ಮಂಗಳೂರು: ಹಬ್ಬದ ಸಂಭ್ರಮದ ನಡುವೆಯೂ ಮಂಗಳೂರಿನ ಸೈಂಟ್ ಆಗ್ನೆಸ್ ಕಾಲೇಜು ಆಡಳಿತ ಮಂಡಳಿಯು ದಸರಾ ರಜೆ ಅವಧಿಯಲ್ಲೇ ಪದವಿ ಸೆಮಿಸ್ಟರ್ ಪರೀಕ್ಷೆಗಳನ್ನು ಆಯೋಜಿಸಿರುವುದಕ್ಕೆ ವಿದ್ಯಾರ್ಥಿಗಳು ಹಾಗೂ ಎಬಿವಿಪಿ ಸಂಘಟನೆಯು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪರೀಕ್ಷೆಯನ್ನು ಬಹಿಷ್ಕರಿಸಿ ಕಾಲೇಜಿನ ಗೇಟ್ ಎದುರು ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.
ನಗರದ ಬೆಂದೂರ್ವೆಲ್ ಬಳಿ ಇರುವ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಇಂದಿನಿಂದ ಅಕ್ಟೋಬರ್ 28ರವರೆಗೆ ಪದವಿ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆಗಳನ್ನು ನಿಗದಿಪಡಿಸಲಾಗಿದೆ. ಕರಾವಳಿಯ ಅತಿ ದೊಡ್ಡ ಸಾಂಪ್ರದಾಯಿಕ ಹಬ್ಬವಾದ ಮಂಗಳೂರು ದಸರಾ ಆಚರಣೆ ಹಾಗೂ ಸಂಭ್ರಮದಲ್ಲಿ ಭಾಗವಹಿಸಬೇಕಿದ್ದ ವಿದ್ಯಾರ್ಥಿಗಳಿಗೆ ಯಾವುದೇ ರಜೆ ನೀಡದೆ, ಇದೇ ಅವಧಿಯಲ್ಲಿ ಪರೀಕ್ಷೆ ನಡೆಸುತ್ತಿರುವುದು ವಿದ್ಯಾರ್ಥಿಗಳಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ದಸರಾ ಹಬ್ಬದ ರಜೆಗಳನ್ನು ಕಡಿತಗೊಳಿಸಿ ಏಕಾಏಕಿ ಪರೀಕ್ಷೆ ಘೋಷಿಸಿರುವುದು ವಿದ್ಯಾರ್ಥಿಗಳ ಹಬ್ಬದ ಉತ್ಸಾಹಕ್ಕೆ ತಣ್ಣೀರು ಎರಚಿದಂತಾಗಿದೆ. ಪರೀಕ್ಷೆಗಳನ್ನು ಮುಂದೂಡುವಂತೆ ಮುಂಚಿತವಾಗಿ ಕಾಲೇಜು ಆಡಳಿತಕ್ಕೆ ಮನವಿ ಸಲ್ಲಿಸಿದ್ದರೂ, ಆಡಳಿತ ಮಂಡಳಿಯು ಸ್ಪಂದಿಸದೆ ಉದ್ದಟತನ ತೋರಿದೆ ಎಂದು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ. ವಿದ್ಯಾರ್ಥಿಗಳ ಈ ನ್ಯಾಯಯುತ ಹೋರಾಟಕ್ಕೆ ಎಬಿವಿಪಿ ವಿದ್ಯಾರ್ಥಿ ಸಂಘಟನೆ ಸಂಪೂರ್ಣ ಬೆಂಬಲ ಸೂಚಿಸಿದ್ದು, ಕಾಲೇಜಿನ ಮುಖ್ಯ ದ್ವಾರದ ಎದುರು ಜಮಾಯಿಸಿ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೂ ದೂರು ನೀಡಲಾಗಿದೆ. ಸದ್ಯ ಕಾಲೇಜಿನ ಗೇಟ್ ಎದುರು ಪ್ರತಿಭಟನೆ ಮುಂದುವರಿದಿದ್ದು, ಕೂಡಲೇ ಪರೀಕ್ಷೆಗಳನ್ನು ಮುಂದೂಡಬೇಕೆಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ.


