
ಕುಂದಾಪುರ: ಯುವಕನೊಬ್ಬನನ್ನು ಹನಿಟ್ಯ್ರಾಪ್ ನಲ್ಲಿ ಸಿಲುಕಿಸಿದ ತಂಡವೊಂದನ್ನು ಯುವಕ ಕಂಪ್ಲೆಂಟ್ ನೀಡಿದ ಕೆಲವೇ ಗಂಟೆಗಳಲ್ಲಿ ಹುಡುಕಿ ಮಹಿಳೆ ಸೇರಿದಂತೆ ಎಲ್ಲಾ ಆರೋಪಿಗಳನ್ನು ಕುಂದಾಪುರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತರನ್ನು ನಾವುಂದ ಬಡಾಕೆರೆಯ ಅಬ್ದುಲ್ ಸವಾದ್ ಯಾನೆ ಅಚ್ಚು (28), ಗುಲ್ವಾಡಿ ಬೋಳ್ಕಟ್ಟೆಯ ಸೈಪುಲ್ಲಾ (38), ಹಂಗಳೂರಿನ ಮೊಹಮ್ಮದ್ ನಾಸೀರ್ ಶರೀಫ್ (38), ಮೂಡುಗೋಪಾಡಿಯ ಅಬ್ದುಲ್ ಸತ್ತಾರ್ (23), ನಾಗೋಡಿಯ ಅಬ್ದುಲ್ ಅಜೀಜ್ (26) ಹಾಗೂ ಎಂಕೋಡಿಯ ಆಸ್ಮಾ (43) ಎಂದು ಗುರುತಿಸಲಾಗಿದೆ. ಮಂಗಳೂರಿನಲ್ಲಿ ನೆಲೆಸಿರುವ ಕಾಸರಗೋಡು ಮೂಲದ ಸಂದೀಪ್ ಕುಮಾರ್ (37) ಹನಿಟ್ರ್ಯಾಪ್ ಗೆ ಬಿದ್ದ ವ್ಯಕ್ತಿ
ಸಂದೀಪ್ ಕುಮಾರ್ 3 ತಿಂಗಳ ಹಿಂದೆ ಕುಂದಾಪುರಕ್ಕೆ ಬಂದಿದ್ದಾಗ ಅಬ್ದುಲ್ ಸವಾದ್ ಮತ್ತು ಆತನ ಸ್ನೇಹಿತರಾದ ಉಳಿದ ಆರೋಪಿಗಳ ಪರಿಚಯವಾಗಿತ್ತು. ಈ ವೇಳೆ ಆಸ್ಮಾ ಎಂಬ ಮಹಿಳೆಯ ಪರಿಚಯವೂ ಕೂಡ ಆಗಿತ್ತು. ಈ ವೇಳೆ ಆಸ್ಮಾ ಸಂದೀಪ್ ಜೊತೆ ಸಲುಗೆಯಿಂದ ಮಾತುಕತೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಬಳಿಕ ಆಕೆ ತನ್ನೊಂದಿಗೆ ಅನೈತಿಕ ಸಂಬಂಧಕ್ಕೆ ಸಂದೀಪ್ ಅವರನ್ನು ಪ್ರೇರೇಪಿಸಿದ್ದಾಳೆ. ಅಲ್ಲದೇ ಸಂದೀಪ್ ಗೆ ಸೆ. 2 ರಂದು ಕೊಟೇಶ್ವರಕ್ಕೆ ಬರುವಂತೆ ತಿಳಿಸಿದ್ದಾಳೆ. ಅದರಂತೆ ಬಂದ ಸಂದೀಪ್‌ನನ್ನು ರಿಕ್ಷಾದಲ್ಲಿ ಆಸ್ಮಾ ಮೂಡುಗೋಪಾಡಿಯಲ್ಲಿರುವ ತನ್ನ ಬಾಡಿಗೆ ಮನೆಗೆ ಕರೆದುಕೊಂಡು ಹೋದಳು. ಅದೇ ವೇಳೆಗೆ ಉಳಿದ ಆರೋಪಿಗಳನ್ನು ಕರೆಸಿಕೊಂಡಿದ್ದಳು. ಆರೋಪಿಗಳೆಲ್ಲರೂ ಸೇರಿಕೊಂಡು 3 ಲಕ್ಷ ರೂ. ಹಣ ಕೊಟ್ಟು ಹೋಗಬೇಕು ಎಂದು ಬೆದರಿಸಿದರು.
ಆಗ ಸಂದೀಪ್ ಹೆದರಿ ಓಡಿ ಹೋಗಲು ಪ್ರಯತ್ನಿಸಿದ್ದು, ಆರೋಪಿಗಳು ಅವರ ಕೈಗಳನ್ನು ನೈಲಾನ್ ಹಗ್ಗದಿಂದ ಕಟ್ಟಿ ಕೈಯಿಂದ ಹಲ್ಲೆ ಮಾಡಿದರು. ಸೈಪುಲ್ಲಾ ರಾಡ್‌ನಿಂದ ಭುಜ, ಬೆನ್ನಿಗೆ ಹೊಡೆದು ಪ್ಯಾಂಟ್ ಜೇಬಿನಲ್ಲಿದ್ದ 6,200 ರೂ.ಗಳನ್ನು ಸೈಪುಲ್ಲಾ ಹಾಗೂ ಆಸ್ಮಾ ಬಲವಂತದಿಂದ ಕಸಿದುಕೊಂಡರು. ಅನಂತರ ಆಸ್ಮಾಳು ಗೂಗಲ್ ಪೇ ಮೂಲಕ ಹಣ ಹಾಕುವಂತೆ ಒತ್ತಾಯಿಸಿದಳು. ಸಂದೀಪ್ ತನ್ನ ಎಸ್‌ಬಿಐ ಬ್ಯಾಂಕ್ ಖಾತೆಯಿಂದ ಗೂಗಲ್ ಪೇ ಮೂಲಕ ಸೈಪುಲ್ಲಾನ ಮೊಬೈಲ್ ಸಂಖ್ಯೆಗೆ 5 ಸಾವಿರ ರೂ. ಹಣ ವರ್ಗಾವಣೆ ಮಾಡಿದರು.
ಆರೋಪಿಗಳು ಇನ್ನಷ್ಟು ಹಣ ಕಳುಹಿಸುವಂತೆ ಆಗ್ರಹಿಸಿದಾಗ ಸಂದೀಪ್ ಹಣವಿಲ್ಲವೆಂದರು. ಆಗ “ನಿನ್ನನ್ನು ಇಲ್ಲಿಯೇ ಕೊಲೆ ಮಾಡಿ ಹುಗಿದು ಹಾಕುತ್ತೇವೆ’ ಎಂದು ಬೆದರಿಸಿ ಮತ್ತೆ ಹಲ್ಲೆ ಮಾಡಿದರು. ಇದರಿಂದ ಹೆದರಿದ ಸಂದೀಪ್ ಮತ್ತೆ ಸೈಪುಲ್ಲಾ ಮೊಬೈಲ್ ನಂಬರ್‌ಗೆ ಒಟ್ಟು 30 ಸಾವಿರ ರೂ. ವಗಾರ್ವಣೆ ಮಾಡಿದರು. ಆರೋಪಿಗಳು ಎಟಿಎಂ ಕಾರ್ಡನ್ನು ಕಿತ್ತುಕೊಂಡು ಪಿನ್ ನಂಬರ್ ಪಡೆದು ಸಂದೀಪನನ್ನು ಕೊಠಡಿಯಲ್ಲಿ ಕೂಡಿಹಾಕಿ 40 ಸಾವಿರ ರೂ. ಹಣ ನಗದೀಕರಿಸಿಕೊಂಡಿದ್ದಾರೆ. ಬಳಿಕ ಕಾರ್ಡನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದರು. ರಾತ್ರಿ 11.30ರ ಸುಮಾರಿಗೆ ಸಂದೀಪ್‌ನನ್ನು ಹೋಗು ಎಂದು ಹೇಳಿ ಬೆದರಿಸಿ ಕಳುಹಿಸಿದ್ದರು. ಬಳಿಕ ಸಂದೀಪ್ ಕುಂದಾಪುರ ನಗರ ಠಾಣೆಗೆ ಬುಧವಾರ ದೂರು ನೀಡಿದ್ದರು.
ದೂರು ದಾಖಲಾಗುತ್ತಿದ್ದಂತೆ ಉಡುಪಿ ಎಸ್‌ಪಿ ಹರಿರಾಮ್ ಶಂಕರ ಆದೇಶದಂತೆ ಹೆಚ್ಚುವರಿ ಎಸ್‌ಪಿ ಸುಧಾಕರ ನಾಯ್ಕ ಮಾರ್ಗದರ್ಶನದಲ್ಲಿ, ಕುಂದಾಪುರ ಡಿವೈಎಸ್ಪಿ ಎಚ್. ಡಿ. ಕುಲಕರ್ಣಿ ನಿರ್ದೇಶನದಲ್ಲಿ ನಗರ ಠಾಣಾ ಎಸ್‌ಐಗಳಾದ ನಂಜಾ ನಾಯ್ಕ, ಪುಷ್ಪಾ ನೇತೃತ್ವದಲ್ಲಿ ಸಿಬಂದಿಯಾದ ಪ್ರೀನ್ಸ್, ಘನಶ್ಯಾಮ್, ಚಾಲಕರಾದ ರಾಜು, ನಾಗೇಶ, ಮಹಾಬಲ, ರಾಘವೇಂದ್ರ, ಗೌತಮ್, ಭಾಗೀರತಿ, ನಾಗಶ್ರೀ ಮತ್ತು ರೇವತಿ ಅವರ ತಂಡ ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳನ್ನು ಕೋಟೇಶ್ವರದಲ್ಲಿ ವಶಕ್ಕೆ ಪಡೆದು ವಿಚಾರಣೆ ಮಾಡಿದ ವೇಳೆ ಸಂದೀಪ್ ಬಳಿ ಸುಲಿಗೆ ಮಾಡಿರುವುದು ತಿಳಿದುಬಂದಿದೆ. ಆರೋಪಿಗಳನ್ನು ಕುಂದಾಪುರದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
