

ಪುತ್ತೂರು: ದರ್ಬೆಯಲ್ಲಿ ಆ.21ರಂದು ಅಂಗಡಿಯೊಂದರಲ್ಲಿ ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಧಾರ್ಮಿಕ ವೈಮನಸ್ಸು ಹಾಗೂ ಸಾರ್ವಜನಿಕರಲ್ಲಿ ಭಯ ಉಂಟುಮಾಡುವಂತಹ ಸಂದೇಶ ಪ್ರಸಾರ ಮಾಡಿ ಬಂದ್ಗೆ ಕರೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.

‘Sanjeeva Matandoor’ ಹೆಸರಿನ ಫೇಸ್ಬುಕ್ ಖಾತೆಯಿಂದ ಬಂದ್ಗೆ ಕರೆ ನೀಡಲಾಗಿದ್ದು, ಜನರು ಅಕ್ರಮವಾಗಿ ಸೇರಿ ಕಾನೂನುಬಾಹಿರ ಕೃತ್ಯ ಎಸಗಲು ಪ್ರೇರಣೆ ನೀಡಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 102/2026ರಂತೆ BNS 2023ರ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನೆ ನಡೆಸುವುದು ಎಲ್ಲರ ಹಕ್ಕಾಗಿದ್ದು, ನಿಯಮಾನುಸಾರ ಪೊಲೀಸ್ ಇಲಾಖೆ ಅನುಮತಿ ನೀಡಲಿದೆ. ಆದರೆ ಪ್ರತಿಭಟನೆಯ ದಿನಾಂಕ ಮತ್ತು ಸಮಯವನ್ನು ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುವ ಅಥವಾ ಇತರ ಉದ್ದೇಶದಿಂದ ನಿಗದಿಪಡಿಸಿರುವುದು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ಎಚ್ಚರಿಸಿದೆ.


