ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಪುತ್ತೂರನ್ನು ಉಲ್ಲೇಖಿಸಿದ ಸಚಿವ ಯತೀಂದ್ರ ಸಿದ್ಧರಾಮಯ್ಯ: ನ್ಯಾಯಯುತ ತನಿಖೆ, ಸಂಶಯಗಳಿಗೆ ಉತ್ತರ ಸಿಗಲಿ-ದಯಾನಂದ ಶೆಟ್ಟಿ ಉಜಿರೆಮಾರು

ಪುತ್ತೂರು: ರಾಜ್ಯದಲ್ಲಿ ಸುದ್ದಿಮಾಡಿರುವ ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ಪ್ರಭಾವಿ ಸಚಿವ ಯತೀಂದ್ರ ಸಿದ್ಧರಾಮಯ್ಯ ಅವರು ಪುತ್ತೂರನ್ನು ಉಲ್ಲೇಖಿಸಿ ಹೇಳಿಕೆ ನೀಡಿದ್ದಾರೆ. ನಮಗೂ ಈ ವಿಚಾರದಲ್ಲಿ ಅನುಮಾನಗಳಿದ್ದು, ನ್ಯಾಯಯುತ ತನಿಖೆ ಆಗಿ ಜನರ ಸಂಶಯಗಳಿಗೆ ಉತ್ತರ ಸಿಗಲಿ ಎಂದು ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಆಗ್ರಹಿಸಿದ್ದಾರೆ.


ಮಂಗಳವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 2023 ರ ಚುನಾವಣೆಯಲ್ಲಿ ಪುತ್ತೂರು ಕ್ಷೇತ್ರದ ಆಕಾಂಕ್ಷಿಗಳಾಗಿ ಕಾಂಗ್ರೆಸ್‍ನಿಂದ 8 ಮಂದಿ ಅರ್ಜಿ ಹಾಕಿದ್ದರು. ಆದರೆ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರಿಗೆ ಅವಕಾಶ ನೀಡದೆ ಹೊರಗಿನ 9 ನೇ ಅಭ್ಯರ್ಥಿಗೆ ಅವಕಾಶ ನೀಡಿದ್ದರು. ಈ 9 ನೇ ಅಭ್ಯರ್ಥಿ ಸ್ಟಿಂಗ್ ಆಪರೇಷನ್ ಮೂಲಕ ಬಂದಿರುವ ಸಂಶಯವಿದೆ ಎಂದು ಹೇಳಿದರು.


ಸ್ಟಿಂಗ್ ಆಪರೇಷನ್ ನಡೆದಿರುವುದು, ಅದರ ಮೂಲಕವೇ ಮುಖ್ಯಮಂತ್ರಿ ಬದಲಾವಣೆ ಆಗಿರುವ ಸಂಶಯವಿರುವುದು, ಅವರದೇ ಪಕ್ಷದ ನಾಯಕರು ಭಾಗಿಯಾಗಿರುವುದು, ಸ್ವತ: ಯತೀಂದ್ರ ಅವರ ಹೇಳಿಕೆಗಳನ್ನು ಉಲ್ಲೇಖಿಸಿ ಪುತ್ತೂರಿಗೆ ಕಳಂಕ ತಂದಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಪ್ರಶ್ನೆ ಮಾಡಿದ್ದರು. ಆದರೆ ಪುತ್ತೂರು ಶಾಸಕರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡದೆ ಬೇರೆಯೇ ಮಾತನಾಡಿದ್ದಾರೆ. ಜಿಲ್ಲಾಧ್ಯಕ್ಷರ ಕುರಿತು ಏಕವಚನದಲ್ಲಿ ಮಾತನಾಡಿರುವುದನ್ನು ಖಂಡಿಸುವುದಾಗಿ ಅವರು ಹೇಳಿದರು.


ಗಣಿತದ ಪ್ರಶ್ನೆಗೆ ಸಮಾಜದ ಉತ್ತರ ನೀಡಿದಂತೆ ಮಾತನಾಡಿರುವ ಪುತ್ತೂರು ಶಾಸಕರ ಮಾನಸಿಕತೆ, ಸಂಸ್ಕøತಿ ಅವರ ಹೇಳಿಕೆಗಳಲ್ಲಿ ಗೊತ್ತಾಗುತ್ತದೆ. ಶಾಸಕ ಅಶೋಕ್ ಕುಮಾರ್ ರೈ `ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿದ’ ಎಂಬ ರೀತಿಯಲ್ಲಿ ರೋಷಾವೇಷಗೊಂಡಿರುವುದನ್ನು ನೋಡಿದರೆ ಸಂಶಯ ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ. ತಪ್ಪು ಮಾಡಿಲ್ಲ ಅಥವಾ ಇವರ ಪಾತ್ರ ಇಲ್ಲದೆ ಇದ್ದರೆ ಇವರು ಭಯ ಪಡುವುದು ಏಕೆ ? ಯಾವುದೇ ತನಿಖೆ ಬೇಕಾದರು ನಡೆಸಲಿ. ನಾನು ಸಿದ್ಧನಿದ್ದೇನೆ ಎಂದು ಹೇಳಬಹುದಲ್ಲವೇ…? ಸಂಸ್ಕಾರವಂತರು ಎಂದು ಹೇಳಿಕೆ ಕೊಡುವ ಇವರು ಸಂಸ್ಕಾರ ಹೀನರಾಗಿ ಹೇಳಿಕೆ ಕೊಡುವುದು ದುರದೃಷ್ಟಕರ ಎಂದು ದಯಾನಂದ ಶೆಟ್ಟಿ ಹೇಳಿದರು.


ಸ್ಟಿಂಗ್ ಆಪರೇಷನ್ ವಿಚಾರದಲ್ಲಿ ತನಿಖೆ ದಾರಿ ತಪ್ಪಿಸುವಂತಹ ವರ್ತನೆಯೂ ಕಾಣುತ್ತಿದೆ. ಬಿಜೆಪಿ ನಾಯಕರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲೆಯ ಶಾಸಕರೂ ಕಳಂಕ ತಂದಿರುವ ಸ್ಟಿಂಗ್ ಆಪರೇಷನ್ ಕುರಿತು ಮಾತನಾಡಲಿದ್ದಾರೆ ಎಂದು ಉಜಿರೆಮಾರು ಹೇಳಿದರು.

ಚುನಾವಣೆಗೆ ಸಿದ್ಧತೆ

ಜಿ.ಪಂ., ತಾ.ಪಂ. ಚುನಾವಣೆಗೆ ಸಂಬಂಧಿಸಿದಂತೆ ಬೂತ್ ಮಟ್ಟದಲ್ಲಿ ಕಾರ್ಯಕರ್ತರ ಸಂಪರ್ಕ ಆರಂಭಿಸಲಾಗಿದೆ. ಪಕ್ಷದಡಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗುತ್ತದೆ. ಸಮಷ್ಠಿಯಲ್ಲಿ ಕೆಲಸ ಮಾಡಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ. ಅವರು, ಇವರು ಎನ್ನುವುದು ಬಿಜೆಪಿಯಲ್ಲಿ ಇಲ್ಲ. ಬಿಜೆಪಿ ಸಿದ್ಧಾಂತದಲ್ಲಿರುವ ಎಲ್ಲರೂ ನಮ್ಮವರೇ ಎಂದು ದಯಾನಂದ ಶೆಟ್ಟಿ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಶಶಿಧರ್ ನಾಯಕ್, ಗ್ರಾಮಾಂತರ ಮಂಡಲ ಉಪಾಧ್ಯಕ್ಷ ವಿದ್ಯಾಧರ್ ಜೈನ್, ಪ್ರಧಾನ ಕಾರ್ಯದರ್ಶಿ ಲೋಕೇಶ್ ಚಾಕೋಟೆ, ಗ್ರಾಮಾಂತರ ಮಾಧ್ಯಮ ಪ್ರಮುಖ್ ಮಹೇಶ್ ಕೇರಿ ಉಪಸ್ಥಿತರಿದ್ದರು.

Star Of Kudla

Learn More →

Leave a Reply

Your email address will not be published. Required fields are marked *