MRPL ಸ್ಫೋಟದ ಹಿಂದೆ ದೈವದ ಕೋಪ??: ತುಳುನಾಡಿನಲ್ಲಿ ಭಾರೀ ಚರ್ಚೆಗೆ ಕಾರಣವಾದ ಕಾಂತೇರಿ ಜುಮಾದಿಯ ನುಡಿ

ಮಂಗಳೂರು: ನೆಲ್ಲಿದಡಿ ಗುತ್ತು, ಇದು ದೈವಗಳ ಕಾರ್ಣಿಕ ಕ್ಷೇತ್ರ, ಧರ್ಮ, ನಿಷ್ಠೆಗೆ ಹಾಗೂ ಕಾರ್ಣಿಕಕ್ಕೆ ಹೆಸರುವಾಸಿ, ನೀಡಿದ ನುಡಿಯಂತೆ ನಡೆದುಕೊಳ್ಳುವುದು ಇಲ್ಲಿನ ದೈವಗಳು, ನೆನ್ನೆ MRPL ಸ್ಫೋಟದ ಘಟನೆಗೂ ಈ ಕ್ಷೇತ್ರದ ದೈವ ನೀಡಿದ ನುಡಿಗೂ ಸಂಬಂಧವಿದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ. ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಆವರಣದಲ್ಲಿ ಸಂಭವಿಸಿದ ಭಾರಿ ಸ್ಫೋಟ ಹಾಗೂ ಅಗ್ನಿ ಅವಘಡದ ಬೆನ್ನಲ್ಲೇ ತುಳುನಾಡಿನಲ್ಲಿ ಹೊಸದೊಂದು ಚರ್ಚೆ ಮುನ್ನೆಲೆಗೆ ಬಂದಿದೆ. ಮಂಗಳೂರು ವಿಶೇಷ ಆರ್ಥಿಕ ವಲಯದ (MSEZ) ವ್ಯಾಪ್ತಿಯಲ್ಲಿರುವ 800 ವರ್ಷಗಳ ಸುದೀರ್ಘ ಇತಿಹಾಸ ಹೊಂದಿದ ಬಜಪೆ ಗ್ರಾಮದ ನೆಲ್ಲಿದಡಿ ಗುತ್ತುವಿನ ‘ಕಾಂತೇರಿ ಜುಮಾದಿ’ ದೈವದ ಆಕ್ರೋಶವೇ ಈ ಅಗ್ನಿ ಅವಘಡಕ್ಕೆ ಕಾರಣವಾಯಿತೇ ಎಂಬ ಪ್ರಶ್ನೆ ಕರಾವಳಿ ಭಾಗದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.

ದೈವಾರಾಧನೆಗೆ ಅಧಿಕಾರಿಗಳು ತಡೆ ಒಡ್ಡಿದ ಸಂದರ್ಭದಲ್ಲಿ, “ನನ್ನ ಸ್ಥಾನ ಕೆಡವಿದರೆ ಬೆಂಕಿ ಸುರಿಸುತ್ತೇನೆ, ನನ್ನ ಮಣ್ಣು ಉಳಿಸಿಕೊಳ್ಳಲು ನನಗೆ ಗೊತ್ತಿದೆ. ಒಂದು ವರ್ಷದೊಳಗೆ ತೀರ್ಮಾನ ಕೊಡುತ್ತೇನೆ” ಎಂದು ದೈವ ನುಡಿದಿದ್ದ ಕಾರಣ, ಈ ಸ್ಫೋಟಕ್ಕೂ ದೈವದ ಎಚ್ಚರಿಕೆಗೂ ನಿಕಟ ಸಂಬಂಧವಿದೆ ಎಂದು ಸ್ಥಳೀಯರು ಹಾಗೂ ದೈವಾರಾಧಕರು ಭಾವಿಸುತ್ತಿದ್ದಾರೆ.

ಕಳೆದ 2025ರಲ್ಲಿ MSEZ ಹಾಗೂ MRPL ವ್ಯಾಪ್ತಿಯ ಅಧಿಕಾರಿಗಳು ಮತ್ತೆ ತಗಾದೆ ತೆಗೆದು, ನೆಲ್ಲಿದಡಿ ಗುತ್ತಿನ ದೈವಕ್ಕೆ ಹೂವು-ನೀರು ಇಡಲು ಹಾಗೂ ಸಂಕ್ರಮಣದ ನಿತ್ಯ ಪೂಜೆಗೆ ಗೇಟ್‌ನಲ್ಲೇ ತಡೆ ಒಡ್ಡಿದ್ದರು. ತುಳುನಾಡಿನ ಅತ್ಯಂತ ಪ್ರಸಿದ್ಧ ದೈವಸ್ಥಾನಕ್ಕೆ ಪ್ರವೇಶ ನಿರ್ಬಂಧಿಸಿದ್ದು ಸಾರ್ವಜನಿಕವಾಗಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ‘ನೆಲ್ಲಿದಡಿ ಗುತ್ತು ಉಳಿಸಿ’ ಅಭಿಯಾನದ ಬಳಿಕ ಪಾಸ್ ನೀಡಿ ದೈವಾರಾಧನೆಗೆ ಸೀಮಿತ ಅವಕಾಶ ನೀಡಲಾಗಿತ್ತು. ಆ ಸಂದರ್ಭದಲ್ಲಿ ದರ್ಶನ ಸೇವೆಯ ವೇಳೆ ಜುಮಾದಿ ದೈವವು ನೆಲ್ಲಿದಡಿ ಗುತ್ತುವಿನ ಮುಖ್ಯಸ್ಥ ಚೌಟರಿಗೆ ಅಭಯ ನೀಡುತ್ತಾ, ಅಧಿಕಾರಿಗಳ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. “ನನ್ನ ಸ್ಥಾನ ಕೆಡವಲು ಬಂದವರಿಗೆ ಒಂದು ವರ್ಷದೊಳಗೆ ತೀರ್ಮಾನ ಕೊಡುತ್ತೇನೆ. ಜಾಗವನ್ನು ದೈವಸ್ಥಾನದ ಹೆಸರಿಗೆ ಬರೆದುಕೊಡದಿದ್ದರೆ ಬೆಂಕಿ ಸುರಿಸುತ್ತೇನೆ!” ಎಂದು ನಾಲ್ಕು ತಿಂಗಳ ಹಿಂದೆಯಷ್ಟೇ ದೈವ ಎಚ್ಚರಿಕೆ ನೀಡಿತ್ತು ಎನ್ನಲಾಗಿದೆ.

Star Of Kudla

Learn More →

Leave a Reply

Your email address will not be published. Required fields are marked *