
ಪುತ್ತೂರು: ಪುತ್ತೂರು ತಾಲೂಕಿನ ಒಳಮೊಗರು ಗ್ರಾಮದ ಕೂರ್ನಡ್ಕ ಮಸೀದಿ ಬಳಿ ಮಾಣಿ–ಮೈಸೂರು ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸುಮಾರು 65ರಿಂದ 70 ವರ್ಷ ವಯಸ್ಸಿನ ಅಪರಿಚಿತ ವೃದ್ಧರೊಬ್ಬರು ಮೃತಪಟ್ಟಿದ್ದು, ಮೃತರ ವಾರಸುದಾರರನ್ನು ಪತ್ತೆಹಚ್ಚಲು ಪುತ್ತೂರು ಗ್ರಾಮಾಂತರ ಪೊಲೀಸರು ಸಾರ್ವಜನಿಕರ ಸಹಕಾರ ಕೋರಿದ್ದಾರೆ.

ದಿನಾಂಕ 19-10-2026ರಂದು ರಾತ್ರಿ ಸುಮಾರು 8.30ರ ವೇಳೆಗೆ ವೃದ್ಧರು ರಸ್ತೆ ದಾಟುತ್ತಿದ್ದಾಗ, ಕುಂಬ್ರ ಕಡೆಯಿಂದ ಪುತ್ತೂರು ಕಡೆಗೆ ಸಂಚರಿಸುತ್ತಿದ್ದ KA-53-Z-9054 ನೋಂದಣಿ ಸಂಖ್ಯೆಯ ಕಾರು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅಪಘಾತದಲ್ಲಿ ವೃದ್ಧರ ಹಣೆಯ ಎಡಭಾಗಕ್ಕೆ ತೀವ್ರ ಗಾಯವಾಗಿದ್ದು, ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಅರಿಯಡ್ಕ ಗ್ರಾಮದ ಮಹಮ್ಮದ್ ಆಶಿಫ್ (45) ನೀಡಿದ ದೂರಿನ ಮೇರೆಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 131/2026ರಂತೆ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 281 ಮತ್ತು 106(1) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಮೃತರು ಗೋಧಿ ಮೈಬಣ್ಣ ಹೊಂದಿದ್ದು, ಮುಖದಲ್ಲಿ ಬಿಳಿ ಮತ್ತು ಕಪ್ಪು ಮಿಶ್ರಿತ ಉದ್ದನೆಯ ಗಡ್ಡ ಹಾಗೂ ಮೀಸೆ ಇದೆ. ತಲೆಯ ಮುಂಭಾಗ ಮತ್ತು ಮಧ್ಯಭಾಗದಲ್ಲಿ ಕೂದಲು ಉದುರಿದ್ದು, ಎರಡೂ ಬದಿಗಳಲ್ಲಿ ಹಾಗೂ ಹಿಂಭಾಗದಲ್ಲಿ ಕಪ್ಪು-ಬಿಳಿ ಮಿಶ್ರಿತ ಕೂದಲಿದೆ. ಅಪಘಾತದ ವೇಳೆ ಪಾಚಿ ಹಸಿರು ಮಿಶ್ರಿತ ಕಂದು ಬಣ್ಣದ ಹುಡಿ ಜಾಕೆಟ್, ಸೊಂಟದಲ್ಲಿ ಕೆಂಪು ಅಥವಾ ಕೇಸರಿ ಬಣ್ಣದ ಬಟ್ಟೆ ಹಾಗೂ ಎರಡೂ ಬದಿಗಳಲ್ಲಿ ಬಿಳಿ ಪಟ್ಟಿಗಳಿರುವ ಕಡು ನೀಲಿ ಬಣ್ಣದ ಟ್ರ್ಯಾಕ್ ಪ್ಯಾಂಟ್ ಧರಿಸಿದ್ದರು.
ಮೃತದೇಹವನ್ನು ಪ್ರಸ್ತುತ ಪುತ್ತೂರು ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತರ ಭಾವಚಿತ್ರದಲ್ಲಿರುವ ವ್ಯಕ್ತಿಯನ್ನು ಗುರುತಿಸುವವರು ಅಥವಾ ಅವರ ಕುಟುಂಬದವರು, ಸಂಬಂಧಿಕರು ಹಾಗೂ ವಾರಸುದಾರರ ಬಗ್ಗೆ ಮಾಹಿತಿ ಹೊಂದಿರುವವರು ತಕ್ಷಣ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.
ಮಾಹಿತಿಗಾಗಿ ಸಂಪರ್ಕಿಸಿ:
- ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ: 8251232102 / 9480805363
- ಪೊಲೀಸ್ ಕಂಟ್ರೋಲ್ ರೂಂ: 112 / 0824-2220500
ಮೃತರ ಗುರುತು ಪತ್ತೆಹಚ್ಚಿ ಕುಟುಂಬದವರಿಗೆ ಮಾಹಿತಿ ತಲುಪಿಸಲು ಸಾರ್ವಜನಿಕರು ಸಹಕರಿಸುವಂತೆ ಪುತ್ತೂರು ಗ್ರಾಮಾಂತರ ಪೊಲೀಸರು ಕೋರಿದ್ದಾರೆ.


