ಅವರನ್ನು ABARK ಯೋಜನೆಯಡಿ ಅರ್ಹ ಫಲಾನುಭವಿ ಎಂದು ಪರಿಗಣಿಸದೆ ಶಸ್ತ್ರಚಿಕಿತ್ಸೆ ನಂತರದ ಚಿಕಿತ್ಸೆಯನ್ನು ನೀಡಲು ಆಸ್ಪತ್ರೆ ನಿರಾಕರಿಸಿತ್ತು. ಈ ಬಗ್ಗೆ ಸಂತ್ರಸ್ತರು ಪ್ರಾಧಿಕಾರದ ಮುಂದೆ ದೂರು ಸಲ್ಲಿಸಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದೂರು ನೀಡಿದ ದಿನದಂದೇ ನೋಟೀಸ್ ಜಾರಿಗೊಳಿಸಿದೆ.

ಯಾವುದೇ ವ್ಯಕ್ತಿಯ ಸಮಸ್ಯೆಗೆ ಕಾನೂನಾತ್ಮಕ ಮತ್ತು ಉಚಿತ ನೆರವು ನೀಡುವುದು ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಆದ್ಯ ಕರ್ತವ್ಯವಾಗಿದೆ ಎಂಬುದನ್ನು ನ್ಯಾ. ಜೈಬುನ್ನಿಸಾ ಅವರು ನೆನಪಿಸಿದ್ದಾರೆ.

News Editor

Learn More →

Leave a Reply

Your email address will not be published. Required fields are marked *