ಬಿ.ಕಾಂ ವಿದ್ಯಾರ್ಥಿಯ ಬರ್ಬರ ಹತ್ಯೆ: ಆನ್‌ಲೈನ್‌ನಲ್ಲಿ ಚಾಕು ತರಿಸಿ ಕೊಂದ ನಾಲ್ವರು ಅಪ್ರಾಪ್ತರು!!

ಯುವತಿಯೊಬ್ಬಳಿಗೆ ಅಸಭ್ಯವಾಗಿ ಕಾಮೆಂಟ್ ಮಾಡಿದ ವಿಚಾರಕ್ಕೆ ಆರಂಭವಾದ ಗಲಾಟೆ ಅಂತಿಮವಾಗಿ ಬಿ.ಕಾಂ ವಿದ್ಯಾರ್ಥಿಯ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಮಾತನಾಡಲೆಂದು ಕರೆಸಿ ಚಾಕುವಿನಿಂದ ಇರಿತ

ಯೋಗೇಶ್ ಹತ್ಯೆಯಾದ ದುರ್ದೈವಿ ಬಿ.ಕಾಂ ವಿದ್ಯಾರ್ಥಿ. ಆರೋಪಿಗಳ ಪೈಕಿ ಒಬ್ಬಾತ ಪ್ರೀತಿಸುತ್ತಿದ್ದ ಯುವತಿಯ ಬಗ್ಗೆ ಯೋಗೇಶ್ ಅಸಭ್ಯವಾಗಿ ಕಾಮೆಂಟ್ ಮಾಡಿದ್ದ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡಿದ್ದ ಆತನ ಸ್ನೇಹಿತರ ಗುಂಪು ಯೋಗೇಶ್‌ನನ್ನು ಮುಗಿಸಲು ಮೊದಲೇ ಸಂಚು ರೂಪಿಸಿತ್ತು. ಇದಕ್ಕಾಗಿ ಆನ್‌ಲೈನ್ ಮೂಲಕ ಮಾರಕಾಸ್ತ್ರವನ್ನು (ಚಾಕು) ಆರ್ಡರ್ ಮಾಡಿ ತರಿಸಿಕೊಂಡಿದ್ದರು.

ಯೋಜನೆಯಂತೆ “ಕೂತು ಮಾತನಾಡೋಣ, ಸಮಸ್ಯೆ ಬಗೆಹರಿಸಿಕೊಳ್ಳೋಣ” ಎಂದು ಯೋಗೇಶ್‌ನನ್ನು ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿದ್ದಾರೆ. ಅಲ್ಲಿ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋದಾಗ, ಮೊದಲೇ ತಂದಿಟ್ಟುಕೊಂಡಿದ್ದ ಚಾಕುವಿನಿಂದ ಯೋಗೇಶ್‌ನ ಎದೆಯ ಭಾಗಕ್ಕೆ ಬಲವಾಗಿ ಇರಿದಿದ್ದಾರೆ.

ಎದೆಗೆ ತೀವ್ರ ಪ್ರಮಾಣದಲ್ಲಿ ಇರಿತ ಬಿದ್ದಿದ್ದರಿಂದ ರಕ್ತದ ಮಡುವಿನಲ್ಲಿ ಬಿದ್ದ ಯೋಗೇಶ್‌ನನ್ನು ಸ್ಥಳೀಯರು ಹಾಗೂ ಪೊಲೀಸರು ತಕ್ಷಣ ಆಸ್ಪತ್ರೆಗೆ ಸಾಗಿಸಲು ಯತ್ನಿಸಿದರು. ಆದರೆ ಅತಿಯಾದ ರಕ್ತಸ್ರಾವದಿಂದಾಗಿ ಆತ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾನೆ.

ಘಟನೆ ಸಂಬಂಧ ಅನ್ನಪೂರ್ಣೇಶ್ವರಿನಗರ (ಎಪಿ ನಗರ) ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ವಶಕ್ಕೆ ಪಡೆಯಲಾದ ನಾಲ್ವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಪರಾರಿಯಾಗಿರುವ ಪ್ರಮುಖ ಆರೋಪಿಯ ಬಂಧನಕ್ಕಾಗಿ ಪೊಲೀಸರ ವಿಶೇಷ ತಂಡ ತನಿಖೆ ಮುಂದುವರಿಸಿದೆ.

Star Of Kudla

Learn More →

Leave a Reply

Your email address will not be published. Required fields are marked *