ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಮಂಗಳೂರು ಮಹಾನಗರ ಪಾಲಿಕೆ- ಬಡ್ಡಿ ಸಮೇತ 1,375 ಕೋಟಿ ರೂ.ಗೆ ಏರಿದ ಸಾಲದ ಹೊರೆ!

ಮಂಗಳೂರು ಮಹಾನಗರ ಪಾಲಿಕೆಯು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ವರ್ಷಗಳಿಂದ ಮರುಪಾವತಿಸದ ಸಾಲದ ಮೊತ್ತವು ಬಡ್ಡಿ ಸಮೇತ ಬರೋಬ್ಬರಿ 1,375 ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. 20 ವರ್ಷಗಳ ಹಿಂದೆ ಕೈಗೆತ್ತಿಕೊಂಡ ಯೋಜನೆಗೆ ಪಡೆದಿದ್ದ ಸಾಲಕ್ಕೆ ಇದೀಗ ಕೋಟ್ಯಂತರ ರೂಪಾಯಿ ಬಡ್ಡಿ ಸೇರ್ಪಡೆಯಾಗಿದ್ದು, ಪಾಲಿಕೆಯ ಆಡಳಿತ ಮಂಡಳಿಗೆ ಭಾರೀ ತಲೆನೋವಾಗಿ ಪರಿಣಮಿಸಿದೆ. ಈ ಸಾಲದ ಮೊತ್ತಕ್ಕೆ ಇದೀಗ ರಾಜ್ಯ ಸರ್ಕಾರವೇ ಜಮೀನುದಾರನಾಗಿ (ಗ್ಯಾರಂಟಿ) ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ

ಕಳೆದ 2006ರಲ್ಲಿ ಮಂಗಳೂರು ನಗರದಲ್ಲಿ ಒಳಚರಂಡಿ ಮತ್ತು ಕುಡಿಯುವ ನೀರು ಸರಬರಾಜು ಯೋಜನೆಗೆ ಚಾಲನೆ ನೀಡಲಾಗಿತ್ತು. ‘ಕುಂಡ್ಸೆಮ್ಪ್’ (KUNDSEMP) ಮೂಲಕ ಕಾಮಗಾರಿ ಆರಂಭಿಸಿದ್ದ ಈ ಯೋಜನೆಗೆ ಏಷ್ಯನ್ ಡೆವಲಪ್‌‌ಮೆಂಟ್ ಬ್ಯಾಂಕ್ (ADB) ಮುಖಾಂತರ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ಸಂಸ್ಥೆ (KUIDFC) ಯಿಂದ 380 ಕೋಟಿ ರೂಪಾಯಿ ಸಾಲ ಪಡೆಯಲಾಗಿತ್ತು. ನಿಯಮಗಳ ಪ್ರಕಾರ ಯೋಜನೆಯ ಕಾಮಗಾರಿ ಮುಗಿಸಿ ಸಾಲವನ್ನು ಮಂಗಳೂರು ಪಾಲಿಕೆಯೇ ಮರುಪಾವತಿ ಮಾಡಬೇಕಿತ್ತು.

ಆದರೆ, 2006ರಲ್ಲಿ ಸಾಲ ಪಡೆದ ಬಳಿಕ ಮಂಗಳೂರು ಮಹಾನಗರ ಪಾಲಿಕೆಯು ಇದುವರೆಗೆ ಒಂದೇ ಒಂದು ಕಂತಿನ ಸಾಲವನ್ನೂ ಮರುಪಾವತಿಸಿಲ್ಲ. 2026ಕ್ಕೆ ಈ 380 ಕೋಟಿ ರೂಪಾಯಿ ಸಾಲದ ಮರುಪಾವತಿ ಅವಧಿಯು ಮುಕ್ತಾಯಗೊಂಡಿದ್ದು, ಕಳೆದ 20 ವರ್ಷಗಳಲ್ಲಿ ಅಸಲು 380 ಕೋಟಿ ರೂಪಾಯಿಗೆ ಬರೋಬ್ಬರಿ 995 ಕೋಟಿ ರೂಪಾಯಿಗೂ ಹೆಚ್ಚು ಬಡ್ಡಿ ಏರಿಕೆಯಾಗಿದೆ. ಸಾಲ ಮರುಪಾವತಿ ಮಾಡುವಂತೆ KUIDFC ಸಂಸ್ಥೆಯು 24ಕ್ಕೂ ಹೆಚ್ಚು ಬಾರಿ ಡಿಮ್ಯಾಂಡ್ ನೋಟಿಸ್‌ಗಳನ್ನು ನೀಡಿದ್ದರೂ ಪಾಲಿಕೆ ಆಡಳಿತ ಯಾವುದೇ ಕ್ಯಾರೇ ಎಂದಿರಲಿಲ್ಲ.

ಒಂದೆಡೆ ಸಾಲದ ಹೊರೆ ಬೆಟ್ಟದಷ್ಟು ಬೆಳೆದಿದ್ದರೆ, ಇನ್ನೊಂದೆಡೆ 2006ರಲ್ಲಿ ಆರಂಭವಾದ ಒಳಚರಂಡಿ ಕಾಮಗಾರಿಯು ಎರಡು ದಶಕಗಳು ಕಳೆದರೂ ಇನ್ನೂ ಸಂಪೂರ್ಣವಾಗಿ ಪೂರ್ಣಗೊಂಡಿಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಾಲ ಮರುಪಾವತಿಸದೆ ಬೇಜವಾಬ್ದಾರಿ ಪ್ರದರ್ಶಿಸಿದ ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಇದೀಗ ಕೋಟ್ಯಂತರ ರೂಪಾಯಿ ಬಡ್ಡಿಯ ಹೊರೆ ಬಿದ್ದಿದ್ದು, ಸಾಲ ತೀರಿಸಲು ರಾಜ್ಯ ಸರ್ಕಾರವೇ ಮಧ್ಯಪ್ರವೇಶಿಸಬೇಕಾದ ಅನಿವಾರ್ಯತೆ ಎದುರಾಗಿದೆ.

Star Of Kudla

Learn More →

Leave a Reply

Your email address will not be published. Required fields are marked *