ಮಂಗಳೂರು: ನಗರದ ಎಮ್ಮೆಕೆರೆಯ ರಾಮ ಲಕ್ಷ್ಮೀನಾರಾಯಣ ಕನ್ವೆನ್ನನ್ ಹಾಲ್ನಲ್ಲಿ ಬಾಲ್ಕನಿಯ ತಡೆಗೋಡೆ ಕುಸಿದು ಬಿದ್ದು ಗಾಯಗೊಂಡಿದ್ದ ಸೇಂಟ್ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಶಮ್ಮಾಝ್ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಶಮ್ಮಾಝ್ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ವಿವರ:
ಮಂಗಳೂರು ನಗರದ ಎಮ್ಮೆಕೆರೆ ಕ್ರಾಸ್ ಸಮೀಪದ ರಾಮ ಲಕ್ಷ್ಮೀ ಹಾಲ್ನಲ್ಲಿ ಆಧಾರ ಗೋಡೆ ಕುಸಿದು ಐವರು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಸೆಪ್ಟೆಂಬರ್ 26ರ ಶನಿವಾರ ನಡೆದಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಭಾಭವನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಈ ವೇಳೆ ಅತಿಯಾದ ಜನದಟ್ಟಣೆಯಿಂದಾಗಿ ಕಾರಿಡಾರ್ನಲ್ಲಿ ನಿಂತಿದ್ದ ಕೆಲ ವಿದ್ಯಾರ್ಥಿಗಳು ಆಧಾರ ಗೋಡೆಗೆ ಒರಗಿ ನಿಂತಿದ್ದರು ಎನ್ನಲಾಗಿದೆ.
ದುರ್ಬಲವಾಗಿದ್ದ ಗೋಡೆ ಏಕಾಏಕಿ ಕುಸಿದ ಪರಿಣಾಮ ಹಲವು ವಿದ್ಯಾರ್ಥಿಗಳು ಕೆಳಗೆ ಬಿದ್ದು ಗಾಯಗೊಂಡಿದ್ದಾರು.