ಗುಂಡಿನ ದಾಳಿಗೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮ್ಯಾಡ್ ಸಂಧು ಬಲಿ!! ದಾಳಿ ನಡೆಸಿ ಆರೋಪಿಗಳು ಎಸ್ಕೇಪ್​​

ಅಮೃತಸರ : ಜನಪ್ರಿಯ ಪಂಜಾಬಿ ಸಾಮಾಜಿಕ ಮಾಧ್ಯಮ ಇನ್‌ಫ್ಲುಯೆನ್ಸರ್ ಹಾಗೂ ಮೇಕಪ್ ಕಲಾವಿದ ಮ್ಯಾಡ್ ಸಂಧು ಅವರನ್ನು ಅಮೃತಸರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಲೋಹಾರ್ಕಾ ರಸ್ತೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಸಂಧು ಅವರ ಮೇಲೆ ಹಲವು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಂಧು ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ದೊರೆಯುವ ಮುನ್ನವೇ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ಸುಳಿವುಗಳು ಲಭ್ಯವಾಗಿವೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಭ್‌ಜೋತ್ ಸಿಂಗ್ ವಿರ್ಕ್ ತಿಳಿಸಿದ್ದಾರೆ. ಹತ್ಯೆಯ ಹಿಂದಿನ ಕಾರಣವೇನು ಹಾಗೂ ದಾಳಿಗೆ ಕಾರಣವಾದ ಪರಿಸ್ಥಿತಿಗಳೇನು ಎಂಬುದನ್ನು ಪತ್ತೆಹಚ್ಚಲು ಹಲವು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಆರೋಪಿಗಳನ್ನು ಶೀಘ್ರವೇ ಪತ್ತೆಹಚ್ಚಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ನಡುವೆ, ಗ್ಯಾಂಗ್‌ಸ್ಟರ್ ಗೋಲ್ಡಿ ಧಿಲ್ಲೋನ್ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪೋಸ್ಟ್‌ವೊಂದು ಪ್ರಕರಣಕ್ಕೆ ಮತ್ತೊಂದು ತಿರುವು ನೀಡಿದೆ. ಆದರೆ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ದೃಢಪಡಿಸಲಾಗಿಲ್ಲ. ಸಂಧು ಹತ್ಯೆಯಲ್ಲಿ ಗೋಲ್ಡಿ ಧಿಲ್ಲೋನ್ ಭಾಗಿಯಾಗಿದ್ದಾನೆ ಎಂಬುದನ್ನೂ ಪೊಲೀಸರು ಈವರೆಗೆ ಅಧಿಕೃತವಾಗಿ ಖಚಿತಪಡಿಸಿಲ್ಲ. ವೈರಲ್ ಪೋಸ್ಟ್‌ನಲ್ಲಿ ಸಂಧು ಅವರು ‘ಹೊಸ ಪೀಳಿಗೆಯನ್ನು ದಾರಿ ತಪ್ಪಿಸುತ್ತಿದ್ದರು’ ಎಂದು ಆರೋಪಿಸಲಾಗಿದೆ. ಅವರ ಸಾಮಾಜಿಕ ಮಾಧ್ಯಮದ ವಿಷಯಗಳನ್ನೂ ಟೀಕಿಸಲಾಗಿದ್ದು, ಇಂತಹ ವಿಷಯಗಳನ್ನು ಪ್ರಚಾರ ಮಾಡುವ ಇತರರಿಗೂ ಇದೇ ರೀತಿಯ ಪರಿಣಾಮ ಎದುರಾಗಬಹುದು ಎಂಬ ಬೆದರಿಕೆ ಹಾಕಲಾಗಿದೆ ಎನ್ನಲಾಗಿದೆ.

ಮ್ಯಾಡ್ ಸಂಧು ಯಾರು? : ಮ್ಯಾಡ್ ಸಂಧು ಅವರ ನಿಜವಾದ ಹೆಸರು ಮಧುಸೂದನ್. ಮೇಕಪ್ ಕಲಾವಿದ, ಸ್ಟೈಲಿಸ್ಟ್ ಹಾಗೂ ಸಾಮಾಜಿಕ ಮಾಧ್ಯಮ ಇನ್‌ಫ್ಲುಯೆನ್ಸರ್ ಆಗಿ ಅವರು ಗುರುತಿಸಿಕೊಂಡಿದ್ದರು. ಮೇಕಪ್, ಪಂಜಾಬಿ ಮನರಂಜನಾ ಉದ್ಯಮ ಹಾಗೂ ಲಿಂಗ ಸಂಬಂಧಿತ ವಿಚಾರಗಳ ಕುರಿತು ಚರ್ಚಿಸುವ ಪಾಡ್‌ಕಾಸ್ಟ್‌ಗಳು ಮತ್ತು ವಿವಿಧ ಡಿಜಿಟಲ್ ಕಾರ್ಯಕ್ರಮಗಳಲ್ಲಿ ಅವರು ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗವಿದ್ದು, ಹೋಮೋಫೋಬಿಕ್ ಟ್ರೋಲಿಂಗ್‌ಗೂ ಅವರು ಗುರಿಯಾಗಿದ್ದರು.ಫ್ಯಾಷನ್ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಿದ್ದ ಮ್ಯಾಡ್ ಸಂಧು, ಬಳಿಕ ಮೇಕಪ್ ಕಲಾವಿದ ಹಾಗೂ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿದ್ದರು. ಇದಕ್ಕೂ ಮುನ್ನ ಪಂಜಾಬ್ ಹಾಗೂ ಮುಂಬೈನಲ್ಲಿ ಹಲವು ಸಿನಿಮಾಗಳಲ್ಲಿ ಸ್ಟೈಲಿಸ್ಟ್ ಮತ್ತು ಸಹಾಯಕ ವಸ್ತ್ರ ವಿನ್ಯಾಸಕರಾಗಿ ಕೆಲಸ ಮಾಡಿದ್ದರು. ಸದ್ಯ ಮ್ಯಾಡ್ ಸಂಧು ಹತ್ಯೆ ಪ್ರಕರಣದ ತನಿಖೆ ಮುಂದುವರಿದಿದ್ದು, ದಾಳಿಕೋರರ ಗುರುತು, ಹತ್ಯೆಯ ಉದ್ದೇಶ ಹಾಗೂ ವೈರಲ್ ಆಗಿರುವ ಪೋಸ್ಟ್‌ನ ಸತ್ಯಾಸತ್ಯತೆ ಕುರಿತು ಪೊಲೀಸರ ತನಿಖೆಯಿಂದ ಹೆಚ್ಚಿನ ಮಾಹಿತಿ ಹೊರಬರಬೇಕಿದೆ.

Star Of Kudla

Learn More →

Leave a Reply

Your email address will not be published. Required fields are marked *