ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರವಾಗಿ ಕೊಲೆಗೆ ಸಂಚು, ₹24 ಲಕ್ಷ ಸುಪಾರಿ ಆಫರ್ ಆರೋಪ- FIR ದಾಖಲು

ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತಿಕಾರ ತೀರಿಸಿಕೊಳ್ಳಲು ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲು ರೂಪಿಸಿದ್ದ ಭಾರಿ ಸಂಚನ್ನು ಮಂಗಳೂರಿನ ಬಜಪೆ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಉಡುಪಿಯ ಸುದೀಪ್ ಸೇರಿದಂತೆ ಇತರ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಎಫ್‌ಐಆರ್‌ನಲ್ಲಿ ನೀಡಿರುವ ವಿವರಗಳ ಪ್ರಕಾರ, ಉಡುಪಿಯ ಸುದೀಪ್ ಹಾಗೂ ಮಹೇಶ್ ಎಂಬವರು ಕೊಲೆ ಸಂಚಿನ ರೂವಾರಿಗಳಾಗಿದ್ದಾರೆ. ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತಿಕಾರವಾಗಿ ಮುಸ್ಲಿಂ ವ್ಯಕ್ತಿಯನ್ನು ಕೊಲೆ ಮಾಡಲು ಯುವಕರಿಗೆ ಪ್ರಚೋದನೆ ನೀಡಲಾಗಿತ್ತು. ಈ ಕೃತ್ಯ ಎಸಗಲು ಬರೋಬ್ಬರಿ 24 ಲಕ್ಷ ರೂಪಾಯಿ ಸುಪಾರಿ ಹಣ, ಜೈಲಿಗೆ ಹೋದರೆ ಮನೆಗೆ ತಿಂಗಳಿಗೆ 5,೦೦೦ ರೂ. ಮೌಲ್ಯದ ದಿನಸಿ ಹಾಗೂ 15,೦೦೦ ರೂ. ಮನೆ ಖರ್ಚು ನೀಡುವುದಾಗಿ ಆಮಿಷ ಒಡ್ಡಲಾಗಿತ್ತು ಎಂದು ಎಫ್‌ಐಅರ್‌ನಲ್ಲಿ ವಿವರಿಸಲಾಗಿದೆ.

ದೂರುದಾರ ಅಭಿಷೇಕ್ ಹಾಗೂ ಆತನ ಸ್ನೇಹಿತ ಕೀರ್ತನ್ ಎಂಬವರು ಸ್ಕಾರ್ಪಿಯೋ ಕಾರಿನಲ್ಲಿ ತೆರಳಿ ಉಡುಪಿಯ ತ್ರಿವೇಣಿ ಹೋಟೆಲ್ ಹಾಗೂ ಕಾರ್ಕಳದ ಅತೂರು ಚರ್ಚ್ ಬಳಿ ಸಂಚಿನ ಸಭೆ ನಡೆಸಿದ್ದರು. ಸುದೀಪ್ ವಾಟ್ಸಾಪ್ ಮೂಲಕ ಕಳುಹಿಸಿದ ಮಂಗಳೂರಿನ ಬಜಪೆ ಕಿನ್ನಿಪದವಿನ ವ್ಯಕ್ತಿಯ ಫೋಟೋ ಆಧಾರದ ಮೇಲೆ, ಆತನ ಚಲನವಲನದ ಬಗ್ಗೆ ಮಾಹಿತಿ ಕಲೆಹಾಕಲಾಗಿತ್ತು. ಕೊಲೆ ಕೃತ್ಯಕ್ಕಾಗಿ ಸುಳ್ಯದ ಚಿಂತನ್ ಎಂಬಾತನನ್ನೂ ಸಂಪರ್ಕಿಸಿ, ಮನೆಯಲ್ಲಿದ್ದ ಎರಡು ತಲವಾರ್‌ಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲಾಗಿತ್ತು.

ಸಂಚು ಮುಕ್ತಾಯ ಹಂತಕ್ಕೆ ತಲುಪಿದ್ದಾಗ, ದೂರುದಾರ ಅಭಿಷೇಕ್ ಅವರ ಹೆಂಡತಿಗೆ ಮಗು ಜನಿಸಿದ ಕಾರಣ ಮನ ಪರಿವರ್ತನೆಯಾಗಿದೆ. ಅಪರಾಧ ಎಸಗಿದರೆ ಜೈಲು ಪಾಲಾಗಬೇಕಾಗುತ್ತದೆ ಎಂಬ ಭಯದಿಂದ ಕೃತ್ಯ ನಡೆಸುವುದನ್ನು ಕೈಬಿಟ್ಟಿದ್ದರು. ಆದರೆ ಆರೋಪಿಗಳಾದ ಸುದೀಪ್ ಹಾಗೂ ಮಹೇಶ್ ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದು, ನಿರಂತರವಾಗಿ ಕೃತ್ಯ ಎಸಗುವಂತೆ ವಾಟ್ಸಾಪ್ ಮೂಲಕ ಒತ್ತಡ ಹೇರುತ್ತಿದ್ದರು. ಇದರಿಂದ ಹೆದರಿದ ಅಭಿಷೇಕ್ ಬಜಪೆ ಪೊಲೀಸ್ ಠಾಣೆಗೆ ತೆರಳಿ, ಸುದೀಪ್ ಹಾಗೂ ಇತರರ ವಿರುದ್ಧ ದೂರು ನೀಡಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಬಜಪೆ ಪೊಲೀಸರು, ವಾಟ್ಸಾಪ್ ಚಾಟ್‌ಗಳು, ಸ್ಕ್ರೀನ್‌ಶಾಟ್‌ಗಳನ್ನು ಸಾಕ್ಷ್ಯವಾಗಿ ಪಡೆದುಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

Star Of Kudla

Learn More →

Leave a Reply

Your email address will not be published. Required fields are marked *