ಶಾರ್ಜಾದಲ್ಲಿ ಕೊಲೆಗೀಡಾದ ಕುಂದಾಪುರದ ಅಲ್ವಿನ್ ಪ್ರಕಾಶ್‌ ಮೃತದೇಹ ಮಂಗಳೂರಿಗೆ; ತನಿಖೆ ತೀವ್ರ

ಕುಂದಾಪುರ: ಯುಎಇಯ ಶಾರ್ಜಾದಲ್ಲಿ ಅನುಮಾನಾಸ್ಪದವಾಗಿ ಕೊಲೆಗೀಡಾಗಿದ್ದ ಕುಂದಾಪುರ ಪುರಸಭೆ ವ್ಯಾಪ್ತಿಯ ಹೊನ್ನನಕೇರಿ ನಿವಾಸಿ ಅಲ್ವಿನ್ ಪ್ರಕಾಶ್ ಕುಂದರ್ (50) ಅವರ ಪಾರ್ಥಿವ ಶರೀರ ಶುಕ್ರವಾರ (ಸೆಪ್ಟೆಂಬರ್ 25) ಶಾರ್ಜಾದಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದೆ. ಗುರುವಾರ ರಾತ್ರಿ 11 ಗಂಟೆಗೆ ಶಾರ್ಜಾದಿಂದ ಹೊರಟ ವಿಮಾನದಲ್ಲಿ ಪ್ರಕಾಶ್ ಅವರ ಸಂಬಂಧಿಕರು ಹಾಗೂ ಅವರು ಉದ್ಯೋಗದಲ್ಲಿದ್ದ ಕಂಪೆನಿಯ ಪ್ರತಿನಿಧಿಗಳು ಮೃತದೇಹದೊಂದಿಗೆ ಮಂಗಳೂರಿಗೆ ಆಗಮಿಸಿದ್ದು, ಹುಟ್ಟೂರಾದ ಕುಂದಾಪುರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ

ಅಲ್ವಿನ್ ಪ್ರಕಾಶ್ ಕುಂದರ್ ಅವರು ಕಳೆದ 14 ವರ್ಷಗಳಿಂದ ಶಾರ್ಜಾದಲ್ಲಿ ನೆಲೆಸಿದ್ದು, ಹೆಸರಾಂತ ‘ಸಿಮನ್ಸ್’ ಸಂಸ್ಥೆಯ ಖಾಸಗಿ ವಿಮಾನಯಾನ ವಿಭಾಗದ ಟರ್ಮಿನಲ್-2 ನಲ್ಲಿ ಹಿರಿಯ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಆಗಸ್ಟ್ 12 ರಂದು ಶಾರ್ಜಾದ ‘ಅಲ್ ಅಮಿನ್’ ರಸ್ತೆಯ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಲಾಗಿದ್ದ ಅವರದ್ದೇ ಕಾರಿನಲ್ಲಿ ಅಲ್ವಿನ್ ಪ್ರಕಾಶ್ ಅವರ ಮೃತದೇಹವು ಸಂಪೂರ್ಣವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ದುಷ್ಕರ್ಮಿಗಳು ಅವರನ್ನು ಭೀಕರವಾಗಿ ಕೊಲೆ ಮಾಡಿ ಕಾರಿನಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಪ್ರಕಾಶ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಜೊತೆಯಲ್ಲೇ ವಾಸವಿದ್ದ ಪತ್ನಿ ಹಾಗೂ ಪುತ್ರ ಪ್ರಸ್ತುತ ನಿಗೂಢವಾಗಿ ನಾಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಘಟನೆ ನಡೆದು ದಿನಗಳು ಕಳೆದರೂ ಕುಟುಂಬಸ್ಥರ ಸುಳಿವು ಸಿಗದಿರುವುದು ಕೊಲೆ ಪ್ರಕರಣದ ತನಿಖೆಯನ್ನು ಸಂಕೀರ್ಣಗೊಳಿಸಿದೆ.

Star Of Kudla

Learn More →

Leave a Reply

Your email address will not be published. Required fields are marked *