ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಕೇಸ್: ಪ್ರಿಯಾಂಕ್ ಖರ್ಗೆ ಆಪ್ತ ಸೇರಿ ಐವರ ಬಂಧನ.

ರಾಜಕೀಯ ಸ್ವರೂಪ ಪಡೆದುಕೊಂಡಿರುವ ಬೀದರ್​ನ ಯುವ ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು ಇಂದು (ಜನವರಿ 10) ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಸೇರಿದಂತೆ ಒಟ್ಟು ಐವರನ್ನು ಬಂಧಿಸಿದ್ದಾರೆ. ಡೆತ್​ನೋಟ್​ನಲ್ಲಿ ಉಲ್ಲೇಖವಾಗಿದ್ದ 8 ಜನರ ಪೈಕಿ ಇದೀಗ ಸಿಐಡಿ ಅಧಿಕಾರಿಗಳು ಐವರನ್ನು ಬಂಧಿಸಿದ್ದಾರೆ

ಬೀದರ್, (ಜನವರಿ 10): ಯುವ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊನೆಗೂ ಸಿಐಡಿ ಐವರನ್ನು ಬಂಧಿಸಿದೆ. ಆತ್ಮಹತ್ಯೆಗೂ ಮುನ್ನ ಡೆತ್​ನೋಟ್ ಬರೆದಿಟ್ಟಿದ್ದ ಬೀದರ್ ಗುತ್ತಿಗೆದಾರ ಸಚಿನ್ , ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತ ರಾಜು ಕಪನೂರು ಸೇರಿದಂತೆ ಒಟ್ಟು 8 ಜನರ ಹೆಸರನ್ನು ಉಲ್ಲೇಖಿಸಿದ್ದರು. ಈ ಸಂಬಂಧ ಇಂದು (ಜನವರಿ 10) ಸಿಐಡಿ ಅಧಿಕಾರಗಳು ಬೀದರ್​ನಲ್ಲಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ರಾಜು ಕಪನೂರು, ಘೊರಕ್ ನಾಥ್, ನಂದಕುಮಾರ್ ನಾಗಬುಜಂಗಿ, ರಾಮನಗೌಡಾ ಪಾಟೀಲ್, ಸತೀಶ್ ಎನ್ನುವರನ್ನು ಬಂಧಿಸಲಾಗಿದೆ.

ಪ್ರಕರಣ ಸಂಬಂಧ ತನಿಖೆಗಾಗಿ ಬೀದರ್​ ಬಂದಿರುವ ಸಿಐಡಿ ಅಧಿಕಾರಿಗಳು, ಡೆತ್​ನೋಟ್​ನಲ್ಲಿ ಉಲ್ಲೇಖವಾಗಿದ್ದ ಹೆಸರಿನವರಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿತ್ತು. ಅದರಂತೆ ಐವರು ಇಂದು ಬೀದರ್​ ರೈಲ್ವೆ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು. ಆದ್ರೆ, ವಿಚಾರಣೆಯಲ್ಲಿ ಸೂಕ್ತವಾದ ಉತ್ತರ ಬಾರದ ಹಿನ್ನೆಲೆಯಲ್ಲಿ ಸಿಐಡಿ, ಆರೋಪಿಗಳನ್ನು ಬಂಧಿಸಿದೆ.

ಇನ್ನು ಬಂಧಿತರನ್ನು ಬೀದರ್​ ಜೆಎಂಎಫ್​ಸಿ ಕೋರ್ಟ್​​ ಜಡ್ಜ್​ ಮುಂದೆ ಹಾಜರುಪಡಿಸಲು ಸಿದ್ಧತೆ ನಡೆಸಿದ್ದಾರೆ. ಬೀದರ್ ನಗರದ ಜನವಾಡಾ ರಸ್ತೆಯ ಬಳಿ ಇರುವ ಜಡ್ಜ್ ರಾಮಮೂರ್ತಿ ಮನೆಗೆ ಕರೆದುಕೊಂಡು ಹೋಗಲಿದ್ದು, ಇನ್ನಷ್ಟು ವಿಚಾರಣೆಗೆ ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡುವ ಸಾಧ್ಯತೆಗಳು ಹೆಚ್ಚಿವೆ.

News Editor

Learn More →

Leave a Reply

Your email address will not be published. Required fields are marked *