ಧರ್ಮಸ್ಥಳ ಸಮೀಪದ ಬಂಗ್ಲೆಗುಡ್ಡೆ ಮೀಸಲು ಅರಣ್ಯ ಪ್ರದೇಶಕ್ಕೆ ಇಬ್ಬರು ಯುವಕರು ಅಕ್ರಮವಾಗಿ ಪ್ರವೇಶಿಸಿದ ಆರೋಪ ಕೇಳಿಬಂದಿದ್ದು, ಈ ವೇಳೆ ಯುವಕರು ಹಾಗೂ ಸ್ಥಳೀಯರ ನಡುವೆ ವಾಗ್ವಾದ ನಡೆದಿದೆ.
ಅಕ್ರಮವಾಗಿ ಪ್ರವೇಶಿಸಿದವರನ್ನು ಯೂಟ್ಯೂಬರ್ ಅಭಿಷೇಕ್ ಹಾಗೂ ಬೆಂಗಳೂರಿನ ವೆಬ್ ಪತ್ರಕರ್ತ ಶ್ರೇಯಸ್ ಎಂದು ಗುರುತಿಸಲಾಗಿದೆ. ನಿಷೇಧಿತ ಪ್ರದೇಶದಲ್ಲಿ ಇಬ್ಬರು ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎನ್ನಲಾಗಿದೆ.
ಬಂಗ್ಲೆಗುಡ್ಡೆ ಸದ್ಯ ಕಟ್ಟುನಿಟ್ಟಿನ ಮೀಸಲು ಅರಣ್ಯ ಪ್ರದೇಶವಾಗಿದ್ದು, ಇಲ್ಲಿಗೆ ಪ್ರವೇಶಿಸಲು ಅರಣ್ಯ ಇಲಾಖೆಯ ಪೂರ್ವಾನುಮತಿ ಕಡ್ಡಾಯವಾಗಿದೆ. ಅನುಮತಿ ಇಲ್ಲದೆ ಪ್ರವೇಶಿಸಿದ ಹಿನ್ನೆಲೆಯಲ್ಲಿ ಪೊಲೀಸರು ಇಬ್ಬರನ್ನೂ ಪ್ರಾಥಮಿಕ ವಿಚಾರಣೆಗೆ ಒಳಪಡಿಸಿದ್ದಾರೆ. ಬಳಿಕ ಪ್ರಕರಣವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದ್ದು, ಅರಣ್ಯ ಕಾಯ್ದೆಯಡಿ ಅಕ್ರಮ ಪ್ರವೇಶಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.


