
ಉಡುಪಿ: ನೇತ್ರಜ್ಯೋತಿ ಪ್ಯಾರಾ ಮೆಡಿಕಲ್ ಕಾಲೇಜು ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿ ಸಿಓಡಿ ಪೊಲೀಸರು ಉಡುಪಿಯ ಪ್ರಧಾನ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಅಂತಿಮ ಚಾರ್ಜ್‌ಶೀಟ್ ಸಲ್ಲಿಸಿದ್ದರೂ ಮೊಬೈಲ್ ಕುರಿತ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಮಾತ್ರ ಇನ್ನೂ ಕೂಡ ಪೊಲೀಸರ ಕೈಸೇರಿಲ್ಲ.
ಆರೋಪಿ ವಿದ್ಯಾರ್ಥಿನಿಯರಿಂದ ವಶಪಡಿಸಿಕೊಳ್ಳಲಾದ ಮೊಬೈಲ್‌ನ್ನು ಪರಿಶೀಲನೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅದರ ವರದಿ ಬರಲು ಬಾಕಿ ಇದೆ. ಈ ವರದಿ ಬಂದ ನಂತರ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಪ್ರಕರಣದ ತನಿಖಾಧಿಕಾರಿ ಸಿಓಡಿ ಡಿವೈಎಸ್ಪಿ ಅಂಜುಮಾಲಾ ನಾಯಕ್ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಮೂವರು ಆರೋಪಿಗಳು ಶೌಚಾಲಯದಲ್ಲಿ ವಿಡಿಯೋ ಮಾಡಿರುವುದು ತಪ್ಪಾಗಿದೆ ಎಂದು ಕ್ಷಮಾಪನ ಪತ್ರ ಬರೆದಿದ್ದು, ವಿಧಿ ವಿಜ್ಞಾನ ಪ್ರಯೋಗಾಲಯ ನೀಡಿರುವ ವರದಿಯಲ್ಲಿ ಆರೋಪಿಗಳು ಬರೆದುಕೊಟ್ಟಿರುವ ಪತ್ರವು ಅವರ ಹಸ್ತಾಕ್ಷರ ದೊಂದಿಗೆ ಹೋಲಿಕೆಯಾಗುವುದಾಗಿ ತಿಳಿಸಿದೆ. ಈ ಮೂಲಕ ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.
ಒಟ್ಟಾರೆಯಾಗಿ ಆರೋಪಿಗಳ ತಪ್ಪೊಪ್ಪಿಗೆಯ ಕ್ಷಮಾಪನ ಪತ್ರ ಹಾಗೂ ಸಂತ್ರಸ್ತ ವಿದ್ಯಾರ್ಥಿನಿಯ ಹೇಳಿಕೆಗಳ ಆಧಾರದಲ್ಲಿ ಆರೋಪಿಗಳ ವಿರುದ್ಧ ಕಲಂ 204, 509, 120(ಬಿ) ಸಹಿತ 34, 37 ಐಪಿಸಿ ಹಾಗೂ 66(ಇ) ಐಟಿ ಆ್ಯಕ್ಟ್‌ನಂತೆ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಎರಡು ಸಂಪುಟಗಳಲ್ಲಿ 925 ಪುಟಗಳ ಈ ಚಾರ್ಜ್‌ಶೀಟ್‌ನಲ್ಲಿ 91 ಸಾಕ್ಷಿಗಳನ್ನು ಪರಿಗಣಿಸಲಾಗಿದೆ.
ಈ ವಿಚಾರದ ಕುರಿತು ಕಾಲೇಜಿನಲ್ಲಿ ನಡೆದ ಪ್ರತಿಭಟನೆಯಲ್ಲಿ ನಾನು ಭಾಗವಹಿಸಿಲ್ಲ. ಬಳಿಕ ಆಡಳಿತ ಮಂಡಳಿಯವರು ಪೋಷಕರನ್ನು ಕರೆಸಿ ಮಾತುಕತೆ ನಡೆಸಿದ್ದು, ಆ ವೇಳೆ ನಾನು ಈ ವಿಷಯ ಹೊರಗೆ ಹೋದರೆ ನನ್ನ ಮತ್ತು ಆ ಮೂರು ಜನರ ಭವಿಷ್ಯ ಹಾಳಾಗುತ್ತದೆ ಎಂದು ಹೇಳಿದ್ದೇನೆ. ಅಲ್ಲದೆ ಆ ಮೂವರು ಹೆಣ್ಣು ಮಕ್ಕಳು ಈ ವಿಚಾರವಾಗಿ ಎಲ್ಲರ ಮುಂದೆ ಕ್ಷಮಾಪಣೆಯನ್ನು ಕೇಳಿದ್ದರು ಎಂದು ಸಂತ್ರಸ್ತೆ ತನ್ನ ಹೇಳಿಕೆಯಲ್ಲಿ ತಿಳಿಸಿರುವುದಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಮಾತುಕತೆ ಸಂದರ್ಭ ನನ್ನ ತಾಯಿ, ಈ ವಿಚಾರವನ್ನು ಪ್ರಚಾರ ಮಾಡಬಾರದು, ನನ್ನ ಮಗಳ ಭವಿಷ್ಯ ಹಾಳಾಗುತ್ತದೆ. ಆ ಕಾರಣ ನಾವು ಯಾವುದೇ ರೀತಿಯ ದೂರನ್ನು ನೀಡಲು ಆಗುವುದಿಲ್ಲ ಎಂದು ಪೊಲೀಸರ ಮುಂದೆ ತಿಳಿಸಿರುವುದಾಗಿ ಸಂತ್ರಸ್ತೆ ಹೇಳಿದ್ದಾರೆ. ಒಂದು ವೇಳೆ ಆರೋಪಿಗಳು ಆ ರೀತಿಯ ವಿಡಿಯೋ ಅಥವಾ ಫೋಟೋ ಮಾಡಿದ್ದರೆ ಅವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಆಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾವೆಲ್ಲ ಗೆಳತಿಯರಾಗಿದ್ದು, ನಾವು ಹಲವು ಬಾರಿ ಹುಟ್ಟುಹಬ್ಬ ಸೇರಿದಂತೆ ಫ್ರಾಂಕ್ ವಿಡಿಯೋ ಮಾಡಿ, ಎಲ್ಲರೊಂದಿಗೆ ನೋಡಿ ಗಮ್ಮತ್‌ನಲ್ಲಿ ನಗುತ್ತಿದ್ದೆವು. ಅದೇ ರೀತಿ ಅಂದು ವಾಶ್‌ರೂಂನಲ್ಲಿ ವಿಡಿಯೋ ಮಾಡಿದ್ದು, ಬಳಿಕ ಪರಿಶೀಲಿಸಿದಾಗ ವಿಡಿಯೋದಲ್ಲಿ ಆಕೆ ವಾಶ್‌ರೂಂನಲ್ಲಿ ಮೇಲೆ ನೋಡಿ ರುವುದು ಮಾತ್ರ ಚಿತ್ರೀಕರಣವಾಗಿದೆ. ಅದನ್ನು ನಾವು ಮೂವರೇ ನೋಡಿ ಡಿಲೀಟ್ ಮಾಡಿದೆವು. ಬೇರೆ ಯಾರು ಈ ವಿಡಿಯೋ ನೋಡಿಲ್ಲ ಎಂದು ಆರೋಪಿ ವಿದ್ಯಾರ್ಥಿನಿಯರು ಹೇಳಿಕೆ ನೀಡಿರುವುದಾಗಿ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.


