
ಲೋಕಸಭಾ ಟಿಕೆಟ್ ಕೈತಪ್ಪಿದ್ದರಿಂದ ಬೇಸರದಲ್ಲಿರುವ ಹಾಲಿ ಸಂಸದ ನಳಿನ್ ಕುಮಾರ್ ಕಟೀಲ್‌ಗೆ ಹೈಕಮಾಂಡ್ ಮಹತ್ವದ ಜವಾಬ್ದಾರಿ ನೀಡಿದೆ. ಹೌದು.. ನಳಿನ್ ಕುಮಾರ್ ಕಟೀಲ್ ಅವರನ್ನು ಕೇರಳ ಲೋಕಸಭಾ ಚುನಾವಣೆಯ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಇದರ ಜೊತೆ ತೆಲಂಗಾಣ ಮತ್ತು ಮಹಾರಾಷ್ಟ್ರ ಲೋಕಸಭಾ ಚುನಾವಣೆಯ ಉಸ್ತುವಾರಿಯನ್ನು ಕರ್ನಾಟಕದ ಬಿಜೆಪಿ ನಾಯಕರುಗಳಿಗೆ ನೀಡಲಾಗಿದೆ.
ಬಿಜೆಪಿ ಕಾರ್ಯಕರ್ತನಾಗಿ, ಸಂಸದನಾಗಿ, ಬಿಜೆಪಿ ರಾಜ್ಯಾಧ್ಯಕ್ಷರಾಗಿ ಪಕ್ಷದಲ್ಲಿ ಸೇವೆ ಸಲ್ಲಿಸಿರುವ ನಳೀನ್ ಕುಮಾರ್ ಕಟೀಲ್‌ಗೆ ಈ ಬಾರಿ ಕೇರಳ ಲೋಕಸಭಾ ಚುನಾವಣೆಯ ಸಹ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಕೇರಳದಲ್ಲಿ ಕಮಲ ಅರಳಿಸಬೇಕು ಎನ್ನುವ ಬಹುದೊಡ್ಡ ಜವಾಬ್ದಾರಿಯನ್ನು ಬಿಜೆಪಿ ಹೈಕಮಾಂಡ್ ನಳೀನ್ ಕುಮಾರ್ ಕಟೀಲ್‌ಗೆ ನೀಡಿದೆ. ಈ ಬಾರಿ ದಕ್ಷಿಣ ಭಾರತ ರಾಜ್ಯಗಳ ಮೇಲೆ ಹೆಚ್ಚಿನ ಗಮನ ವಹಿಸಿರುವ ಬಿಜೆಪಿ ವರಿಷ್ಠರು ಶತಾಯಗಾತಾಯ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕು ಎನ್ನುವ ಗುರಿಯಲ್ಲಿದ್ದಾರೆ. ಹೀಗಾಗಿ ಕೇರಳ ಜೊತೆಗೆ ತೆಲಂಗಾಣ ಮತ್ತು ಮಹಾರಾಷ್ಟ್ರ ಲೋಕಸಭಾ ಚುನಾವಣೆಯ ಉಸ್ತುವಾರಿಯನ್ನು ಕರ್ನಾಟಕದ ಬಿಜೆಪಿ ನಾಯಕರುಗಳಿಗೆ ನೀಡಲಾಗಿದೆ.


