ಪುತ್ತೂರು: ವ್ಯಕ್ತಿಗೆ ಡಿಜಿಟಲ್ ಅರೆಸ್ಟ್ – ₹1.31 ಕೋಟಿ ವಂಚನೆ!!

ಪುತ್ತೂರು: ಮುಂಬೈ ಪೊಲೀಸ್ ಹಾಗೂ ಎಟಿಎಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿಗಳು, ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ಪುತ್ತೂರು ತಾಲೂಕಿನ ವ್ಯಕ್ತಿಯೊಬ್ಬರಿಗೆ ₹1,31,50,000 ವಂಚಿಸಿರುವ ಘಟನೆ ನಡೆದಿದೆ.ಆರೋಪಿಗಳು ಪಹಲ್ಗಾಮ್ ಹತ್ಯಾಕಾಂಡದ ಆರೋಪಿಗಳಿಗೆ ಹಣ ವರ್ಗಾವಣೆ ಮಾಡಿರುವುದಾಗಿ ಸುಳ್ಳು ಆರೋಪ ಹೊರಿಸಿ, ಬಂಧನದ ಭೀತಿ ಹುಟ್ಟಿಸಿದ್ದರು.

ಬಳಿಕ ವಾಟ್ಸಾಪ್ ವಿಡಿಯೋ ಕರೆಗಳ ಮೂಲಕ ನಿರಂತರವಾಗಿ ಬೆದರಿಸಿ, ಬ್ಯಾಂಕ್ ಖಾತೆಗಳ ಪರಿಶೀಲನೆ ಹಾಗೂ ಹಣದ ದೃಢೀಕರಣದ ನೆಪದಲ್ಲಿ ವಿವಿಧ ಬ್ಯಾಂಕ್ ಖಾತೆಗಳಿಗೆ ಆರ್‌ಟಿಜಿಎಸ್ ಮೂಲಕ ಹಣ ವರ್ಗಾಯಿಸುವಂತೆ ಸೂಚಿಸಿದ್ದರು.ಆರೋಪಿಗಳ ಮಾತುಗಳನ್ನು ನಂಬಿದ ದೂರುದಾರರು, 2026ರ ಸೆಪ್ಟೆಂಬರ್ 2ರಿಂದ ಅಕ್ಟೋಬರ್ 6ರವರೆಗೆ ಹಂತ ಹಂತವಾಗಿ ಒಟ್ಟು ₹1,31,50,000 ಹಣವನ್ನು ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿ ವಂಚನೆಗೊಳಗಾಗಿದ್ದಾರೆ.

ನಂತರ ತಾನು ಸೈಬರ್ ವಂಚನೆಗೆ ಒಳಗಾಗಿರುವುದನ್ನು ಅರಿತ ದೂರುದಾರರು ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ನೀಡಿದ್ದಾರೆ.ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ (CCPS DK) ಅ.ಕ್ರ. 42/2026ರಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(C), 66(D) ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Star Of Kudla

Learn More →

Leave a Reply

Your email address will not be published. Required fields are marked *