
ರಾಜ್ಯದ ಗಮನ ಸೆಳೆದಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಚಾರ ಭಾರೀ ಕುತೂಹಲ ಮೂಡಿಸಿದೆ. ಮಹತ್ವದ ಬೆಳವಣಿಗೆಯಲ್ಲಿ ಸಂಸದ ಪ್ರತಾಪ್ ಸಿಂಹ ಬದಲಿಗೆ ರಾಜವಂಶಸ್ಥ ಯದುವೀರ್ ಒಡೆಯರ್ ಅವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ. ಇನ್ನೊಂದೆಡೆ ರಾಜವಂಶಸ್ಥ ಯದುವೀರ್ ಅವರು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ರಾಜಕೀಯಕ್ಕೆ ಎಂಟ್ರಿಕೊಡುವ ಕುರಿತಂತೆ ಸಾರ್ವಜನಿಕ ವಲಯದಲ್ಲಿ ದೊಡ್ಡಮಟ್ಟದ ಚರ್ಚೆ ನಡೆಯುತ್ತಿದೆ. ಯದುವೀರ್ ಒಡೆಯರ್ ಅವರು ಅವರು ಚುನಾವಣೆಗೆ ಸ್ಪರ್ಧೆ ಮಾಡುವ ವಿಷಯದ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿದ್ದು, ದಯವಿಟ್ಟು ರಾಜಕೀಯಕ್ಕೆ ಬರಬೇಡಿ. ರಾಜರಾಗಿರಿ ಕೇವಲ ಮಂತ್ರಿಯಾಗಬೇಡಿ ಎನ್ನುವ ಪೋಸ್ಟರ್ ಅಭಿಯಾನ ಆರಂಭವಾಗಿದೆ.
ರಾಜವಂಶಸ್ಥ ಯದುವೀರ್ ಒಡೆಯರ್ ಬಿಜೆಪಿ ಅಭ್ಯರ್ಥಿ ಆಗುತ್ತಾರೆ ಎಂಬ ಸಂಗತಿ ಹೊರಬೀಳುತ್ತಿದ್ದಂತೆ ಹಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಕೂಡ ಆರಂಭಿಸಿದ್ದಾರೆ. ಯದುವೀರ್ ಒಡೆಯರ್ ಅವರು ರಾಜಕೀಯಕ್ಕೆ ಬರದಂತೆ ಪೋಸ್ಟರ್ ಅಭಿಯಾನ ಆರಂಭಿಸಿದ್ದು, “ಯವರಾಜರೇ ನಿಮಗೆ ನಿಮ್ಮದೇ ಘನತೆ ಇದೆ, ದಯವಿಟ್ಟು ರಾಜಕೀಯಕ್ಕೆ ಬರಬೇಡಿ. ರಾಜರಾಗಿರಿ ಕೇವಲ ಮಂತ್ರಿಯಾಗಬೇಡಿ” ಎಂದು ಮನವಿ ಮಾಡಿದ್ದಾರೆ.
ಮೈಸೂರು-ಕೊಡಗು ಲೋಕಸಭೆಯ ಬಿಜೆಪಿ ಟಿಕೆಟ್ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ಗೆ ಸಿಗೋದು ಬಹುತೇಕ ಪಕ್ಕಾ ಆಗಿದೆ. ಬಿಜೆಪಿಯ ಪ್ರಬಲ ಟಿಕೆಟ್ ಆಕಾಂಕ್ಷಿ ಆಗಿರುವ ಹಾಲಿ ಸಂಸದ ಪ್ರತಾಪ್ ಸಿಂಹಗೆ ಕೈತಪ್ಪುತ್ತಿರೋದು ಬಹುತೇಕ ದೃಢವಾಗಿದೆ. ಅದೇ ಕಾರಣಕ್ಕೆ ಯದುವೀರ್ ಒಡೆಯರ್ ಅವರಿಗೆ ಪ್ರತಾಪ್ ಸಿಂಹ ತಮ್ಮ ಮೊನಚು ಮಾತುಗಳ ಮೂಲಕ ತಿವಿದಿದ್ದಾರೆ
ಮಾಧ್ಯಮಗಳ ಎದುರು ಬೇಸರಿಂದಲೇ ಮೈಸೂರು ಮಹಾರಾಜರಿಗೆ ಟಾಂಗ್ ನೀಡಿರುವ ಪ್ರತಾಪ್ ಸಿಂಹ, ಪಕ್ಷದಲ್ಲಿ ಒಂದು ಪ್ರೊಟೋಕಾಲ್ ಇರುತ್ತದೆ, ಕಾರ್ಯಕಾರಣಿ ಸಭೆ ನಡೆಯುತ್ತದೆ. ರಾಜ್ಯಾಧ್ಯಕ್ಷರು, ಪ್ರಮುಖರು, ದೊಡ್ಡವರು ಮೇಲೆ ಕೂತಿರುತ್ತಾರೆ. ನಮ್ಮಂಥವರು ಕೆಳಗಡೆ ಕೂತಿರುತ್ತೇವೆ. ಇನ್ಮೇಲೆ ರಾಜರು ಕೆಳಗಡೆ ಕೂರೋದಕ್ಕೂ ರೆಡಿ ಇದ್ದಾರೆ. ಅಷ್ಟೇ ಅಲ್ಲ, ನಮ್ಮ ರಾಜ್ಯಾಧ್ಯಕ್ಷರು ಮೈಸೂರಿಗೆ ಬರುತ್ತಿದ್ದಾರೆ ಅಂದರೆ ನಾವು ಹೋಟೆಲ್ ಮುಂದೆ ಬಿಸಿಲಲ್ಲಿ ಬೊಕ್ಕೆ ಹಿಡಿದು ಕಾಯುತ್ತಿರುತ್ತೇವೆ. ಮಹಾರಾಜರು ಆ ರೀತಿ ಕಾಯೋದಕ್ಕೂ ಸಿದ್ಧರಿದ್ದಾರೆ. ಇದ್ಕಿಂತ ಖುಷಿ ಇನ್ನೇನಿದೆ? ಎಂದು ಪರೋಕ್ಷವಾಗಿ ಯದುವೀರ್ ಕಾಲೆಳೆದಿದ್ದಾರೆ.


