ಪುತ್ತೂರು: ಬಿಸಿಯೂಟ ತಯಾರಕರನ್ನು ಬೀದಿಗೆ ತಳ್ಳುವ ಹುನ್ನಾರವೇ? ಸರಕಾರದ ವಿರುದ್ಧ ಸಿಐಟಿಯು ಆಕ್ರೋಶ

ಪುತ್ತೂರು: ಕಳೆದ 25 ವರ್ಷಗಳಿಂದ ಅತ್ಯಂತ ಕಡಿಮೆ ವೇತನದಲ್ಲಿ ಬಿಸಿಯೂಟ ತಯಾರಕರಾಗಿ ದುಡಿಯುತ್ತಿರುವ ಮಹಿಳಾ ನೌಕರರನ್ನು ಇದೀಗ ಕೆಲಸದಿಂದ ತೆಗೆದುಹಾಕುವ ಹುನ್ನಾರವನ್ನು ಸರಕಾರ ನಡೆಸುತ್ತಿದೆ. ಇದರ ವಿರುದ್ಧ ಧ್ವನಿ ಎತ್ತುವುದು ಸಿಐಟಿಯು ಸೇರಿದಂತೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಮುಖಂಡ ಶ್ಯಾಮರಾಜ್ ಪಟ್ರಮೆ ಹೇಳಿದರು.

ಪುತ್ತೂರು ಮತ್ತು ಕಡಬ ತಾಲೂಕು ಅಕ್ಷರದಾಸೋಹ ಯೋಜನೆಯ ನೌಕರರು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇಂದು ಎ.ಸಿ. ಕಚೇರಿ ಎದುರು ನಡೆಸಿದ ಹೋರಾಟವನ್ನುದ್ದೇಶಿಸಿ ಅವರು ಮಾತನಾಡಿದರು.

ಬದುಕಲು ತಕ್ಕ ವೇತನ ನೀಡಬೇಕೆಂಬ ಕನಿಷ್ಠ ಪರಿಜ್ಞಾನವೂ ಇಲ್ಲದ ಸರಕಾರದ ಆಡಳಿತದಲ್ಲಿ ನಾವಿದ್ದೇವೆಯೇ ಎಂದು ಪ್ರಶ್ನಿಸಿದ ಅವರು, ಕಳೆದ 12 ವರ್ಷಗಳಿಂದ ಕೇಂದ್ರ ಸರಕಾರ ಬಿಸಿಯೂಟ ನೌಕರರ ವೇತನವನ್ನು ಹೆಚ್ಚಿಸಿಲ್ಲ ಎಂದು ಟೀಕಿಸಿದರು.

ಪ್ರಾಥಮಿಕ ಶಿಕ್ಷಕರ ಸಂಘ ಮನವಿ ನೀಡಿದೆ ಎಂಬ ನೆಪದಲ್ಲಿ ರಾಜ್ಯ ಸರಕಾರ ಅಕ್ಷರದಾಸೋಹ ಯೋಜನೆಯನ್ನೇ ಖಾಸಗೀಕರಣ ಮಾಡಲು ಹೊರಟಿದೆಯೇ ಎಂಬ ಅನುಮಾನ ಮೂಡುತ್ತಿದೆ. 25 ವರ್ಷಗಳಿಂದ ದುಡಿದ ನೌಕರರನ್ನು ಬೀದಿಗೆ ತಳ್ಳಲು ಮುಂದಾಗಿರುವ ಸರಕಾರಕ್ಕೆ ಅವರ ಬದುಕಿನ ಬಗ್ಗೆ ಯಾವುದೇ ಕಾಳಜಿ ಇಲ್ಲ ಎಂಬುದು ಇದರಿಂದ ಸಾಬೀತಾಗುತ್ತಿದೆ ಎಂದು ಆರೋಪಿಸಿದರು.

ಬಿಸಿಯೂಟ ತಯಾರಕರಿಗೆ ನೀಡುವ ಕನಿಷ್ಠ 4,600 ರೂ. ವೇತನವನ್ನೂ ಪ್ರತಿತಿಂಗಳು ಸರಿಯಾಗಿ ನೀಡಲು ಸಾಧ್ಯವಾಗದ ಸರಕಾರ, ಶಾಸಕರು ಮತ್ತು ಸಚಿವರ ವೇತನವನ್ನು ಮಾತ್ರ ಎಂದಿಗೂ ಬಾಕಿ ಉಳಿಸುವುದಿಲ್ಲ. ಎಲ್ಲಾ ಸವಲತ್ತುಗಳನ್ನು ಸೇರಿಸಿ ಓರ್ವ ಶಾಸಕರಿಗೆ ಮಾಸಿಕ ಸುಮಾರು 2 ಲಕ್ಷ ರೂ. ವೇತನ ನೀಡಲು ಸರಕಾರದ ಬಳಿ ಹಣವಿದೆ. ಆದರೆ ಬಿಸಿಯೂಟ ತಯಾರಕರಿಗೆ ನ್ಯಾಯಯುತ ವೇತನ ನೀಡಲು ಮಾತ್ರ ಸಾಧ್ಯವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಸಿಯೂಟದ ಜವಾಬ್ದಾರಿ ನಿರ್ವಹಿಸುವುದು ಶಿಕ್ಷಕರಿಗೆ ಕಷ್ಟವಾಗುತ್ತಿದ್ದರೆ, ಅವರನ್ನು ಆ ಜವಾಬ್ದಾರಿಯಿಂದ ಬಿಡುಗಡೆಗೊಳಿಸಿ ಪ್ರತ್ಯೇಕ ಅಧಿಕಾರಿಯನ್ನು ನೇಮಿಸಲಿ. ಇಲ್ಲವೇ ಅಡುಗೆ ಕೆಲಸ ನಿರ್ವಹಿಸುತ್ತಿರುವ ನಮಗೇ ಸಂಪೂರ್ಣ ಜವಾಬ್ದಾರಿ ನೀಡಲಿ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ದಕ್ಷಿಣ ಕನ್ನಡ ಜಿಲ್ಲಾ ಸಹಕಾರ್ಯದರ್ಶಿ ಹಾಗೂ ಜಿಲ್ಲಾ ಅಕ್ಷರದಾಸೋಹ ಸಂಘದ ಉಪಾಧ್ಯಕ್ಷೆ ಈಶ್ವರಿ ಪದ್ಮುಂಜ, ಮಕ್ಕಳ ಪೌಷ್ಟಿಕತೆಗಾಗಿ ಜಾರಿಗೆ ತಂದಿರುವ ಬಿಸಿಯೂಟ ಯೋಜನೆಯನ್ನು ಅತ್ಯಂತ ಕಡಿಮೆ ವೇತನದಲ್ಲಿ ಅನುಷ್ಠಾನಗೊಳಿಸುತ್ತಿರುವ ತಾಯಂದಿರನ್ನೇ ಇಂದು ಸರಕಾರ ಕಡೆಗಣಿಸುತ್ತಿದೆ. ಇಂತಹ ಧೋರಣೆಯ ವಿರುದ್ಧ ನಮ್ಮ ಗಟ್ಟಿ ಧ್ವನಿ ಮೊಳಗಬೇಕಿದೆ ಎಂದರು.

ಯಾವುದೇ ಕಾರಣಕ್ಕೂ ಬಿಸಿಯೂಟದ ಕೆಲಸದಿಂದ ನಮ್ಮನ್ನು ತೆಗೆದುಹಾಕಲು ಬಿಡುವುದಿಲ್ಲ. ನಮ್ಮ ವೇತನ ಹೆಚ್ಚಳಕ್ಕಾಗಿ ಹೋರಾಟ ಮುಂದುವರಿಸುತ್ತೇವೆ. ನಾವೆಲ್ಲರೂ ಒಗ್ಗಟ್ಟಿನಿಂದ ಹೋರಾಡಿ ಕಾರ್ಮಿಕ ವಿರೋಧಿ ನೀತಿಗಳನ್ನು ಅನುಸರಿಸುವ ಸರಕಾರಗಳಿಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಎಚ್ಚರಿಸಿದರು.

ಕಾರ್ಯಕ್ರಮದಲ್ಲಿ ಅಕ್ಷರದಾಸೋಹ ನೌಕರರ ಸಂಘದ ಪುತ್ತೂರು ತಾಲೂಕು ಕಾರ್ಯದರ್ಶಿ ಲತಾ, ಕಡಬ ತಾಲೂಕು ಅಧ್ಯಕ್ಷೆ ಹೇಮಾವತಿ, ಸಿಐಟಿಯು ಪುತ್ತೂರು ತಾಲೂಕು ಮುಖಂಡ ಹಾಗೂ ವಕೀಲ ಪಿ.ಕೆ. ಸತೀಶನ್, ಅಕ್ಷರದಾಸೋಹ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ರಂಜಿತ್ ಕೋಡಿಂಬಾಡಿ, ಜಿಲ್ಲಾ ಸಮಿತಿ ಮುಖಂಡರಾದ ರೇವತಿ ಕಡಬ, ಸುಲೋಚನ ಕಡಬ, ರೈತ ಮುಖಂಡ ಮಹಮ್ಮದ್ ಅನಸ್, ಸಿಐಟಿಯು ಮುಖಂಡೆ ಪುಷ್ಪ, ಡಿವೈಎಫ್ಐ ಮುಖಂಡ ಮಹೇಂದ್ರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Star Of Kudla

Learn More →

Leave a Reply

Your email address will not be published. Required fields are marked *