
ಸರ್ಕಾರಿ ಅಧಿಕಾರಿಗಳು ಅಜ್ಞಾನದಿಂದ ಮಾಡುವ ಕರ್ತವ್ಯ ಲೋಪಕ್ಕೆ ಯಾವುದೇ ಕ್ಷಮೆ ಕೊಡಲಾಗದು. ಜಾತಿ ಪ್ರಮಾಣ ಪತ್ರ ನೀಡುವಾಗ ಕಾನೂನಿನ ಬಗ್ಗೆ ಉದ್ದೇಶಪೂರ್ವಕ ಲೋಪ ತೋರಿದ್ದ ಜಿಲ್ಲಾಧಿಕಾರಿ ಸೇರಿದಂತೆ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿಯ ಅಧ್ಯಕ್ಷರು ಸೇರಿ ಎಲ್ಲ ಸದಸ್ಯರಿಗೆ 2 ಲಕ್ಷ ದಂಡ ವಿಧಿಸಿ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಕರ್ನಾಟಕ ಸರ್ಕಾರದ ಹೆಚ್ಚುವರಿ ಸರ್ಕಾರಿ ಅಭಿಯೋಜಕಿಯಾಗಿ ನೇಮಕಗೊಂಡಿದ್ದ ಮಹಿಳೆಯೊಬ್ಬರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡುವಾಗ ಡಿಸಿ ನೇತೃತ್ವದ ಪರಿಶೀಲನಾ ಸಮಿತಿ ಕಾನೂನು ಬಗ್ಗೆ ಉದ್ದೇಶಪೂರ್ವಕವಾಗಿ ಉದಾಸೀನತೆ ತೋರಿತ್ತು. ಈ ಲೋಪದ ಅಜ್ಞಾನದಿಂದ ಮಾಡಿದ್ದರೂ ಇಂತಹ ಕರ್ತವ್ಯ ಲೋಪಕ್ಕೆ ನ್ಯಾಯಾಲಯಗಳು ಆಶ್ರಯ ನೀಡಲಾಗದು ಎಂದು ನ್ಯಾಯಪೀಠ ಖಡಕ್ ಆಗಿ ನುಡಿಯಿತು.
ಅಲ್ಲದೆ, ದಂಡದ ಮೊತ್ತವಾದ 2 ಲಕ್ಷ ರೂ.ಗಳನ್ನು ತಮ್ಮದೇ ಜೇಬಿನಿಂದ ಒಂದು ತಿಂಗಳಲ್ಲಿ ಪಾವತಿಸುವಂತೆ ಆದೇಶ ನೀಡಿತು.
ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಯಾವಾಗಲೂ ತಂದೆಯ ಆದಾಯವನ್ನು ಆಧರಿಸುತ್ತದೆಯೇ ವಿನಃ ಪತಿಯ ಆದಾಯವನ್ನಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಹೆಚ್ಚುವರಿ ಸರ್ಕಾರಿ ಅಭಿಯೋಜಕಿಯಾಗಿ ಆಯ್ಕೆಯಾಗಿರುವ ಅರ್ಜಿದಾರೆ ಬಿ.ಎನ್. ಮುತ್ತುಲಕ್ಷ್ಮಿ ಅವರು ವೇತನ ಮತ್ತು ಹಣಕಾಸಿನ ಸೌಲಭ್ಯಗಳನ್ನು ಹೊರತುಪಡಿಸಿ ಎಲ್ಲ ಸೌಲಭ್ಯಗಳಿಗೂ ಅರ್ಹರಾಗಿದ್ದಾರೆ ಎಂದು ನ್ಯಾಯಪೀಠ ತನ್ನ ತೀರ್ಪಿನಲ್ಲಿ ಹೇಳಿದೆ.
ಹಾಸನ ಜಿಲ್ಲಾ ಜಾತಿ ಮತ್ತು ಆದಾಯ ಪರಿಶೀಲನಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಉದ್ದೇಶಪೂರ್ವಕವಾಗಿ ಕಾನೂನನ್ನು ಉಪೇಕ್ಷಿಸಿದ್ದಾರೆ. ಇದರಿಂದ ಅರ್ಜಿದಾರರಾದ ಮುತ್ತುಲಕ್ಷ್ಮಿ ಅವರು ಅನಗತ್ಯವಾಗಿ ನ್ಯಾಯಾಲಯದ ಕದ ತಟ್ಟುವಂತಾಗಿದೆ. ಇದರಿಂದ ಅವರಿಗೆ 12 ತಿಂಗಳು ಉದ್ಯೋಗ ನಷ್ಟವಾಗಿದೆ ಎಂದು ನ್ಯಾಯಪೀಠ ತೀವ್ರ ಬೇಸರ ವ್ಯಕ್ತಪಡಿಸಿತು.
ಈ ನೋವಿಗೆ ಜಿಲ್ಲಾ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಮಿತಿಯ ಸದಸ್ಯರು ನೇರವಾಗಿ ಹೊಣೆಯಾಗಿದ್ದಾರೆ. ಈ ನಷ್ಟವನ್ನು ಅವರು ತುಂಬಿಕೊಡಬೇಕಿದೆ. ದುಬಾರಿ ದಂಡ ವಿಧಿಸುವುದು ಅರ್ಜಿದಾರರಿಗೆ ನಷ್ಟ ತುಂಬಿಕೊಡುವುದಕ್ಕೆ ಮಾತ್ರವಲ್ಲ, ಸರ್ಕಾರಿ ಕೆಲಸದಲ್ಲಿ ಇರುವವರಿಗೆ ನಿರ್ಲಕ್ಷ್ಯದಿಂದ ಉಂಟು ಮಾಡುವ ಕರ್ತವ್ಯಲೋಪಕ್ಕೆ ನ್ಯಾಯಾಲಯ ಯಾವುದೇ ಕಾರಣಕ್ಕೂ ಆಶ್ರಯ ಒದಗಿಸುವುದಿಲ್ಲ ಎಂಬುದನ್ನು ಎಚ್ಚರಿಸುವುದಕ್ಕಾಗಿ ಎಂದು ನ್ಯಾಯಮೂರ್ತಿಗಳು ಖಡಕ್ ಆಗಿ ಆದೇಶ ಹೊರಡಿಸಿದರು


